ಕೋಲಾರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಕಳೆದ ಜನವರಿ 9ರಂದು ಕೋಲಾರದಲ್ಲಿ ಮಹತ್ವದ ಸಭೆ ಮಾಡಿದ್ದ ಸಿದ್ದರಾಮಯ್ಯ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇನೆ ಎಂದು ಘೋಷಣೆ ಮಾಡಿದ್ದರು. ಅಂದಿನ ಸಭೆಗೂ ಮುನ್ನ ಕೆ.ಹೆಚ್ ಮುನಿಯಪ್ಪ ಅವರ ಮೆನೆಗೆ ಹೋಗಿದ್ದ ಸಿದ್ದರಾಮಯ್ಯ, ಮುನಿಯಪ್ಪ ಅವರನ್ನು ಕಾರ್ಯಕ್ರಮಕ್ಕೆ ಜೊತೆಯಲ್ಲಿ ಕರೆದುಕೊಂಡು ಹೋಗುವ ಮಹತ್ವದ ಹೆಜ್ಜೆ ಇರಿಸಿದ್ದರು. ಆದರೆ ಆ ಒಗ್ಗಟ್ಟು ಕೆಲವೇ ಗಂಟೆಗಳು ಉಳಿಯಲಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ವೇದಿಕೆ ಕಾರ್ಯಕ್ರಮ ಮುಗಿಸಿಕೊಂಡು ಶ್ರೀನಿವಾಸಗೌಡ ಮನೆಗೆ ಊಟಕ್ಕೆ ಹೊರಟಿದ್ದ ಸಿದ್ದರಾಮಯ್ಯ ಅಂಡ್ ಟೀಂ, ದಲಿತ ನಾಯಕ ಕೆ.ಹೆಚ್ ಮುನಿಯಪ್ಪ ಅವರನ್ನು ಬಿಟ್ಟು ಹೋಗಿದ್ದರು. ಒಬ್ಬಂಟಿಯಾಗಿ ವೇದಿಕೆಯಿಂದ ಹೊರಟು ಮನೆ ಸೇರಿದ್ದರು ಮುನಿಯಪ್ಪ.
‘ನಾನೇ ಗೆಲ್ಲೋದು’ ಪ್ರಜಾಧ್ವನಿಯಲ್ಲಿ ಬಣ್ಣ ಬಯಲು..!
ಕೋಲಾರದಲ್ಲಿ ಸಿದ್ದರಾಮಯ್ಯ ದಲಿತ ವಿರೋಧಿ ಯಾವುದೇ ಕಾರಣಕ್ಕೂ ಮತಗಳನ್ನು ಸಿದ್ದರಾಮಯ್ಯಗೆ ಹಾಕಬೇಡಿ ಎಂದು ಅಭಿಯಾನ ನಡೆಸಲಾಗಿದೆ. ಇನ್ನು ಕೋಲಾರದಲ್ಲಿ ಡಿಸಿ ಆಗಿದ್ದ ಡಿ.ಕೆ ರವಿ ಆತ್ಮಹತ್ಯೆಗೆ ಸಿದ್ದರಾಮಯ್ಯನೇ ಕಾರಣ, ಈ ಬಾರಿ ಕೋಲಾರದ ಜನರು ಡಿಕೆ ರವಿ ಸಾವಿಗೆ ಸೇಡು ತೀರಿಸಿಕೊಳ್ಳಬೇಕು ಎನ್ನುವ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಇದರ ನಡುವೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದು, ಕೋಲಾರದಲ್ಲಿ ಯಾರೇ ಸ್ಪರ್ಧೆ ಮಾಡಲಿ, ನಾನೇ ಗೆಲ್ಲೋದು ಎಂದು ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಆತ್ಮವಿಶ್ವಾದ ಮಾತುಗಳ ನಡುವೆ ಸೋಮವಾರ ಕೋಲಾರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು ರಮೇಶ್ ಕುಮಾರ್ ಬಣ ಹಾಗು ಕೆ.ಹೆಚ್ ಮುನಿಯಪ್ಪ ಬಣದ ಭಿನ್ನಾಭಿಪ್ರಾಯ ಹೊರಕ್ಕೆ ಬೀಳುವ ಸಾಧ್ಯತೆ ದಟ್ಟವಾಗಿದೆ.
JDS ಬೆಂಬಲಿಗನ ಮೇಲೆ ಸಿದ್ದು ಬೆಂಬಲಿಗನ ಗೂಂಡಾಗಿರಿ..!
ಕೋಲಾರದಲ್ಲಿ ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಬಿಜೆಪಿಯಿಂದ ವರ್ತೂರು ಪ್ರಕಾಶ್ ಕುರುಬ ಸಮುದಾಯದ ಅಭ್ಯರ್ಥಿಗಳಾಗಿದ್ದರೆ, ಜೆಡಿಎಸ್ನಿಂದ ಸಿ.ಎಂ.ಆರ್ ಶ್ರೀನಾಥ್ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಆಗಿದ್ದಾರೆ. ಈ ನಡುವೆ ಕುರುಬ ಸಮುದಾಯದ ಜಿಲ್ಲಾಧ್ಯಕ್ಷ ಜೆ ಕೆ ಜಯರಾಂ ಜೆಡಿಎಸ್ ಮುಖಂಡ ಕೆ.ಟಿ.ಆಶೋಕ್‌ಗೆ ಫೋನ್ನಲ್ಲಿ ಧಮ್ಕಿ ಹಾಕಿದ್ದಾರೆ. ಅಷ್ಟೇ ಅಲ್ಲ ‘ನೀನೇನು ಒಕ್ಕಲಿಗರಿಗೆ ಹುಟ್ಟಿದ್ಯಾ..?’ ಎಂದು ಕೊಟ್ಟಿರುವ ಹೇಳಿಕೆ ಒಕ್ಕಲಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಒಕ್ಕಲಿಗರು ಜೆಡಿಎಸ್ ಕಡೆಗೆ ವಾಲಿದ್ರೆ, ಕುರುಬರ ಮತಗಳು ಸಿದ್ದರಾಮಯ್ಯ ಹಾಗು ವರ್ತೂರು ಪ್ರಕಾಶ್ ನಡುವೆ ಹಂಚಿಕೆ ಆದ್ರೆ ಫಲಿತಾಂಶದ ಮೇಲೆ ಯಾವುದೇ ಪ್ರಬಾವ ಬೀರುವುದಿಲ್ಲ. ಆದರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಪರಿಶಿಷ್ಟ ಜಾತಿ ಹಾಗು ಮುಸ್ಲಿಂ ಸಮುದಾಯದ ಮತದಾರ ಮನಸ್ಸು ಗೆಲ್ಲುವ ನಾಯಕ ಗೆಲ್ಲುವುದು ನಿಶ್ಚಿತ. ಈಗಾಗಲೇ ದಲಿತ ನಾಯಕರ ವಿರುದ್ಧ ಮನಸ್ಥಿತಿ ಸಿದ್ದರಾಮಯ್ಯಗೆ ಇದೆ ಎನ್ನುವ ಸಂದೇಶ ರವಾನೆ ಆಗಿದ್ದು, ಸಿದ್ದರಾಮಯ್ಯ ಗೆಲುವಿಗೆ ಅಡ್ಡಿ ಆತಂಕ ಎದುರಾಗಿದೆ.

ಸಿದ್ದರಾಮಯ್ಯ ನಿಜವಾಗಲೂ ದಲಿತ ವಿರೋಧಿನಾ..?
ಅಹಿಂದ ನಾಯಕ ಎನ್ನುವ ಪಟ್ಟ ಪಡೆದುಕೊಂಡಿರುವ ಸಿದ್ದರಾಮಯ್ಯ, ನಿಜವಾಗಲೂ ದಲಿತ ವಿರೋಧಿನಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ದಲಿತ ವಿರೋಧಿ ಎನ್ನುವುದಕ್ಕೆ ಕೋಲಾರದ ಜನರು ಸಾಕಷ್ಟು ನಿದರ್ಶನಗಳನ್ನೂ ನೀಡಿದ್ದಾರೆ. 2014ರ ಮಧುಗಿರಿ ಚುನಾವಣೆಯಲ್ಲಿ ಡಾ ಜಿ ಪರಮೇಶ್ವರ್ ಅವರನ್ನು ಸೋಲಿಸಿ ಸಿದ್ದರಾಮಯ್ಯ ತಂತ್ರಗಾರಿಕೆ ಮೆರೆದಿದ್ದರು. ಒಂದು ವೇಳೆ ಅಂದು ಡಾ ಜಿ ಪರಮೇಶ್ವರ್ ಚುನಾವಣೆಯಲ್ಲಿ ಗೆಲುವು ಪಡೆದಿದ್ದರೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಲಿತ ನಾಯಕ ಪರಮೇಶ್ವರ್ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಇನ್ನು 2018ರಲ್ಲಿ ಜೆಡಿಎಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಸಿದ್ಧವಿತ್ತು. ಆದರೆ ಸಿದ್ದರಾಮಯ್ಯ ವಿರೋಧದಿಂದ ಆ ಸ್ಥಾನವೂ ತಪ್ಪಿತ್ತು. ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಪ್ರಭಾವಿ ನಾಯಕ ಕೆ.ಹೆಚ್ ಮುನಿಯಪ್ಪ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಆಪ್ತ ಬಣ ಎನ್ನುವ ಕಿಚ್ಚು ದಲಿತ ಸಮುದಾಯವನ್ನು ಕಾಡುತ್ತಿದೆ. ಇದಕ್ಕೆಲ್ಲಾ ಉತ್ತರ ಕೋಲಾರದಲ್ಲಿ ಕೊಡುತ್ತೇವೆ ಎನ್ನುವುದು ಆ ಸಮುದಾಯದ ಮಾತಾಗಿದೆ.
ಪ್ರಜಾಧ್ವನಿ ಯಾತ್ರೆಯಿಂದಲೂ ಮುಖಂಡರು ದೂರ..!
ಕೋಲಾರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ರಮೇಶ್ ಕುಮಾರ್ ಬಣ ತಯಾರಿ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಆದರೆ ಮುನಿಯಪ್ಪ ಬಣ ಪೂರ್ವ ಸಿದ್ಧತೆ ಕಾರ್ಯಕ್ರಮದಿಂದ ದೂರ ಉಳಿದುಕೊಂಡಿದೆ. ಕೆ.ಹೆಚ್ ಮುನಿಯಪ್ಪ ಅವರ ಭಾವಚಿತ್ರ ಫ್ಲೆಕ್ಸ್ಗಳಿಗೆ ಸೀಮಿತವಾಗಿದೆ. ಮುನಿಯಪ್ಪ ಭಾಗವಹಿಸುವಿಕೆ ದೂರದ ಮಾತು ಎಂದೇ ಹೇಳಲಾಗ್ತಿದೆ. ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದ ಸಿದ್ದರಾಮಯ್ಯ, ಊಟಕ್ಕೆ ಹೋಗುವಾಗ ದಲಿತ ಎನ್ನುವ ಕಾರಣಕ್ಕೆ ಬಿಟ್ಟು ಹೋದರು ಎನ್ನುವ ಮಾತುಗಳು ಕೋಲಾರದಲ್ಲಿ ಹರಡಿದೆ. ಇದು ಸಿದ್ದರಾಮಯ್ಯ ವಿಶ್ವಾಸಕ್ಕೆ ಧಕ್ಕೆ ತರುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಬಹುದು.