ಮಧ್ಯಮ ವೇಗಿ ಅರ್ಷದೀಪ್ ಸಿಂಗ್ ಮಾರಕ ದಾಳಿ ನೆರವಿನಿಂದ ಭಾರತ ತಂಡ ಟಿ-20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ 13 ರನ್ ಗಳ ರೋಚಕ ಜಯ ಸಾಧಿಸಿದೆ.
ಪರ್ತ್ ನಲ್ಲಿ ಸೋಮವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 158 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಪಶ್ಚಿಮ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು.
ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಆರಂಭದಲ್ಲೇ 4 ವಿಕೆಟ್ ಹಂಚಿಕೊಂಡು ಆಸ್ಟ್ರೇಲಿಯಾಗೆ ಆಘಾತ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಫನ್ನಿಂಗ್ 53 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 59 ರನ್ ಗಳಿಸಿ ನಡೆಸಿದ ಹೋರಾಟ ಫಲ ನೀಡಲಿಲ್ಲ.
ಕೆಮರೂನ್ ಬೆನ್ ಕ್ರಾಫ್ಟ್ (22), ಹಮೀಶ್ (19), ಜಹೆ ರಿಚರ್ಡನ್ಸನ್ (12) ಮ್ಯಾಥ್ಯೂ ಕೈಲೆ (13) ಹೋರಾಟ ಫಲ ನೀಡಲಿಲ್ಲ. ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 2, ಯಜುರ್ವೆಂದ್ರ ಚಾಹಲ್ 2 ವಿಕೆಟ್ ಗಳಿಸಿದರು.
ಸೂರ್ಯಕುಮಾರ್ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಸೂರ್ಯಕುಮಾರ್ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕಿತು. ಸೂರ್ಯಕುಮಾರ್ 35 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 52 ರನ್ ಸಿಡಿಸಿದರು.
ದೀಪಕ್ ಹೂಡಾ (22), ಹಾರ್ದಿಕ್ ಪಾಂಡ್ಯ (27), ದಿನೇಶ್ ಕಾರ್ತಿಕ್ (19) ತಕ್ಕಮಟ್ಟಿಗೆ ಪ್ರದರ್ಶನ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ (3) ಮತ್ತು ರಿಷಭ್ ಪಂತ್ (9) ವಿಫಲರಾದರು.