ರಾಜ್ಯದ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತೇರ್ಗಡೆಯಾಗಲು ಅಗತ್ಯವಿರುವ ಕನಿಷ್ಠ ಅಂಕಗಳನ್ನು ತಿಳಿಸಿದೆ. ರಾಜ್ಯ ಸರಕಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಗಾಗಿ ಕರುಡು ನಿಯಮಾವಳಿ ಪ್ರಕಟಿಸಿದ್ದು, ಶೇ.35ರಷ್ಟಿದ್ದ ಉತ್ತೀರ್ಣ ಅಂಕವನ್ನು ಶೇ.33ಕ್ಕೆ ಇಳಿಕೆ ಮಾಡಿದೆ. ಇದರಿಂದಾಗಿ ಕೇಂದ್ರ ಪಠ್ಯಕ್ರಮದ ಮಾದರಿಯನ್ನೇ ರಾಜ್ಯ ಪಠ್ಯಕ್ರಮದಲ್ಲೂಅನುಸರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ: ಒಟ್ಟು 625 ಅಂಕಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಿದ್ಯಾರ್ಥಿಗಳು ಕನಿಷ್ಠ 206 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ದ್ವಿತೀಯಪಿಯುಸಿ ವಿದ್ಯಾರ್ಥಿಗಳಿಗೆ: ಒಟ್ಟು 600 ಅಂಕಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 198 ಅಂಕಗಳನ್ನು ಗಳಿಸುವುದು ಅನಿವಾರ್ಯವಾಗಿದೆ. ಈ ಕನಿಷ್ಠ ಅಂಕಗಳು ಕೇವಲ ತೇರ್ಗಡೆಯ ಮಾನದಂಡವಾಗಿದ್ದು, ಉನ್ನತ ಶಿಕ್ಷಣದ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸುವುದು ಅತ್ಯಗತ್ಯವಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಪ್ರಸ್ತುತ 625 ಅಂಕಗಳಿಗೆ ಕನಿಷ್ಠ ಶೇ. 35ರಷ್ಟು (219 ಅಂಕಗಳು) ಗಳಿಸುವುದು ಕಡ್ಡಾಯವಿತ್ತು. ಹೊಸ ನಿಯಮದ ಪ್ರಕಾರ, 625 ಅಂಕಗಳಿಗೆ ಕನಿಷ್ಠ 206 ಅಂಕ (ಶೇ. 33) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ 30 ಅಂಕ ಪಡೆಯಲೇಬೇಕು.
ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣವಾಗಲು 600 ಅಂಕಗಳಿಗೆ ಕನಿಷ್ಠ ಶೇ. 35ರಷ್ಟು (210 ಅಂಕಗಳು) ಪಡೆಯಬೇಕಿತ್ತು. ಹೊಸ ನಿಯಮದಂತೆ, 600 ಅಂಕಗಳಿಗೆ ಕನಿಷ್ಠ 198 ಅಂಕ (ಶೇ. 33) ಪಡೆದರೆ ಪಾಸ್ ಆಗುತ್ತಾರೆ. ಪ್ರತಿ ವಿಷಯದಲ್ಲಿ ಲಿಖಿತ ಮತ್ತು ಆಂತರಿಕ ಅಂಕ ಸೇರಿ 30 ಅಂಕ ಬರುವುದು ಕಡ್ಡಾಯ.
ಕನ್ನಡ ಸೇರಿದಂತೆ ಪ್ರಥಮ ಭಾಷಾ ವಿಷಯಕ್ಕೆ 125 ಅಂಕಗಳಿಗೆ (100 ಅಂಕಗಳಿಗೆ ಲಿಖಿತ ಪರೀಕ್ಷೆ-25 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಪರೀಕ್ಷೆ ಬರೆಯಬೇಕಿತ್ತು. ಉಳಿದ ದ್ವಿತೀಯ ಹಾಗೂ ತೃತೀಯ ಭಾಷೆ ಹಾಗೂ ಕೋರ್ ಸಬ್ಜೆಕ್ಟ್ಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 100 ಅಂಕಗಳಿಗೆ (80 ಅಂಕಗಳಿಗೆ ಲಿಖಿತ ಪರೀಕ್ಷೆ-20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಪರೀಕ್ಷೆ ಬರೆಯಬೇಕಿತ್ತು. ಈಗಲೂ ವಿಷಯವಾರು ಪರೀಕ್ಷೆಗೆ ಇದೇ ಅಂಕಗಳೇ ಮುಂದುವರೆಯಲಿವೆ. ಆದರೆ, ಪಾಸಾಗಲು ಬೇಕಿರುವ ಅಂಕ ಮಾತ್ರ ಬದಲಾವಣೆ ಆಗಲಿದೆ.






