ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಇಂದು ಭಾನುವಾರ ಮುಖಾಮುಖಿ ಆಗಲಿವೆ. ಉಭಯ ತಂಡಗಳ ನಡುವಣ ಈ ಕಾದಾಟ ವೀಕ್ಷಿಸಲು ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿದೆ.
ರೋಹಿತ್ ಶರ್ಮಾ ಮತ್ತು ಬಾಬರ್ ಅಜಂ ತಮ್ಮ ತಂಡಗಳನ್ನು ಪಂದ್ಯಾವಳಿಯಲ್ಲಿ ಗೆಲುವಿನ ಆರಂಭವನ್ನು ಪಡೆಯಲು ಎದುರು ನೋಡುತ್ತಿದ್ದಾರೆ. ಆಗಸ್ಟ್ 27ರ ಶನಿವಾರದಿಂದ ಈ ಬಾರಿಯ ಏಷ್ಯಾಕಪ್ ಟೂರ್ನಿ ಆರಂಭವಾಗಿದ್ದು, ಸೆಪ್ಟೆಂಬರ್ 11ರ ಭಾನುವಾರದಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿ ಅಂತ್ಯಗೊಳ್ಳಲಿದೆ.
ಕಳೆದ ಎರಡು ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಗಳಿಸದ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯ ಮೇಲೆ ಸಂಪೂರ್ಣ ಗಮನ ಕೇಂದ್ರೀಕೃತವಾಗಿದೆ.
ಇನ್ನು ಏಷ್ಯಾ ಕಪ್ ಇತಿಹಾಸದಲ್ಲಿ (ಟಿ20 ಮತ್ತು ಒಡಿಐ ಎರಡೂ ಮಾದರಿಗಳಲ್ಲಿ) ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 14 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 8 ಪಂದ್ಯ ಗೆದ್ದರೆ, ಪಾಕ್ ತಂಡಕ್ಕೆ 5 ಗೆಲುವು ಸಿಕ್ಕಿದೆ.
ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿ ಶ್ರೀಲಂಕಾ ನೆಲದಲ್ಲಿ ನಡೆಯಬೇಕಿತ್ತು. ಆದರೆ, ಶ್ರೀಲಂಕಾ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಟೂರ್ನಿಯನ್ನು ಇದೀಗ ಯುಎಇಗೆ ಸ್ಥಳಾಂತರಿಸಲಾಗಿದೆ. ಪಂದ್ಯ ಇಂದು ಸಂಜೆ 7:30ಕ್ಕೆ ಶುರುವಾಗಲಿದೆ.