ಭಾರತ ಹಾಕಿ ತಂಡ 0-7 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.
ಬರ್ಮಿಂಗ್ ಹ್ಯಾಂನಲ್ಲಿ ಸೋಮವಾರ ನಡೆದ ಫೈನಲ್ ನಲ್ಲಿ ಭಾರತ ಕಳಪೆ ಪ್ರದರ್ಶನ ನೀಡುವ ಮೂಲಕ ಒಂದೂ ಗೋಲು ದಾಖಲಿಸದೇ ನಿರಾಸೆ ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ಆಸ್ಟ್ರೇಲಿಯಾ ಸುಲಭ ಜಯದೊಂದಿಗೆ ಚಿನ್ನದ ಪದಕ ಬಾಚಿಕೊಂಡಿತು.
6 ಬಾರಿಯ ಕಾಮನ್ ವೆಲ್ತ್ ಚಾಂಪಿಯನ್ ಆಸ್ಟ್ರೇಲಿಯಾ ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದರೆ, ಮೂರನೇ ಬಾರಿ ಫೈನಲ್ ಪ್ರವೇಶಿಸಿದ್ದ ಭಾರತ ಚಿನ್ನದ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿತು. ಇದಕ್ಕೂ ಮುನ್ನ ಭಾರತ ೨೦೧೦ ಮತ್ತು ೨೦೧೪ಲ್ಲಿ ಫೈನಲ್ ತಲುಪಿತ್ತು.
ಭಾರತ 3-2 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಆಸ್ಟ್ರೇಲಿಯಾ ಸೆಮಿಫೈನಲ್ ನಲ್ಲಿ 3-2ರಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಜಯಭೇರಿ ಬಾರಿಸಿತ್ತು.