ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿ ನೆರವಿನಿಂದ ಭಾರತ ಎ ತಂಡ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳಿಂದ ನ್ಯೂಜಿಲೆಂಡ್ ಎ ತಂಡವನ್ನು ಸೋಲಿಸಿದೆ.
ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಎ ತಂಡ 40.2 ಓವರ್ ಗಳಲ್ಲಿ 167 ರನ್ ಗಳ ಸಾಧಾರಣ ಮೊತ್ತಕ್ಕೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಭಾರತ ಎ ತಂಡ 31.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿತು.
ಭಾರತದ ಪರ ರಜತ್ ಪಟಿದಾರ್ (ಅಜೇಯ 49), ಋತುರಾಜ್ ಗಾಯಕ್ವಾಡ್ (41), ರಾಹುಲ್ ತ್ರಿಪಾಠಿ (31), ನಾಯಕ ಸಂಜು ಸ್ಯಾಮ್ಸನ್ (ಅಜೇಯ 29) ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಎ ತಂಡ ಕೆಳ ಕ್ರಮಾಂಕದಲ್ಲಿ ಮಿಚೆಲ್ ರಿಪ್ಪನ್ (61 ರನ್, 104 ಎಸೆತ, 4 ಬೌಂಡರಿ) ಸಿಡಿಸಿದ ಅರ್ಧಶತಕದ ಹೊರತಾಗಿಯೂ ಬೃಹತ್ ಮೊತ್ತ ದಾಖಲಿಸಲು ವಿಫಲವಾಯಿತು. ಜೋ ವಾಲ್ಕರ್ (36) ನಾಯಕ ರಾಬರ್ಟ್ ಓಡಿನ್ನೆಲ್ (22) ಸ್ವಲ್ಪ ಮಟ್ಟಿಗೆ ಪ್ರತಿರೋಧ ಒಡ್ಡಿದರು.
ಭಾರತದ ಪರ ಮಾರಕ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ 32 ರನ್ ನೀಡಿ 4 ವಿಕೆಟ್ ಕಬಳಿಸಿದರು. ಕುಲದೀಪ್ ಸೇನ್ 3 ವಿಕೆಟ್ ಪಡೆದರು.








