ಆರಂಭಿಕನಾಗಿ ಬಡ್ತಿ ಪಡೆದ ನಂತರ ಚೇತೇಶ್ವರ್ ಪೂಜಾರ ಮತ್ತು ರಿಷಭ್ ಪಂತ್ ಸಿಡಿಸಿದ ಅರ್ಧಶತಕಗಳ ಹೊರತಾಗಿಯೂ ಭಾರತ ತಂಡ 5ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ ನಲ್ಲಿ 245 ರನ್ ಗಳಿಗೆ ಪತನಗೊಂಡಿದೆ. ಈ ಮೂಲಕ ಆತಿಥೇಯ ಇಂಗ್ಲೆಂಡ್ ತಂಡ ಗೆಲ್ಲಲು 377 ರನ್ ಗಳಿಸಬೇಕಾಗಿದೆ.
ಬರ್ಮಿಂಗ್ ಹ್ಯಾಂ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಸೋಮವಾರ 3 ವಿಕೆಟ್ ಗೆ 123 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಬೆನ್ ಸ್ಟೋಕ್ಸ್ ಅವರ ಮಾರಕ ದಾಳಿಗೆ ತತ್ತರಿಸಿ ಭೋಜನ ವಿರಾಮದ ನಂತರ 245 ರನ್ ಗಳಿಗೆ ಪತನಗೊಂಡಿತು.
ಮೊದಲ ಇನಿಂಗ್ಸ್ ನಲ್ಲಿ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ತಂಡ ಒಂದೂವರೆ ದಿನದಾಟದಲ್ಲಿ 377 ರನ್ ಗಳಿಸಬೇಕಾಗಿದೆ.
ಮೊದಲ ಇನಿಂಗ್ಸ್ ನಲ್ಲಿ ವಿಫಲರಾಗಿದ್ದ ಪೂಜಾರ ಎರಡನೇ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದರು. ಪೂಜಾರ 168 ಎಸೆತಗಳಲ್ಲಿ 8 ಬೌಂಡರಿ ಸೇರಿದ 66 ರನ್ ಗಳಿಸಿ ಔಟಾದರೆ, ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ರಿಷಭ್ ಪಂತ್ ಎರಡನೇ ಇನಿಂಗ್ಸ್ ನಲ್ಲೂ ಜವಾಬ್ದಾರಿಯುವ ಪ್ರದರ್ಶನ ನೀಡಿ 86 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 57 ರನ್ ಸಿಡಿಸಿದರು.