ಅಕ್ರಮ ಡಿನೋಟಿಷಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಕಳೆದ 2006-07ರ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವರ್ತೂರು-ವೈಟ್ ಪಿಲ್ಡ್ ಐಟಿ ಕಾರಿಡಾರ್ನಲ್ಲಿ ಐಟಿ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಎಕರೆಗಟ್ಟಲೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ.
ಅಕ್ರಮವಾಗಿ ಭೂಮಿ ಡಿನೋಟಿಫೈ ಮಾಡಿದ್ದಕ್ಕೆ ಸಂಬಂಧಿಸಿದಂತೆ ವಾಸುದೇವ ರೆಡ್ಡಿ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ಮೇರೆಗೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಡಿಸೆಂಬರ್ 21, 2015 ರಂದು ಎಫ್ಐಆರ್ ದಾಖಲಿಸಿದ್ದರು.