ಸರಕಾರ, ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ದರೆ ಆಗಸ್ಟ್ ನೊಳಗೆ 10 ಲಕ್ಷ ಜನರ ಸಾವಿನ ಸೂಚನೆ..!

ದೇಶದಲ್ಲಿ ಪರಿಸ್ಥಿತಿ ಹೀಗೇ ಮುಂದುವರಿದರೆ ಆಗಸ್ಟ್ ಮುಗಿಯುವಷ್ಟರಲ್ಲಿ ಕೋವಿಡ್ 19 ಮಹಾಮಾರಿಯು 10 ಲಕ್ಷ ಮಂದಿಯನ್ನು ಬಲಿಪಡೆದುಕೊಳ್ಳಲಿದೆ..!

ಇನಿಸ್ಟಿಟ್ಯೂಟ್ ‍ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುವೇಶನ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ನೀಡಿರುವ ಎಚ್ಚರಿಕೆ.

ಭಾರತದಲ್ಲಿ ಕರೋನಾ ಪಿಡುಗು ಈಗಾಗಲೇ 2.40 ಲಕ್ಷ ಮಂದಿಯ ಪ್ರಾಣವನ್ನು ಆಪೋಷಣ ತೆಗೆದುಕೊಂಡಾಗಿದೆ. ಸದ್ಯ 4 ಲಕ್ಷಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ವಾಷಿಂಗ್ಟನ್‍ವಿಶ್ವವಿದ್ಯಾಲಯದ ಇನಿಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುವೇಷನ್ (ಐಎಚ್ಎಂಇ) ಹೇಳಿಕೆಯನ್ನು ನಂಬುವುದಾದರೆ ಭಾರತದಲ್ಲಿ ಮೇ 5 ರವರೆಗೆ ಸರಕಾರ ತೋರಿಸಿದ ಲೆಕ್ಕದ ಮೂರು ಪಟ್ಟು (2.96 ಪಟ್ಟು) ಅಂದರೆ 6,54,395 ಮಂದಿ ಕರೋನಾದಿಂದ ಮೃತಪಟ್ಟಿದ್ದಾರೆ..!

ಅಮೆರಿಕ ಸರಕಾರದ ಅಧಿಕೃತ ಅಂಕಿಅಂಶದ ಪ್ರಕಾರ ಆ ದೇಶದಲ್ಲಿ 5,74,043 ಕರೋನಾಗೆ ಬಲಿಯಾಗಿದ್ದಾರೆ. ಆದರೆ ಅಮೆರಿಕದಲ್ಲಿ ಅಧಿಕೃತ ಅಂಕಿಸಂಖ್ಯೆಯ 1.7 ಪಟ್ಟು ಜನ, ಅಂದರೆ 9,05,289 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದು ಐಎಚ್ಎಂಇ ಹೇಳುತ್ತಿದೆ.

ಅದರಲ್ಲಿ ಸರಕಾರದ ಅಂಕಿಅಂಶವನ್ನೇ ಪರಿಗಣಿಸಿದರೆ, ಕೋವಿಡ್ ಮೊದಲ ಅಲೆ ಆರಂಭವಾದಗಿನಿಂದ ಈವರೆಗೆ 2.19 ಕೋಟಿಗೂ ಅಧಿಕ ಮಂದಿ ಭಾರತದಲ್ಲಿ ಕೋವಿಡ್ಗೆ ತುತ್ತಾಗಿದ್ದಾರೆ. ಅವರಲ್ಲಿ 2.15 ಕೋಟಿ ಮಂದಿ ಗುಣಮಖರಾಗಿದ್ದಾರೆ ಇಲ್ಲವೇ ಗುಣಮುಖರಾಗುತ್ತಿದ್ದಾರೆ.

ಕೋವಿಡ್ ಎರಡನೇ ಅಲೆಯಲ್ಲ, ಸುನಾಮಿ:

ಭಾರತದಲ್ಲಿ ಕೋವಿಡ್ 19 ಅಲೆಯು, ದೇಶದ ಹಲವು ಭಾಗಗಳಲ್ಲಿ ಸುನಾಮಿಯಾಗಿ ಅಪ್ಪಳಿಸುತ್ತಿದೆ. ಹರ್ಯಾಣದ ರೋಹ್ಟಕ್ ಎಂಬ ಜಿಲ್ಲೆಯಲ್ಲಿ ಕೋವಿಡ್ ಗೆ ಸಂಬಂಧಿಸಿದ ಅಧಿಕೃತ ಅಂಕಿಅಂಶದ ಪ್ರಕಾರ, ಅಲ್ಲಿ ಕೋವಿಡ್ ನಿಂದ ಈವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಕೇವಲ 267! ಆದರೆ ಆ ಜಿಲ್ಲೆಯ ತಿತೋಲಿ ಎಂಬ ಒಂದೇ ಹಳ್ಳಿಯಲ್ಲಿ ಕಳೆದ 15 ದಿನಗಳಲ್ಲಿ 40 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಸಾವಿನ ಅಧಿಕೃತ ಸಂಖ್ಯೆಗಳಲ್ಲಿ ಗೋಲ್ ಮಾಲ್‍ಆಗುತ್ತಿರುವುದನ್ನು ಇಂಥ ಘಟನೆಗಳು ಸಾಕ್ಷೀಕರಿಸುತ್ತಿವೆ.

ವ್ಯಾಪಕವಾಗಿ ಹಬ್ಬುತ್ತಿರುವ ಕೋವಿಡ್ ಪಿಡುಗಿನ ಎರಡನೇ ಅಲೆ ಎಂಬ ಸುನಾಮಿಗೆ ಕಂಗಾಲಾಗಿರುವ ಭಾರತದ ಜನರ ರಕ್ಷಣೆಗೆ ದೇಶದ ನ್ಯಾಯಾಲಯಗಳು, ಮಾಧ್ಯಮ, ಸಾಮಾಜಿಕ ಜಾಲತಾಣಗಳು ನೀಡುತ್ತಿರುವ ಕೊಡುಗೆಗಳು ಬಹಳ ದೊಡ್ಡದಿವೆ. ಕೋವಿಡ್ ಎರಡನೆಯ ಅಲೆಯನ್ನು ನಿರ್ವಹಿಸುವಲ್ಲಿ ಆಗಾಗ ಎಡವುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ, ನಾನಾ ರಾಜ್ಯಗಳಿಗೆ ನ್ಯಾಯಾಲಯಗಳು ಚುರುಕು ಮುಟ್ಟಿಸುತ್ತಿವೆ.

ಸಹಜವಾಗಿಯೇ ಕೋರ್ಟ್ ಬೀಸಿದ ಚಾಟಿಗೆ ಎಚ್ಚೆತ್ತುಕೊಂಡಿರುವ ಸರಕಾರಗಳ ಯಂತ್ರಗಳು ಒಂದಿಷ್ಟು ಚುರುಕಾದಂತೆ ಕಾಣಿಸುತ್ತಿದ್ದರೂ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬಂತಾಗುತ್ತಿದೆ. ಪ್ರತಿದಿನ ಅಗಾಧ ಪ್ರಮಾಣದಲ್ಲಿ ಔಷಧಗಳು, ಆಮ್ಲಜನಕ ಪೂರೈಕೆ, ಬೆಡ್ಗಳ ಕೊರತೆಯಿಂದ ಈಗಲೂ ನೂರಾರು ಮಂದಿ ಪ್ರಾಣ ಕಳೆದುಕೊ‍ಳ್ಳುತ್ತಿದ್ದಾರೆ. ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಕೋವಿಡ್ ಪೀ ಡಿತರ ಪ್ರಾಣ ಉಳಿಸಲು ಆಸ್ಪತ್ರೆಗಳು, ವೈದ್ಯರು, ಸಿಬ್ಬಂದಿಗಳು ಹೆಣಗಾಡುತ್ತಿದ್ದಾರೆ.

ಸಾರ್ವಜನಿಕರ ಬೇಜಾವಾಬ್ದಾರಿಯಿಂದ ಪರಿಸ್ಥಿತಿ ಉಲ್ಬಣ

‌ಕರ್ನಾಟಕದ ಪರಿಸ್ಥಿತಿಯನ್ನು ಗಮನಿಸಿದರೆ ಕೋವಿಡ್ ಎರಡನೇ ಅಲೆಯು ಸುನಾಮಿಯಾಗಲು ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಮತ್ತು ರಾಜ್ಯದ ಜನತೆಯ ಕೊಡುಗೆ ಸಮಪಾಲು ಎಂದರೂ ತಪ್ಪಲ್ಲ. ಕಾರಣ, ಕೋವಿಡ್ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ಸಿಗುತ್ತಿದ್ದರೂ ರಾಜ್ಯ ಸರಕಾರದ ಚಿತ್ತ ಮೂರು ಕ್ಷೇತ್ರಗಳ ಉಪ ಚುನಾವಣೆ ಕಡೆಗಿತ್ತು. ಅಲ್ಲಿನ ಗೆಲುವು ಕರೋನಾ ಮೇಲಿನ ವಿಜಯಕ್ಕಿಂತ ದೊಡ್ಡದು ಎಂಬಂತೆ ಸರಕಾರ ವರ್ತಿಸಿದ್ದರಿಂದ, ರಾಜ್ಯದಲ್ಲಿ ಕೋವಿಡ್ ವೈರಸ್ ತಾಂಡವಾಡಲು ಆರಂಭಿಸಿತ್ತು. ಮಾಧ್ಯಮಗಳ ಎಚ್ಚರಿಕೆಗೂ ಕ್ಯಾರೇ ಅನ್ನದ ರಾಜ್ಯ ಸರಕಾರವು ಕರೋನಾ ರುದ್ರನರ್ತನ ಆರಂಭವಾದ ಮೇಲೆ ಎಚ್ಚೆತ್ತುಕೊಂಡಿತ್ತು. ಅಷ್ಟರಲ್ಲಿ ಆಗಬಾರದ ಅನಾಹುತ ಆಗಿಬಿಟ್ಟಿತ್ತು.

ಹಾಗಂತ, ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಈ ಪರಿ ಬಾಲ ಬಿಚ್ಚಲು ಸರಕಾರದ ಜತೆಗೆ ರಾಜ್ಯದ ಜನತೆಯ ಕೊಡುಗೆ ಸಣ್ಣದೇನಿಲ್ಲ. ಸರಕಾರಗಳು, ಮಾಧ್ಯಮಗಳು ನೀಡುತ್ತಿದ್ದ ಎಚ್ಚರಿಕೆಯನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿದ್ದರೆ ಕತೆಯೇ ಬೇರೆ ಇರುತ್ತಿತ್ತು. ಸಿಂಗಾಪುರ, ಇಸ್ರೇಲ್, ನ್ಯೂಜಿಲೆಂಡ್ ನಂಥ ದೇಶಗಳಲ್ಲಿ ಕೋವಿಡ್ ಆಟ ನಡೆಯದಿರಲು ಅಲ್ಲಿನ ಸರಕಾರ ಎಷ್ಟು ಕಾರಣವೋ ಅದಕ್ಕಿಂತ ಹೆಚ್ಚು ಪಟ್ಟು ಅಲ್ಲಿನ ನಾಗರಿಕರು ಕಾರಣ. ಸರಕಾರ ವಿಧಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವ ಅಲ್ಲಿನ ಪ್ರಜೆಗಳ ಕಾರಣದಿಂದ ಅಲ್ಲಿನ ಸರಕಾರಗಳಿಗೂ ಯಶಸ್ಸು ಸಿಕ್ಕಿದೆ.

ಆದರೆ ಭಾರತದಲ್ಲಾಗಲಿ, ನಮ್ಮ ರಾಜ್ಯದಲ್ಲಾಗಲಿ ಸರಕಾರಗಳು ಹೊರಡಿಸುವ ಮಾರ್ಗಸೂಚಿಗಳನ್ನು ನಾಮಕ ಅವಸ್ತೆ ಎಂಬಂತೆ ಪರಿಗಣಿಸುವ ನಮ್ಮ ಜನರು, ಕರೋನಾ ಉಲ್ಬಣಗೊಳ್ಳಲು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ನಮ್ಮ ಜನತೆ ಜನತಾ ಕರ್ಫ್ಯೂಗೂ ಜಗ್ಗುತ್ತಿಲ್ಲ, ಲಾಕ್ ಡೌನ್‍ಗೂ ಬಗ್ಗುತ್ತಿಲ್ಲ. ಮಾಸ್ಕ್ ಹಾಕುತ್ತಿಲ್ಲ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಇನ್ನು ಕೋವಿಡ್ ವಿರುದ್ಧ ಗೆಲ್ಲುವುದು ಹೇಗೆ?

ನಾಗರಿಕರೇ ಕರೋನಾ ಆಹ್ವಾನಿಸುತ್ತಿರುವ ಸ್ಥಿತಿ

ಸಾರ್ವಜನಿಕರು ಬೇಕೆಂದೇ ಸರಕಾರ ವಿಧಿಸಿದ ನಿಯಮಾವಳಿಗಳನ್ನು ಮುರಿದು ಕೋವಿಡ್ 19 ವೈರಸ್ ಗೆ ತುತ್ತಾದರೆ ಹೊಣೆ ಯಾರು? ಜನರ ನಿರ್ಲಕ್ಷ್ಯದಿಂದ ಪಿಡುಗು ಉಲ್ಬಣಗೊಂಡರೆ ಗತಿಯೇನು? ಒಂದೆಡೆ ಸರಕಾರಗಳು ಅದಕ್ಷತೆಗೆ ಬೈಯುವ ಜನಸಾಮಾನ್ಯರು ಇನ್ನೊಂದೆಡೆ ತಮ್ಮ ವೈಯಕ್ತಿಕ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾಗಿರುವುದರಿಂದ ರಸ್ತೆಗಿಳಿಗೆ ಅನವಶ್ಯಕವಾಗಿ ಇಳಿಯುವ ವಾಹನ ಸವಾರರನ್ನು ನಿಯಂತ್ರಿಸಲು, ಕದ್ದು ಮುಚ್ಚಿ ತೆರೆದ ಅಂಗಡಿಗಳನ್ನು ಮುಚ್ಚಿಸಲು ರಾಜ್ಯದ ಪೊಲೀಸರು ಬಿರುಬಿಸಿಲಿನಲ್ಲೂ ಹರಸಾಹಸಪಡುತ್ತಿರುವ ದೃಶ್ಯಗಳನ್ನು ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿವೆ. ರಸ್ತೆಯಲ್ಲಿ ವಾಗ್ವಾದಕ್ಕಿಳಿದವರ ಮೇಲೆ ಲಾಠಿ ಪ್ರಯೋಗ ಮಾಡುತ್ತಿರುವುದಕ್ಕೆ ಪರ-ವಿರೋಧಗಳೂ ಕೇಳಿಬರುತ್ತಿವೆ.

ಕಳೆದೆರಡು ದಿನಗಳಿಂದ ಬೆಂಗಳೂರು, ವಿಜಯಪುರ, ಕಲಬುರಗಿ, ದಾವಣಗೆರೆ, ಮಂಗಳೂರು, ಹಾಸನದಂತ ಹತ್ತು ಹಲವು ಜಿಲ್ಲೆಗಳಲ್ಲಿನ ಮಾರುಕಟ್ಟೆಗಳಲ್ಲಿನ ಜನಸಂದಣಿಯನ್ನು ನೋಡಿದರೆ, ನಮ್ಮ ಜನರು ಸ್ವಯಂ ಎಚ್ಚರಿಕೆ ತೆಗೆದುಕೊಳ್ಳುತ್ತಿರುವ ಪರಿ ಅರ್ಥವಾಗುತ್ತದೆ. ಸಾವಿರಾರು ಜನರು ಮಾರುಕಟ್ಟೆಗಳಲ್ಲಿ ಗಿಜಿಗುಡುತ್ತಿದ್ದು, ಸಾಮಾಜಿಕ ಅಂತರ ಹಾಗಿರಲಿ, ಹತ್ತರಲ್ಲಿ ಒಬ್ಬನೂ ಮಾಸ್ಕ್ ಹಾಕಿದಂತೆ ಕಾಣಿಸುತ್ತಿರಲಿಲ್ಲ. ಹೀಗಾದರೆ ಕರೋನಾ ನಿಯಂತ್ರಿಸುವುದು ಹೇಗೆ?

ನಾವು ಸ್ವತಃ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕರೋನಾ ಬಂದರೂ ದೂರುವುದು ಮಾತ್ರ ಸರಕಾರವನ್ನು. ಲಕ್ಷಾಂತರ ಜನರ ನಿರ್ಲಕ್ಷ್ಯದಿಂದ ಏಕಕಾಲಕ್ಕೆ ರೋಗ ಹರಡಿದಾಗ ಭಾರತವಲ್ಲ, ಅಮೆರಿಕದಂಥ ದೇಶಗಳ ಸರಕಾರಗಳೂ ಏನೂ ಮಾಡಲಾಗದು. ಅದೇ ಕಾರಣಕ್ಕೆ ಜಗತ್ತಿನ ಶ್ರೀಮಂತ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಗೆ ಹೆಸರಾದ ರಾಷ್ಟ್ರಗಳಲ್ಲೂ ಕೋವಿಡ್ ಸಾವುನೋವಿನ ಸಂಖ್ಯೆಗಳು ಜಾಸ್ತಿಯಾಗಿವೆ. ಅದೇ ವೇಳೆ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಿದ ಬಡ, ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದ ದೇಶಗಳಲ್ಲಿ ಸಾವುನೋವಿನ ಸಂಖ್ಯೆಗಳು ಅತಿ ಕಡಿಮೆ ಇವೆ.

ಮಾರ್ಗಸೂಚಿಗಳಿಗೆ ಕ್ಯಾರೇ ಎನ್ನದೆ ಸ್ವಯಂ ಕೋವಿಡ್ ಅನ್ನು ಆಹ್ವಾನಿಸಿಕೊಂಡು ಸಾವಿರಾರು ರೋಗಿಗಳು ಏಕಕಾಲಕ್ಕೆ ಆಸ್ಪತ್ರೆಗಳಿಗೆ ದೌಡಾಯಿಸಿದರೆ, ಸರಕಾರವಾದರೂ ಏನು ಮಾಡಬೇಕು? ಅಷ್ಟೊಂದು ಪ್ರಮಾಣದಲ್ಲಿ ಆಸ್ಪತ್ರೆಗಳು, ಬೆಡ್ ಗಳು, ವೈದ್ಯರು, ನರ್ಸ್ ಗಳು, ಆರೋಗ್ಯ ಸಿಬ್ಬಂದಿ, ಆಂಬ್ಯುಲೆನ್ಸ್ ಗಳು, ಔಷಧಗಳು, ಆಕ್ಸಿಜನ್ ಅನ್ನು ದಿಢೀರ್ ಆಗಿ ತರುವುದಾದರೂ ಎಲ್ಲಿಂದ? ಯಾವ ಪಕ್ಷದ ಸರಕಾರವಿದ್ದರೂ, ಎಂಥ ಪ್ರಬಲ ನಾಯಕನಿದ್ದರೂ ಇಂಥ ಸವಾಲು ಎದುರಾದರೆ ತಬ್ಬಿಬ್ಬಾಗುವುದು ಖಚಿತ. ಮಾತ್ರವಲ್ಲ ದೇಶದ, ರಾಜ್ಯದ, ಜಿಲ್ಲೆಯ ಆಡಳಿತಗಳು ಕೂಡ ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ಆಗ ತುತ್ತಾಗುತ್ತವೆ.

ಸರಕಾರಗಳ, ಪ್ರತಿಪಕ್ಷಗಳ ಹೊಣೆಗಾರಿಕೆ ದೊಡ್ಡದು

ಆರೋಗ್ಯದ ತುರ್ತು ಪರಿಸ್ಥಿತಿ ಇರುವ ಸದ್ಯದ ಸನ್ನಿವೇಶದಲ್ಲಿ ಕೇಂದ್ರ, ರಾಜ್ಯ ಸರಕಾರಗಳ ಹೊಣೆಗಾರಿಕೆ ಬಹಳ ದೊಡ್ಡದಿದೆ, ಅವು ಜವಾಬ್ದಾರಿಯಿಂದ ಸ್ಥಿತಿಯನ್ನು ನಿಭಾಯಿಸಬೇಕಿದೆ ಎಂದು ದೇಶದ ಸುಪ್ರೀಕೋರ್ಟ್, ಹೈಕೋರ್ಟ್ಗಳು ಚುರುಕು ಮುಟ್ಟಿಸಿರುವುದು ದೇಶದ ಪ್ರಸಕ್ತ ಸನ್ನಿವೇಶಕ್ಕೆ ಹಿಡಿದ ಕನ್ನಡಿ.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಅವರಿಗೆ ಎದುರಾಗಿರುವ ಅತಿ ದೊಡ್ಡ ಅಗ್ನಿಪರೀಕ್ಷೆ ಈ ಕೋವಿಡ್ ಎರಡನೇ ಆಲೆಯೆಂಬ ಸುನಾಮಿ. ರಾಜ್ಯದ ನಾನಾ ನಗರಗಳಲ್ಲಿ ಉಂಟಾದ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆ ಕೊರತೆಯು ಮೋದಿ ವೈಫಲ್ಯಗಳ ಪೈಕಿ ಅತಿ ದೊಡ್ಡದು ಎಂದು ಹೇಳಲಾಗುತ್ತಿದೆ. ಕೋರ್ಟ್ ಗಳು ಕೂಡ ಈ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿ ಸರಕಾರದ ಕಿವಿ ಹಿಂಡಿವೆ.

ಇಂಥ ಸ್ಥಿತಿಯಲ್ಲಿ ದೇಶದ, ರಾಜ್ಯಗಳ ಸರಕಾರದ ಹೋರಾಟಕ್ಕೆ ಪ್ರತಿಪಕ್ಷಗಳೂ ಕೈಜೋಡಿಸುವ ಅನಿವಾರ್ಯತೆ ಇದೆ. ಸರಕಾರದ ವಿವಿಧ ಇಲಾಖೆಗಳ ಸಮನ್ವಯತೆ ಮೂಡಿಸಬೇಕು, ಇಂಥ ತುರ್ತು ಪರಿಸ್ಥಿತಿಯಲ್ಲೂ ಜನರ ಜೀವ ಉಳಿಸಬೇಕಾದ ವೈದ್ಯಕೀಯ ವಸ್ತುಗಳ ಅಕ್ರಮ ದಾಸ್ತಾನು ಮಾಡುವ ದುಷ್ಟರಿಗೆ ಶಿಕ್ಷೆ ಕೊಡಿಸಬೇಕು, ವಿರುದ್ಧ ಕೋವಿಡ್ ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಪಕ್ಷಾತೀತವಾಗಿ ರಾಷ್ಟ್ರೀಯ ಕಾರ್ಯ ಪಡೆ ರಚಿಸಿ ಎಲ್ಲ ಪಕ್ಷಗಳನ್ನೂ ತೊಡಗಿಸಿಕೊಳ್ಳಬೇಕು. ಆಡಳಿತ ಪಕ್ಷ, ಪ್ರತಿಪಕ್ಷಗಳು ಕೆಸರೆರಚಾಟ ಬಿಟ್ಟು ಜನರ ಪ್ರಾಣ ಉಳಿಸಲು ಮೊದಲ ಆದ್ಯತೆ ನೀಡಿದರೆ ಕರೋನಾ ಮಣಿಸುವ ಹೋರಾಟಕ್ಕೆ ಶಕ್ತಿ ಬರಲಿದೆ. ಗೆಲುವು ಬಲುಬೇಗ ನಮ್ಮದಾಗಲಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...