ಕೋಲಾರ ಲೋಕಸಭಾ ಚುನಾವಣಾ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಜಂಗೀಕುಸ್ತಿ ಚುನಾವಣೆ ಮುಕ್ತಾಯವಾದರೂ ನಿಲ್ಲುವ ಲಕ್ಷಣ ಕಾಣಿಸ್ತಿಲ್ಲ. ಸಚಿವ ಕೆ.ಹೆಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕನ್ಫರ್ಮ್ ಆಗುತ್ತಿದ್ದಂತೆ ಕೋಲಾರ ಜಿಲ್ಲೆಯ ಮೂವರು ಶಾಸಕರು ಹಾಗು ಇಬ್ಬರು ಪರಿಷತ್ ಸದಸ್ಯರು ರಾಜೀನಾಮೆ ಪ್ರಹಸನಕ್ಕೆ ಮುಂದಾಗಿದ್ದಾರೆ. ವಿಧಾನಸಭಾ ಸ್ಪೀಕರ್ ಹಾಗು ವಿಧಾನಪರಿಷತ್ ಸಭಾಪತಿಗೆ ರಾಜೀನಾಮೆ ಪತ್ರ ನೀಡುವ ನಿರ್ಧಾರ ಮಾಡಿದ್ದಾರೆ.

ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡೋಣ, ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆ ಅವರ ಪರವಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಗೆಲ್ಲಿಸಿಕೊಂಡು ಬರೋಣ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದರು. ರಮೇಶ್ ಕುಮಾರ್ ಹಾಗು ಕೆ.ಹೆಚ್ ಮುನಿಯಪ್ಪರನ್ನು ಮುಖಾಮುಖಿ ಕೂರಿಸಿಕೊಂಡು ನಡೆಸಿದ ಸಂಧಾನ ಸಭೆಯಲ್ಲಿ ಒಂದು ಸಾಲಿನ ಅಜೆಂಡಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದರು. ಆದರೆ ಹೈಕಮಾಂಡ್ ಆಯ್ಕೆ ಚಿಕ್ಕಪೆದ್ದಣ್ಣ ಅನ್ನೋದು ಖಚಿತ ಆಗುತ್ತಿದ್ದಂತೆ ರಮೇಶ್ ಕುಮಾರ್ ಬಣದ ನಾಯಕರು ಹೈಡ್ರಾಮಾ ಶುರು ಮಾಡಿದ್ದಾರೆ.

ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಪರಿಷತ್ ಸದ್ಯರಾದ ನಸೀರ್ ಅಹ್ಮದ್, ಅನಿಲ್ ಕುಮಾರ್ ಸೇರಿ ಐವರು ರಾಜೀನಾಮೆ ನೀಡಲು ಮುಂದಾಗಿರುವ ಶಾಸಕರು. ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಲೂರು ಶಾಸಕ ಕೆ.ವೈ ನಂಜೇಗೌಡ, ಇಂದು ಕೋಲಾರ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಹಾಗು ಇಬ್ಬರು MLC ರಾಜಿನಾಮೆ ನೀಡುತ್ತೇವೆ. ಕೆ.ಹೆಚ್ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಸ್ಪೀಕರ್ ಕಚೇರಿ ಹಾಗು ಸಂಜೆ ವೇಳೆಗೆ ಮಂಗಳೂರಿಗೆ ತೆರಳಿ ಸ್ಪೀಕರ್ ಖಾದರ್ಗೆ ರಾಜೀನಾಮೆ ಪತ್ರ ನೀಡುತ್ತೇವೆ ಎಂದಿದ್ದಾರೆ.

ಕೋಲಾರ ಕಾಂಗ್ರೆಸ್ ಟಿಕೆಟ್ ಕಗ್ಗಂಟು ವಿಚಾರದ ಬಗ್ಗೆ ಮಾತನಾಡಿರುವ ಸಚಿವ ಕೆ ಎಚ್ ಮುನಿಯಪ್ಪ, ಇವತ್ತು ಸಾಯಂಕಾಲ ಟಿಕೆಟ್ ಕ್ಲಿಯರ್ ಆಗಬಹುದು. ರಮೇಶ್ ಕುಮಾರ್ ಆದಿಯಾಗಿ ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇವೆ. ಕೊತ್ತೂರು ಮಂಜುನಾಥ್, ನಂಜೇಗೌಡ, ಅನಿಲ್ ಕುಮಾರ್ ಸೇರಿ ಎಲ್ಲರ ಜೊತೆಗೂ ಚರ್ಚೆ ಆಗಿದೆ. ನಾನು ಕೋಲಾರದಲ್ಲಿ ಏಳು ಬಾರಿ ಗೆದ್ದಿದ್ದೇನೆ, ಅನುಭವ ಇದೆ. ಎಲ್ಲರಿಗೂ ಮನವಿ ಮಾಡಿದ್ದೇನೆ ಅವಕಾಶ ಮಾಡಿಕೊಡಿ ಅಂತ. ಆಶಾಭಾವನೆ ಇದೆ ಟಿಕೆಟ್ ಆಗಬಹುದು ಅಂತ. ಕೋಲಾರ ಚಿಕ್ಕಬಳ್ಳಾಪುರ ತಡವಾದರೂ ಕೂಡ ಒಗ್ಗಟ್ಟಾಗಿದ್ದೇವೆ. ಕೆಲ ಶಾಸಕರ ರಾಜೀನಾಮೆ ನೀಡುತ್ತೇವೆ ಎಂಬ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿ, ಅಭ್ಯರ್ಥಿ ಯಾರಾಗಬೇಕು ಎಂಬುದು ರಮೇಶ್ ಕುಮಾರ್ ಹಾಗೂ ಸಚಿವರ ಉಪಸ್ಥಿತಿಯಲ್ಲೇ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದವಾಗಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ ಅಂದಿದ್ದೇವೆ. ಇದಕ್ಕೆ ಮುಂದಾಳತ್ವ ರಮೇಶ್ ಕುಮಾರ್ ಅವರು ಎನ್ನುವ ಮೂಲಕ ಟಿಕೆಟ್ ನಮಗೆ ಸಿಗುತ್ತೆ, ಗೆಲ್ಲುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೃಷ್ಣಮಣಿ











