ಬೆಂಗಳೂರು, ಆ. 2: ಧರ್ಮ ಎಂದರೆ ಕೇವಲ ಪೂಜೆ-ಪುನಸ್ಕಾರವಲ್ಲ; ಸತ್ಯ, ಶಿಸ್ತು, ನೀತಿ, ಪ್ರಾಮಾಣಿಕತೆ ಹಾಗೂ ಎಲ್ಲರನ್ನು ಸಮಾನವಾಗಿ ಕಾಣುವ ಮಾನವೀಯತೆಯೇ ನಿಜವಾದ ಧರ್ಮ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಭಾರತ್ ನಗರದಲ್ಲಿ ಭಾನುವಾರ ನಡೆದ ಧರ್ಮಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಧರ್ಮವೇ ವಿಶ್ವಕ್ಕೆ ಶಾಂತಿ ತರುವ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.

“ವೀರ ಗಂಗಾಧರ ಅಜ್ಜಯ್ಯ ಅವರು ಸಾಹಿತ್ಯ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ದಾರಿದೀಪರಾಗಿದ್ದಾರೆ. ನಾವೆಲ್ಲರೂ ಅವರು ತೋರಿದ ಹಾದಿಯಲ್ಲಿ ಸಾಗಬೇಕು. ದೇವರು ಒಬ್ಬನೇ, ಆತನಿಗೆ ಹೆಸರುಗಳು ಮಾತ್ರ ಹಲವು” ಎಂದು ಹೇಳಿದರು.ರಂಭಾಪುರಿ ಶ್ರೀಗಳು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಎಂಬ ಆಶಯ ಹೊಂದಿದ್ದರು ಎಂದು ಸ್ಮರಿಸಿದ ಸಿಎಂ, “ಮಠದಲ್ಲೇ ಅವರ ದರ್ಶನ ಮಾಡಬೇಕೆಂದುಕೊಂಡಿದ್ದೆ. ಆದರೆ ಬೆಂಗಳೂರಿನಲ್ಲೇ ಅವರ ಆಶೀರ್ವಾದ ದೊರೆಯಿತು. ಅದು ನನ್ನ ಭಾಗ್ಯ” ಎಂದು ಭಾವುಕರಾದರು.

ವೀರಶೈವ-ಲಿಂಗಾಯತ ಧರ್ಮ ವಿಚಾರದಲ್ಲಿ ಹಿಂದೆ ಸರ್ಕಾರದ ಅವಧಿಯಲ್ಲಿ ಉಂಟಾದ ಗೊಂದಲವನ್ನು ನೆನಪಿಸಿಕೊಂಡ ಅವರು, “ಆ ಸಂದರ್ಭದಲ್ಲಿ ನಾನು ಲಕ್ಷ್ಮೇಶ್ವರದಲ್ಲಿ ರಂಭಾಪುರಿ ಶ್ರೀಗಳ ಬಳಿ ಹೋಗಿ ನಮ್ಮ ಪಕ್ಷದಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದೆ. ಅದಕ್ಕಾಗಿ ಸಾಕಷ್ಟು ಟೀಕೆಗಳಾದರೂ, ಇಂದು ನಾವು ಮಾಡಿದ ಕೆಲಸವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ” ಎಂದರು.

ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಸಿಎಂ, “ಬರವನ್ನು ಯಾರೂ ತಂದುಕೊಡುವುದಿಲ್ಲ. ಎರಡು-ಮೂರು ವರ್ಷಗಳಿಗೊಮ್ಮೆ ಬರ ಬರುವುದು ಪ್ರಕೃತಿಯ ನಿಯಮ. ಈಗ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಸುಮಾರು 70 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ” ಎಂದು ಹೇಳಿದರು.”ನನ್ನನ್ನು ರಾಜ್ಯದ ದೊರೆ ಎಂದು ಕರೆಯಬೇಡಿ. ದೊರೆಗಳ ಕಾಲ ಮುಗಿದಿದೆ. ಈಗ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಯುಗ. ನನಗೆ ಇತಿಹಾಸ ಓದುವುದಕ್ಕಿಂತ ಇತಿಹಾಸ ಸೃಷ್ಟಿಸುವ ಆಸಕ್ತಿ ಹೆಚ್ಚು” ಎಂದು ಅವರು ಹೇಳಿದರು.

ಬಸವಣ್ಣನವರ “ಕಾಯಕವೇ ಕೈಲಾಸ” ತತ್ವವನ್ನು ಉಲ್ಲೇಖಿಸಿದ ಸಿಎಂ, “ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವ ಪ್ರತಿಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳುತ್ತೇನೆ. ನಮ್ಮ ಹುಟ್ಟು-ಸಾವಿನ ನಡುವಿನ ಜೀವನದಲ್ಲಿ ಸಮಾಜಕ್ಕೆ ಉಪಯೋಗವಾಗುವ ಸಾಧನೆ ಮಾಡಬೇಕು” ಎಂದು ಕರೆ ನೀಡಿದರು.ರಂಭಾಪುರಿ ಮಠವು ಎಲ್ಲ ವರ್ಗದ ಜನರಿಗೆ ಸಮಾನವಾಗಿ ಮಾರ್ಗದರ್ಶನ ನೀಡುತ್ತಿರುವ ಮಹತ್ವದ ಧಾರ್ಮಿಕ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದ ಅವರು, ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಜನರು ಮಠಗಳಿಗೆ ಉದಾರವಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಮ್ಮ ವಿದ್ಯಾರ್ಥಿ ಜೀವನದಿಂದಲೇ ರಂಭಾಪುರಿ ಮಠದೊಂದಿಗೆ ನಂಟು ಬೆಳೆಸಿಕೊಂಡಿರುವುದನ್ನು ನೆನಪಿಸಿಕೊಂಡ ಸಿಎಂ, “ಗುರುವೇ ಶಿವ, ಗುರುವೇ ಪ್ರಸಾದ, ಗುರುವೇ ಆಚಾರ. ಧರ್ಮೋ ರಕ್ಷತಿ ರಕ್ಷಿತಃ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ” ಎಂದು ಹೇಳಿದರು.






