ದೇಶ ಭಯಾನಕ ಆರ್ಥಿಕ ಸಂಕಷ್ಟದಲ್ಲಿರುವಾಗ ಪ್ರಧಾನಿ ಮೋದಿಯವರ ಐಷಾರಾಮಿ ಷೋಕಿಗಳಿಗೆ ಏನೂ ಕೊರತೆ ಕಾಣುತ್ತಿಲ್ಲ. ಪ್ರಧಾನಿಗೆ ದೇಶದ ಜ್ವಲಂತ ಸಮಸ್ಯೆಗಳು ಆದ್ಯತೆಯಾಗಬೇಕಿತ್ತು ˌ ಆದರೆ ಅವರ ಆದ್ಯತೆಗಳೇ ಬೇರೆಯಾಗಿವೆ. ಎರಡು ವರ್ಷಗಳ ಹಿಂದೆ ಅಂದಾಜು ೨೦ ಸಾವಿರ ಕೋಟಿ ವೆಚ್ಚದಲ್ಲಿ ಮೋದಿಯವರು ಸೆಂಟ್ರಲ್ ವಿಸ್ಟಾ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದಾರೆ. ಅದರಲ್ಲಿ ಹೊಸ ಸಂಸತ್ ಭವನದ ಕಟ್ಟಡವೂ ಸೇರಿದೆ. ನಿಯೋಜಿತ ಸಂಸತ್ ಭವನದಲ್ಲಿ ಸದಸ್ಯರ ಆಸನ ಸಂಖ್ಯೆಯನ್ನು ೮೮೮ ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ. ೫೫೨ ಸದಸ್ಯ ಬಲದ ಸಂಸತ್ ಭವನದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಆಸನ ವ್ಯವಸ್ಥೆ ನಿಯೋಜಿಸಿರುವುದರ ಹಿಂದಿನ ಉದ್ದೇಶವಾದರೂ ಏನು? ಈ ನಿರ್ಧಾರವು ಮುಂದೊಂದು ದಿನ ಉತ್ತರ-ದಕ್ಷಿಣ ಭಾರತೀಯರ ನಡುವೆ ಅಂತಃಕಲಹ ಹುಟ್ಟುಹಾಕಬಲ್ಲುದೆ? ವಿವರಗಳಿಗೆ ಮುಂದೆ ಓದಿ.
ಒಂದು ವರ್ಷದ ಹಿಂದೆˌ ಅಂದರೆ ಪಂಜಾಬ್ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಕ್ಷಮೆಯಾಚಿಸಿ ಹಿಂಪಡೆಯಲಾದ ಕಾರ್ಪೋರೇಟ್ ಉದ್ದಮಿಗಳ ಪರವಾಗಿ ಮಂಡಿಸಿ ಅಂಗೀಕರಿಸಲಾಗಿದ್ದ ರೈತ ಮಸೂದೆಗಳ ವಿರುದ್ಧ ದೇಶದ ಅನ್ನದಾತನ ಆ ದಿನದ ಪ್ರತಿಭಟನೆಯ ಸಂದಿಗ್ಧ ಸಂದರ್ಭದಲ್ಲಿ ಹೊಸ ಸಂಸತ್ ಭವನಕ್ಕೆ ಪ್ರಧಾನಿ ಮೋದಿಯವರು ಶಂಕುಸ್ಥಾಪನೆ ಮಾಡಿದ್ದರ ಕುರಿತು ಅನೇಕ ಅನುಮಾನಗಳು ಹುಟ್ಟಿಕೊಂಡಿವೆ. ನಿಯೋಜಿತ ಸಂಸತ್ ಭವನದ ವಿಭಿನ್ನತೆಯ ಕುರಿತು ನಾವು ದೃಷ್ಟಿ ಹಾಯಿಸಬೇಕಾಗಿದೆ. ಮೋದಿಯವರ ಮಹತ್ವಾಕಾಂಕ್ಷೆಯ ಮತ್ತು ಅತ್ಯಂತ ದುಬಾರಿ ವೆಚ್ಚದ ಸೆಂಟ್ರಲ್ ವಿಸ್ಟಾ ಯೋಜನೆಗೆ ಇದು ಸಕಾಲವಲ್ಲ. ತಮ್ಮ ಆಡಳಿತಾವಧಿಯನ್ನು ಸ್ಮರಣೀಯವಾಗಿಸಲು ನವದೆಹಲಿಯ ಹೃದಯ ಭಾಗದಲ್ಲಿ ಸಂಸತ್ ಭವನ ಪರಿಸರವನ್ನು ಪುನರ್ನಿರ್ಮಿಸುವ ಗುರಿ ಮೋದಿ ಹೊಂದಿದಂತಿದೆ. ಹೊಸ ಸಂಸತ್ತಿನ ಗುತ್ತಿಗೆಯನ್ನು ಟಾಟಾ ಗ್ರೂಪ್‌ಗೆ ನೀಡುವಲ್ಲಿಯೂ ಸಹ ಅನುಚಿತತೆಯ ಆರೋಪಗಳನ್ನು ಮೋದಿ ಸರಕಾರ ಎದುರಿಸಿತ್ತು. ನಂತರ ಅದನ್ನು ಪ್ರತಿಸ್ಪರ್ಧಿ ಕಾರ್ಪೊರೇಟ್ ಹೌಸ್ ಹಿಂತೆಗೆದುಕೊಂಡಿದ್ದು ನೀವು ಬಲ್ಲಿರಿ.
ಪಿಟಿಐ ವರದಿಗಳ ಪ್ರಕಾರ ಹೊಸ ಸಂಸತ್ ಭವನದಲ್ಲಿ ಕೆಳಮನೆಯಾದ ಲೋಕಸಭೆಯಲ್ಲಿ ೮೮೮ ಸದಸ್ಯರಿಗೆ ಆಸನ ಸಾಮರ್ಥ್ಯವನ್ನು ನಿಯೋಜಿಸಿದರೆ, ಮೇಲ್ಮನೆ ರಾಜ್ಯಸಭೆಯಲ್ಲಿ ೩೮೪ ಸದಸ್ಯರ ಆಸನ ವ್ಯವಸ್ಥೆ ನಿಯೋಜಿಸಲಾಗಿದೆ. ಪ್ರಸ್ತುತ, ಲೋಕಸಭೆಯು ೫೫೨ ಸದಸ್ಯರ ಅನುಮೋದಿತ ಬಲ ಮತ್ತು ೨೪೫ ರ ರಾಜ್ಯಸಭಾ ಸದಸ್ಯರ ಬಲ ಹೊಂದಿದೆ. ಸಂವಿಧಾನಬದ್ಧವಾಗಿ ಸಂಸತ್ತಿನಲ್ಲಿ ಲೋಕಸಭೆಯು ಕೇವಲ ೫೫೨ ಸದಸ್ಯರನ್ನು ಹೊಂದಿರುವಾಗ, ಹೊಸ ಸಂಸತ್ ಭವನದಲ್ಲಿ ೮೮೮ ಸದಸ್ಯರ ಆಸನಗಳು ನಿಯೋಜಿಸಿರುವುದು ಏಕೆ ಎನ್ನುವ ಪ್ರಶ್ನೆ ಕಾಡುತ್ತಿರಬೇಕು. ಅದಕ್ಕೆ ಮೋದಿ ಸರಕಾರ ಈ ಕೆಳಗಿನ ಸಮರ್ಥನೆಯನ್ನು ನೀಡಬಹುದು: ವಿಶೇಷ ಸಂದರ್ಭಗಳಲ್ಲಿ ಭಾರತದ ಸಂಸತ್ತಿನ ಜಂಟಿ ಅಧಿವೇಷನ ಕರೆದಾಗ ಹಾಗು ವಿದೇಶಿ ಗಣ್ಯರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವಾಗ ಈ ವ್ಯವಸ್ಥೆ ಉಪಯೋಗಕ್ಕೆ ಬರುತ್ತದೆ ಎನ್ನುವುದು. ಇದು ಸಮಂಜಸ ಸಮರ್ಥನೆ ಎಂದು ನನಗೆ ಅನ್ನಿಸುವುದಿಲ್ಲ.

ನಿಯೋಜಿತ ಸಂಸತ್ ಭವನದಲ್ಲಿ ಆಸನ ಸಂಖ್ಯೆ ಹೆಚ್ಚಿಸುತ್ತಿರುವುದರ ಹಿಂದಿನ ಉದ್ದೇಶ ಈಗಿರುವ ಸಂಸತ್ ಸದಸ್ಯರ ಸಂಖ್ಯಾಬಲ ಹೆಚ್ಚಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಭಾರತೀಯ ಸಂವಿಧಾನವು ಪ್ರಸ್ತುತ ಗರಿಷ್ಠ ೫೫೨ ಲೋಕಸಭಾ ಸದಸ್ಯರನ್ನು ಅನುಮತಿಸಿದೆ. ಆದರೆ ಜನಸಂಖ್ಯೆ ಬದಲಾವಣೆಯ ಆಧಾರದ ಮೇಲೆ ಪ್ರತಿ ೧೦ ವರ್ಷಗಳಿಗೊಮ್ಮೆ ಸ್ಥಾನಗಳ ರಾಜ್ಯವಾರು ಹಂಚಿಕೆಯನ್ನು ಸರಿಹೊಂದಿಸಬೇಕಾಗಿತ್ತು. ಆ ಮಾನದಂಡದ ಪ್ರಕಾರ ಪ್ರತಿ ಸಂಸದರು ಅಂದಾಜು ಸಮಾನ ಸಂಖ್ಯೆಯ ಜನರನ್ನು ಪ್ರತಿನಿಧಿಸುತ್ತಾರೆ. ಈ ಮಾನದಂಡವು ಕೇಂದ್ರಾಡಳಿತ ಪ್ರದೇಶಗಳು ಹಾಗು ವಿಶೇಷವಾಗಿ ಸಣ್ಣ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ. ೧೯೭೦ ರ ದಶಕದಲ್ಲಿ ಅಂದಿನ ಒಕ್ಕೂಟ ಸರಕಾರವು ದೇಶದ ಜನಸಂಖ್ಯಾ ನಿಯಂತ್ರಣವನ್ನು ಅಧಿಕೃತ ಆದ್ಯತೆಯಾಗಿಸಿಕೊಂಡಿತ್ತು. ಅದರನುಸಾರˌ ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ದಕ್ಷಿಣದ ರಾಜ್ಯಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದರೆ ಉತ್ತರದ ರಾಜ್ಯಗಳು ಅದರಲ್ಲಿ ಸಂಪೂರ್ಣವಾಗಿ ವಿಫಲವಾದವು.
ಈಗ ಮೋದಿ ಸರಕಾರ ಒಂದು ವೇಳೆ ಜನಸಂಖ್ಯಾ ಆಧಾರದಲ್ಲಿ ನಿಗದಿತ ಸೂತ್ರದ ಪ್ರಕಾರ ಸಂಸತ್ತಿನ ಸ್ಥಾನಗಳನ್ನು ಮರು-ಹಂಚಿಕೆ ಮಾಡಿದರೆ, ಹೆಚ್ಚು ಜನಸಾಂಧ್ರತೆಯ ಉತ್ತರದ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಸದಸ್ಯರನ್ನು ಬಹುಮಾನವಾಗಿ ನೀಡಿˌ ಕಡಿಮೆ ಜನಸಾಂಧ್ರತೆಯ ದಕ್ಷಿಣದ ರಾಜ್ಯಗಳ ಸಂಸತ್ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸುವ ಮೂಲಕ ಮೋದಿ ಸರಕಾರವು ದಕ್ಷಿಣದ ರಾಜ್ಯಗಳಿಗೆ ಉಗ್ರವಾದ ಶಿಕ್ಷೆ ವಿಧಿಸಿದಂತಾಗುತ್ತದೆ. ಈ ಕಾರಣದಿಂದ ೧೯೭೬ ರಲ್ಲಿ ಸಂಸತ್ ಕ್ಷೇತ್ರಗಳ ಹೆಚ್ಚಿಸುವಿಕೆಯ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅದನ್ನು ೨೦೦೧ ರ ಜನಗಣತಿಯ ನಂತರ ಮರುಪರಿಶೀಲಿಸಲು ಸರಕಾರ ನಿರ್ಧರಿಸಿತ್ತು. ೨೦೦೨ ರಲ್ಲಿ, ಸಂಸತ್ ಕ್ಷೇತ್ರಗಳ ಮರು-ಮೌಲ್ಯಮಾಪನ ಅಥವಾ ಡಿಲಿಮಿಟೇಶನ್ ಪ್ರಯತ್ನಗಳನ್ನು ಮತ್ತೆ ೨೦೨೬ ಕ್ಕೆ ಮುಂದೂಡಲಾಗಿತ್ತು. ಈಗ ೨೦೨೬ ಇನ್ನೇನು ಹತ್ತಿರದಲ್ಲಿದೆ. ಆ ಕಾರ್ಯವು ೨೦೩೧ ರ ಜನಗಣತಿಯ ನಂತರ ಕೈಗೆತ್ತಿಕೊಳ್ಳಬಹುದು.
ಪ್ರಜಾಸತ್ತಾತ್ಮಕ ದೃಷ್ಟಿಕೋನದಿಂದ ನೋಡಿದಾಗ ಇದು ಸಮಸ್ಯಾತ್ಮಕವಾಗಿ ಪರಿಣಮಿಸಬಹುದು, ಏಕೆಂದರೆ ತಮಿಳುನಾಡಿನ ಪ್ರತಿ ಸಂಸತ್ ಸದಸ್ಯ ಸರಾಸರಿ ೧.೮ ಮಿಲಿಯನ್ ಜನರನ್ನು ಪ್ರತಿನಿಧಿಸಿದರೆˌ ಉತ್ತರ ಪ್ರದೇಶದ ಸಂಸತ್ ಸದಸ್ಯ ೩ ಮಿಲಿಯನ್ ಜನರನ್ನು ಪ್ರತಿನಿಧಿಸುತ್ತಾನೆ. ಇದು ಪ್ರತಿ ಮತದಾರನ ಮೌಲ್ಯವು ನೀವು ದೇಶದ ಯಾವ ಪ್ರದೇಶದಲ್ಲಿ ವಾಸಿಸುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಈ ಕುರಿತು ಮಿಲನ್ ವೈಷ್ಣವ್ ಮತ್ತು ಜೇಮಿ ಹಿಂಟ್ಸನ್ ಅವರು ಕೈಕೊಂಡ ಸರ್ವೇಕ್ಷಣಾ ವರದಿಗಳು ಈ ಸಂಗತಿಯ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತವೆ. ಆಶ್ಚರ್ಯವೆಂದರೆ ಉತ್ತರ ಪ್ರದೇಶಕ್ಕಿಂತ ತಮಿಳುನಾಡಿನಲ್ಲಿ ಪ್ರತಿ ಕ್ಷೇತ್ರಕ್ಕೆ ಸರಾಸರಿ ೧.೨ ಮಿಲಿಯನ್ ಕಡಿಮೆ ಜನರಿದ್ದರೂ, ನೋಂದಾಯಿತ ಮತದಾರರ ಸಂಖ್ಯೆ ಮಾತ್ರ ಒಂದೇ ಆಗಿದೆ. ಇನ್ನೂ ಗಮನಾರ್ಹ ಸಂಗತಿಯೆಂದರೆ, ಉತ್ತರ ಪ್ರದೇಶಕ್ಕಿಂತ ತಮಿಳುನಾಡಿನ ಪ್ರತಿ ಸಂಸತ್ ಕ್ಷೇತ್ರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು.

ಆದಾಗ್ಯೂ, ರಾಜಕೀಯ ಆರ್ಥಿಕತೆಯ ದೃಷ್ಟಿಯಿಂದ ಈ ಗುರುತರ ಸಮಸ್ಯೆಯನ್ನು ೫ ದಶಕಗಳಿಂದ ಮುಂದೂಡುತ್ತ ಬರುತ್ತಿರುವುದು ಸಹ ಒಳ್ಳೆಯ ಬೆಳವಣಿಗೆಯಲ್ಲ. ಒಂದು ವೇಳೆ ಈ ಯೋಜನೆಯು ಕಾರ್ಯಗತವಾದಲ್ಲಿ ಸಂಸತ್ ಸದಸ್ಯರ ಸಂಖ್ಯೆಯಲ್ಲಿ ಗಣನೀಯ ಪ್ರಾದೇಶಿಕವಾರು ವ್ಯತ್ಯಾಸವಾಗಿ ದೇಶದಲ್ಲಿ ಅಧಿಕಾರದ ಗಮನಾರ್ಹ ಬದಲಾವಣೆಗೆ ಇದು ಕಾರಣಗಬಲ್ಲುದು.ˌ ಈ ಬೆಳವಣಿಗೆಯು ದೇಶವನ್ನು ಉತ್ತರ-ದಕ್ಷಿಣ ಭಾಗಗಳ ನಡುವೆ ಅಗಾಧವಾದ ಬಿರುಕನ್ನು ಕೂಡ ಸೃಷ್ಟಿಸಬಲ್ಲುದು. ೨೦೧೯ ರಲ್ಲಿ ವೈಷ್ಣವ್ ಮತ್ತು ಹಿಂಟ್ಸನ್ ಅವರು ಕೈಕೊಂಡ ಸರ್ವೇಕ್ಷಣಾ ವಿಶ್ಲೇಷಣೆಯು ೨೦೧೧ ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ, ಉತ್ತರದ “ನಾಲ್ಕು ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಒಟ್ಟು ೨೨ ಸಂಸತ್ ಸ್ಥಾನಗಳನ್ನು ಹೆಚ್ಚಿಸಿಕೊಂಡರೆˌ ದಕ್ಷಿಣದ ನಾಲ್ಕು ರಾಜ್ಯಗಳಾದ ಆಂಧ್ರ ಪ್ರದೇಶ, ಕೇರಳ, ತೆಲಂಗಾಣ ಮತ್ತು ತಮಿಳುನಾಡು ಒಟ್ಟು ೧೭ ಸಂಸತ್ ಸ್ಥಾನಗಳನ್ನು ಕಳೆದುಕೊಳ್ಳುತ್ತವೆ ಎಂದು ವರ್ಣಿಸಿದೆ.
ಈ ಅಂಕಿಅಂಶಗಳು ೨೦೨೧ ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ೨೦೨೬ ರಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಎರಡೇ ರಾಜ್ಯಗಳು ೨೧ ಸಂಸತ್ ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದರೆ ಕೇರಳ ಮತ್ತು ತಮಿಳುನಾಡು ರಾಜ್ಯಗಳು ೧೭ ಸಂಸತ್ ಸ್ಥಾನಗಳನ್ನು ಕಳೆದುಕೊಳ್ಳುತ್ತವೆ ಎನ್ನುತ್ತದೆ ಸರ್ವೇಕ್ಷಣಾ ವರದಿಗಳು. ೧೫ ನೇ ಹಣಕಾಸು ಆಯೋಗದ ಪ್ರಾದೇಶಿಕವಾರು ತೆರಿಗೆ ವಿತರಣೆಯ ಚರ್ಚೆಯನ್ನು ನಾವು ಗಮನಿಸಿದರೆ, ದಕ್ಷಿಣ ಭಾರತದ ರಾಜ್ಯಗಳು ತಮ್ಮ ರಾಜಕೀಯ ಹಾಗು ಆರ್ಥಿಕ ಶಕ್ತಿಯನ್ನು ಕುಂದಿಸುವ ಪ್ರಯತ್ನಗಳ ವಿರುದ್ಧ ತೀವ್ರವಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆˌ ಏಕೆಂದರೆ ದಕ್ಷಿಣದ ರಾಜ್ಯಗಳ ಜನಸಂಖ್ಯಾ ದರವು ಕಳೆದ ೫ ದಶಕಗಳಲ್ಲಿ ಗಮನಾರ್ಹವಾಗಿ ತಗ್ಗಿದೆ. ಅದೇ ಸಮಯದಲ್ಲಿ, ಉತ್ತರದ ರಾಜ್ಯಗಳು ತಮ್ಮ ಉದ್ದೇಶಿತ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಅನುಷ್ಟಾನಗೊಳಿಸುವಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿವೆ. ಈ ಕಾರಣದಿಂದ ಉತ್ತರದ ರಾಜ್ಯಗಳ ಜನರು ರಾಜಕೀಯ ಹಾಗು ಆರ್ಥಿಕ ದಂಡನೆಗೆ ಒಳಗಾಗಬೇಕಾದದ್ದು ಅಗತ್ಯವಾಗಿದೆ.
ಉತ್ತರ ಭಾರತದ ರಾಜ್ಯಗಳು ಕೇವಲ ಹೆಚ್ಚಿನ ಜನಸಾಂಧ್ರತೆಯ ವಿಷಯದಲ್ಲಷ್ಟೆ ಅಲ್ಲದೆ ತೆರಿಗೆ ಸಂಗ್ರಹದಲ್ಲೂ ವಿಫಲವಾಗಿವೆ. ದಕ್ಷಿಣದ ರಾಜ್ಯಗಳ ತೆರಿಗೆಯ ಹಣವನ್ನು ಒಕ್ಕೂಟ ಸರಕಾರ ಉತ್ತರದ ರಾಜ್ಯಗಳ ಅಭಿವೃದ್ದಿಗೆ ಬಳಸುತ್ತಿದೆ. ದಕ್ಷಿಣ ರಾಜ್ಯದ ಸಂಸತ್ ಸೀಟುಗಳನ್ನು ಕಡಿತಗೊಳಿಸಿ ಉತ್ತರದ ರಾಜ್ಯಗಳಿಗೆ ಹಂಚುವ ಈ ಪ್ರಕ್ರೀಯೆಯು ಇನ್ನೂ ಅನೇಕ ಸಮಸ್ಯೆಗಳನ್ನು ತಂದೊಡ್ಡಬಲ್ಲುದು. ಇದು ಲೋಕಸಭೆಯ ಅಧಿಕಾರ ರಾಜಕಾರಣದ ಪ್ರಮುಖ ಸ್ಥಿತ್ಯಂತರಕ್ಕೆ ಕಾರಣವಾಗಬಲ್ಲುದು. ಏಕೆಂದರೆ ಈಗಾಗಲೆ ಉತ್ತರದ ರಾಜ್ಯಗಳು ಮೊದಲಿಗಿಂತ ಹೆಚ್ಚಿನ ಸಂಸತ್ ಸ್ಥಾನಗಳನ್ನು ಹೊಂದುವ ಮೂಲಕ ಉತ್ತರದವರ ರಾಜಕೀಯ ಪ್ರಾಬಲ್ಯ ಹೆಚ್ಚುತ್ತದೆ. ಈಗಿರುವ ೫೫೨ ಸಂಸತ್ ಸದಸ್ಯರ ಸಾಂವಿಧಾನಿಕ ಮಿತಿಯನ್ನು ಬದಲಾಯಿಸಲು ಸಾಂವಿಧಾನಿಕ ತಿದ್ದುಪಡೆ ಮಾಡುವ ಅಗತ್ಯ ಏರ್ಪಡುತ್ತದೆ. ವೈಷ್ಣವ್ ಮತ್ತು ಹಿಂಟ್ಸನ್ ಅವರ ಸರ್ವೇಕ್ಷಣೆಯ ಪ್ರಕಾರ ೨೦೨೬ ರಲ್ಲಿ ಯೋಜಿತ ಜನಸಂಖ್ಯೆಯ ಅಂಕಿಅಂಶಗಳ ಆಧಾರದಲ್ಲಿ ಲೋಕಸಭೆಯ ಸದಸ್ಯರ ಸಂಖ್ಯೆ ೮೪೮ ಕ್ಕೆ ಏರುತ್ತದೆ. ಈಗ ನಿಯೋಜಿತ ಸಂಸತ್ ಭವನದಲ್ಲಿ ಸದಸ್ಯರ ಆಸನ ಸಂಖ್ಯೆಯನ್ನು ೮೮೮ ಕ್ಕೆ ಯೋಜಿಸಿರುವುದು ಪ್ರಾಯೋಗಿಕವಾಗಿ ಮೋದಿ ಸರಕಾರ ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಿಸುವುದನ್ನು ದೃಢಪಡಿಸುತ್ತದೆ.
ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದರಿಂದ ದೇಶ ಹಲವಾರು ಸಂಕಷ್ಟಗಳನ್ನು ಎದುರಿಸಿದ್ದು ನಾವು ನೋಡಿದ್ದೇವೆ. ೨೦೧೯ ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ಏಕಪಕ್ಷೀಯವಾಗಿ ತೆಗೆದುಹಾಕಿದ್ದು ˌ ಅದಕ್ಕೂ ಮೊದಲು ಸರಕು ಮತ್ತು ಸೇವಾ ತೆರಿಗೆಯನ್ನು ಸೂಕ್ತ ಪೂರ್ವ ತಯ್ಯಾರಿ ಇಲ್ಲದೆ ಅನುಷ್ಟಾನಗೊಳಿಸಿ ದೇಶದ ಮಧ್ಯಮ ಮತ್ತು ಸಣ್ಣ ಉದ್ಯಮಗಳನ್ನು ಸಂಕಷ್ಟಕ್ಕೆ ದೂಡಿದ್ದು ˌ ರಾತ್ರೋರಾತ್ರಿ ನೋಟು ಅಮಾನ್ಯಗೊಳಿಸಿ ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸಿದ್ದು ಇವೆಲ್ಲವು ಒಕ್ಕೂಟದ ಒಟ್ಟಾರೆ ಸ್ವರೂಪವನ್ನು ಬದಲಾಯಿಸಲು ನರೇಂದ್ರ ಮೋದಿಯವರು ತಮಗಿರುವ ಬಹುಮತವನ್ನು ದುರುಪಯೋಗಪಡಿಸಿಕೊಂಡಿರುವನ್ನು ದೃಢಪಡಿಸಿವೆ.

ದೇಶದಲ್ಲಿ ಎಲ್ಲವನ್ನು ಕೇಂದ್ರೀಕೃತಗೊಳಿಸುವ ಮೋದಿಯವರ ನೀತಿಗಳುˌ ಆಡಳಿತಾತ್ಮಕ ಪಾಲಿಸಿಗಳ ಬುಲ್ಡೋಜ್ ಪ್ರವೃತ್ತಿ ˌ ಒಂದೇ ಭಾಷೆˌ ಒಂದೇ ದೇಶ ಎನ್ನುವ ಹಿಂದೂ-ಹಿಂದೀಕರಣದ ಪ್ರಯತ್ನಗಳು ಭಾರತೀಯ ಒಕ್ಕೂಟದಲ್ಲಿ ದಕ್ಷಿಣ ಭಾರತೀಯರನ್ನು ಗೌಣವಾಗಿಸುವ ಗುರುತರ ಪ್ರಯತ್ನದ ಭಾಗವಾಗಿದ್ದು ದಕ್ಷಿಣ ಭಾರತೀಯರನ್ನು ಆಳವಾಗಿ ಅನುಮಾನಿಸುವುದಂತೂ ಖಚಿತ. ಈ ಎಲ್ಲ ಉದ್ದೇಶಿತ ನಿರ್ಧಾರಗಳು ಸಹಜವಾಗಿ, ಮುಂದಿನ ಸಂಸತ್ ಚುನಾವಣೆಯ ನಂತರ ೨೦೨೬ ರಲ್ಲಿ ಅನುಷ್ಟಾನಕ್ಕೆ ಬರುತ್ತವೆ. ಬಿಜೆಪಿ ಮತ್ತು ಅದರ ಮಾತೃಸಂಸ್ಥೆಯ ದಶಕಗಳ ಪೂರ್ವನಿಯೋಜಿತ ಯೋಜನೆಗಳು ಅನುಷ್ಟಾನಗೊಳ್ಳಲು ಸಿದ್ಧವಾಗಿರುವುದನ್ನು ಈ ಬೆಳವಣಿಗೆಗಳು ಸ್ಪಷ್ಟಪಡಿಸುತ್ತಿವೆ. ನಿಯೋಜಿತ ಸಂಸತ್ ಭವನದ ಸದಸ್ಯರ ಆಸನ ಸಂಖ್ಯೆಯು ಮೋದಿ ಮತ್ತು ಬಿಜೆಪಿ ಅಂತಿಮವಾಗಿ ಲೋಕಸಭಾ ಸದಸ್ಯರ ಸೀಟುಗಳ ಮರುಹಂಚಿಕೆಯನ್ನು ಈ ಬಾರಿ ಮುಂದೂಡದೆ ಖಂಡಿತವಾಗಿ ಜಾರಿಗೆಗೊಳಿಸುತ್ತಾರೆ ಎನ್ನುವುದನ್ನು ದೃಢಪಡಿಸುತ್ತದೆ. ಆದರೆ ಈ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ ಸರಕಾರವು ಅದರ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕ ಚರ್ಚೆ ಮಾಡುವುದು ಅತ್ಯಗತ್ಯವಾಗಿದೆ.
ಆದರೆˌ ಈ ಹಿಂದೆಯೂ ಕೂಡ ಮೋದಿ ಸರಕಾರ ಅನೇಕ ವಿವಾದಾತ್ಮಕ ನಿರ್ಣಯಗಳು ಕೇಂದ್ರದಲ್ಲಿ ತಮಗಿರುವ ಬಹುಮತದ ಕಾರಣದಿಂದ ತೆಗೆದುಕೊಂಡಿದೆ. ಆಗ ಸರಕಾರ ವಿರೋಧ ಪಕ್ಷಗಳೊಡನೆ ಅಥವಾ ಸಾರ್ವಜನಿಕರೊಡನೆ ಇಲ್ಲವೆ ಕನಿಷ್ಟ ಸಂಬಂಧಿಸಿದ ವಿಷಯ ತಜ್ಞರೊಡನೆ ಸಮಾಲೋಚನೆ ಮಾಡದಿರುವುದನ್ನು ನಾವು ನೋಡಿದ್ದೇವೆ. ಈಗ ಕೂಡ ಉತ್ತರ ಭಾರತೀಯರ ರಾಜಕೀಯ ಪ್ರಾಬಲ್ಯವನ್ನು ಹೆಚ್ಚಿಸಲು ಮೋದಿ ಸರಕಾರ ಸಂಸತ್ ಸದಸ್ಯರ ಸಂಖ್ಯೆಯ ಹೆಚ್ಚಳದ ನಿರ್ಣಯ ತೆಗೆದುಕೊಂಡು ದಕ್ಷಿಣ ಭಾರತೀಯರನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ದೇಶಾದ್ಯಂತ ಆರ್ಥಿಕ ಅಭಿವೃದ್ಧಿ ಮತ್ತು ಜನಸಂಖ್ಯಾ ಮಾದರಿಗಳು ಏಕರೂಪವಾಗಿ ಅಭಿವೃದ್ಧಿ ಹೊಂದಿಲ್ಲ. ಉತ್ತರದ ಬಹುತೇಕ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ವಿಫಲವಾದರೆ ದಕ್ಷಿಣದ ರಾಜ್ಯಗಳು ಸಫಲವಾಗಿವೆ. ಈ ಸಂಗತಿಯು ಉತ್ತರ-ದಕ್ಷಿಣ ಭಾರತಗಳ ನಡುವೆ ದೊಡ್ಡ ಕಂದಕವನ್ನು ನಿರ್ಮಿಸಬಹುದಾಗಿದೆ. ಮೋದಿ ಸರಕಾರದ ನಿಯೋಜಿತ ಸಂಸತ್ ಸದಸ್ಯರ ಸಂಖ್ಯಾ ಹೆಚ್ಚಳ ಮತ್ತು ಡಿಲಿಮಿಟೇಶನ್ ಕ್ರೀಯೆಯು ಆರ್ಥಿಕ ಗುರುತ್ವ ಕೇಂದ್ರವು ದಕ್ಷಿಣದ ರಾಜ್ಯಗಳಿಗೆ ಮತ್ತು ರಾಜಕೀಯ ಗುರುತ್ವ ಕೇಂದ್ರವು ಉತ್ತರದ ರಾಜ್ಯಗಳಿಗೆ ಬದಲಾಗುವಂತೆ ಮಾಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಒಂದು ರಾಷ್ಟ್ರ ಒಂದು ತೆರಿಗೆ ಎನ್ನುವ ಪರಿಕಲ್ಪನೆಯನ್ನು ಆಡಳಿತಾತ್ಮಕವಾಗಿ ಅನುಷ್ಟಾನಗೊಳಿಸುವ ಮುನ್ನ ಒಮ್ಮತಕ್ಕೆ ಬರಲು ರಾಷ್ಟ್ರವು ೧೨ ವರ್ಷಗಳಿಗಿಂತ ಹೆಚ್ಚಿನ ಕಾಲಾವಧಿ ತೆಗೆದುಕೊಂಡಿದೆ. ಮೋದಿ ಸರಕಾರದ ಗುಪ್ತಸೂಚಿ ಎಂದೇ ಹೇಳಲಾಗುತ್ತಿರುವ ೨೦೨೬ ರ ಡಿಲಿಮಿಟೇಶನ್ ಯೋಜನೆ ಮತ್ತು ಅದರಿಂದುಂಟಾಗಬಹುದಾದ ದಕ್ಷಿಣ-ಉತ್ತರ ಭಾರತಗಳ ನಡುವಿನ ಕಂದಕದ ಸಮಸ್ಯೆಗಳನ್ನು ಪರಿಹರಿಸಲು ಈಗಿನಿಂದಲೇ ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಒಮ್ಮತದ ಪ್ರಯತ್ನಗಳು ಪ್ರಾರಂಭಿಸಸುವ ಅಗತ್ಯವಿದೆ. ಮೋದಿ ಸರಕಾರ ಈ ಕುರಿತು ಸಾರ್ವಜನಿಕರೊಂದಿಗೆˌ ವಿಪಕ್ಷಗಳೊಂದಿಗೆ ಹಾಗು ಸಂಬಂಧಿಸಿದ ತಜ್ಞರೊಂದಿಗೆ ಸಮಾಲೋಚಿಸುವ ಪ್ರಕ್ರೀಯೆ ಈಗಿನಿಂದಲೇ ಆರಂಭಿಸಬೇಕಿದೆ. ಅದಾಗದಿದ್ದರೆ ಭಾರತದ ಸಮಗ್ರತೆಗೆ ಹಾಗು ಭಾವೈಕ್ಯತೆಗೆ ಬಹುದೊಡ್ಡ ಗಂಡಾಂತರ ಬಂದೊದಗೂವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
~ಡಾ. ಜೆ ಎಸ್ ಪಾಟೀಲ.