ಈಗಾಗಲೇ ಸಾವರ್ಕರ್ ವಿಚಾರಕ್ಕೆ ಕೆಂಡದಂತಾಗಿರುವ ಶಿವಮೊಗ್ಗದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ವಿರೋಧ ಎದುರಾಗಿದೆ. RSS ಪ್ರಶಿಕ್ಷಣ ತರಬೇತಿ ಶಿಬಿರವನ್ನು ನಡೆಸಲು ನಿರ್ಧರಿಸಿರುವ ಜಾಗದಲ್ಲಿ ಅವಕಾಶ ನೀಡುವುದಿಲ್ಲ ಎಂದು ಬಂಜಾರ ಸಮುದಾಯ ಖಡಕ್ ಎಚ್ಚರಿಕೆ ನೀಡಿದೆ.
ಹೊನ್ನಾಳಿ ತಾಲೂಕಿನಲ್ಲಿರುವ ಸೊರಗೊಂಡನಕೊಪ್ಪದ ಸಂತ ಸೇವಾಲಾಲ್ ಸ್ಮಾರಕದ ಬಳಿ ಆರ್ಎಸ್ಎಸ್ ಪ್ರಶಿಕ್ಷಣ ತರಬೇತಿ ಶಿಬಿರ ನಡೆಸಲು ಆಯೋಜಿಸಿತ್ತು. ಆದರೆ ಈಗ ಆ ಕಾರ್ಯಕ್ರಮಕ್ಕೆ ಕಂಟಕ ಎದುರಾಗಿದೆ.
ಈ ಕುರಿತಾಗಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಬಂಜಾರ ವಿದ್ಯಾರ್ಥಿ ಸಂಘ ಹಾಗು ಮಹಾಮಂಡಳದ ಸದಸ್ಯರು, ಈ ಕಾರ್ಯಕ್ರಮ ಆಯೋಜಿಸಲು ಸಮುದಾಯದ ಮುಖಂಡರ ಅನುಮತಿ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೆಪ್ಟಂಬರ್ 11ರಿಂದ ಸೆಪ್ಟಂಬರ್ 19ರವರೆಗೆ ಪ್ರಶಿಕ್ಷಣ ತರಬೇತಿ ನಡೆಸಲು ಆರ್ಎಸ್ಎಸ್ ನಿರ್ಧರಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತಾಗಿ ಈಗಾಗಲೇ ಪ್ರಚಾರ ಕಾರ್ಯ ಕುಡಾ ಆರಂಭಿಸಿದ್ದಾರೆ. ಅನುಮತಿ ಪಡೆಯದೇ ಏಕಾಏಕಿ ಈ ರೀತಿ ಕಾರ್ಯಕ್ರಮ ನಡೆಸುತ್ತಿರುವುದು ಆಶ್ಚರ್ಯವಾಗಿದೆ. ಚುನಾವಣೆಯಲ್ಲಿ ಬಂಜಾರ ಸಮುದಾಯದ ಮತ ಸೆಳೆಯಲು ಈ ರಿತಿ ಮಾಡಲಾಗುತ್ತಿದೆ, ಎಂದು ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ನಾಯ್ಕ್ ಹೇಳಿದ್ದಾರೆ.
“ಸೊರಗೊಂಡನಕೊಪ್ಪ ಧಾರ್ಮಿಕ ಆಧ್ಯಾತ್ಮಕ ಕ್ಷೇತ್ರ. ಇದನ್ನು ರಾಜಕೀಯ ಕ್ಷೇತ್ರವಾಗಿ ಪರಿವರ್ತಿಸಲು ಬಿಡುವುದಿಲ್ಲ. ಅಂತಹ ಉದ್ದೇಶವಿರುವ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ನಮ್ಮ ಮಾತಿಗೂ ಮೀರಿ ಕಾರ್ಯಕ್ರಮ ನಡೆಸಿದರೆ ಒಗ್ಗಟ್ಟಿನ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.