ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ (Hijab Row) ದಿನ ಕಳೆದಂತೆ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಹೆಗಲ ಮೇಲೆ ಹಾಕುವ ದುಪ್ಪಟ್ಟಾವನ್ನು ತಲೆ ಮೇಲೆ ಹಾಕುವುದರಿಂದ ಉಂಟಾದ ಯಕಶ್ಚಿತ್ ವಿವಾದವೇ ಈ ಹಿಜಾಬ್ ವಿವಾದ. ಈ ಮೂಲಕ ಸಂಘಪರಿವಾರ ಕರ್ನಾಟಕವನ್ನು ತಮ್ಮ ಟೆಸ್ಟಿಂಗ್ ಲ್ಯಾಬ್ ಅನ್ನಾಗಿ ಮಾರ್ಪಾಡು ಮಾಡಿದರೇ ಎಂಬ ಅನುಮಾನ ಈ ಹಿಜಾಬ್ ವಿವಾದದ ಸುತ್ತ ಸುತ್ತುತ್ತಿದೆ.
ಕರ್ನಾಟಕದಲ್ಲಿ ಐಪಿಎಸ್ ಹುದ್ದೆಯಲ್ಲಿದ್ದ ಮಾಜಿ ಅಧಿಕಾರಿ ಅಣ್ಣಾಮಲೈ ತಮಿಳುನಾಡಿನಲ್ಲಿ ನಾವು (ಬಿಜೆಪಿ) ಅಧಿಕಾರಕ್ಕೆ ಬಂದರೆ ಹಿಜಾಬ್ ಧರಿಸಲು ಅವಕಾಶ ಕೊಡುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದರು. ಜೊತೆ ಜೊತೆಗೆ ಪಕ್ಕದ ಆಂಧ್ರ, ಕೇರಳದಲ್ಲೂ ಬಿಜೆಪಿ ಹುಟ್ಟು ಹಾಕಿದ ಈ ಹಿಜಾಬ್ ವಿವಾದ ಪ್ರತಿಧ್ವನಿಸಿ, ರಾಜಕೀಯ ಮೇಲಾಟಗಳು ಶುರುವಾಗಿದೆ.
ಅತ್ತ ಪಂಚರಾಜ್ಯ ಚುನಾವಣೆಯ ಮೇಲೂ ಈ ಹಿಜಾಬ್ ವಿವಾದ ಪ್ರತಿಬಿಂಬಿಸಲಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿದೆ. ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಹಿಜಾಬ್ ವಿವಾದ ಮುಂದಿಟ್ಟುಕೊಂಡು ಭಾಜಪ ಲಾಭ ಪಡೆಯುವ ಸಾಧ್ಯತೆಯೇ ಹೆಚ್ಚು. ಬಾಂಬ್ ಸ್ಫೋಟ ಪ್ರಕರಣದ ಆರೋಪ ಹೊತ್ತಿರುವ ಸಾದ್ವಿ ಪ್ರಜ್ಞಾ ಸಿಂಗ್ ಎಂಬ ಮಹಿಳಾ ರಾಜಕಾರಣಿ ಕೂಡ ಹಿಜಾಬ್ ಬಗ್ಗೆ ಘಂಟಾಘೋಷವಾಗಿ ಹೇಳಿಕೆ ಕೊಟ್ಟು ಚುನಾವಣಾ ದಾಳವಾಗಿಸಿಕೊಂಡರು.
ಹೀಗೆ ಕರ್ನಾಟಕದ ಉಡುಪಿ ಎಂಬ ಸರಾಸರಿ ಜನಸಂಖ್ಯೆ ಹೊಂದಿರುವ ಜಿಲ್ಲೆಯೊಂದರಲ್ಲಿ ನಡೆದ ವಿವಾದ ಸಂಘರ್ಷವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಷ್ಟ್ರವ್ಯಾಪಿಯಾಗಿ ಲಾಭ ಪಡೆದುಕೊಳ್ಳಲು ಮುಂದಾಗಿರುವುದು ನೋಡಿದರೆ ಈ ವಿವಾದ ಹಿಜಾಬ್ ಕೇವಲ ಕಾಕತಾಳೀಯ ಅಲ್ಲ ಇದರ ಹಿಂದೆ ಸೂಕ್ಷ್ಮವಾಗಿ ತಯಾರಿಸಲಾದ ಷಡ್ಯಂತ್ರವೊಂದು ಕೆಲಸ ಮಾಡಿದೆ ಎಂದು ಅರ್ಥವಾಗಲಿದೆ.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗಿ ಮುನ್ನೆಲೆಗೆ ಬಂದಾಗ ಗುಜರಾತ್ ಮಾಡೆಲ್ ಎಂಬ ವಿಷಯವನ್ನು ಮುನ್ನೆಲೆಗೆ ತರಲಾಗಿತ್ತು. ಇಡೀ ದೇಶದ ಯಾವ ರಾಜ್ಯಗಳೂ ಅಭಿವೃದ್ಧಿ ಕಾಣದ ರೀತಿಯಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದ ಗುಜರಾತ್ ಅಭಿವೃದ್ಧಿ ಕಂಡಿದೆ ಎಂದು ಪೋಸ್ಟ್ ಕಾರ್ಡ್ ತಯಾರಿಸಿ ಹಂಚಲಾಯಿತು. ಇದನ್ನು ಅಕ್ಷರಶಃ ಜನರು ನಂಬಿ, ಮತದಾರೆ ಎರೆದು ಬಿಟ್ಟರು. ಅದಾದ ಬಳಿಕ ಗುಜರಾತ್ ಮಾಡೆಲ್ ಎಂಬುವುದು ಒಂದು ಟೂಲ್ ಕಿಟ್ ಎಂಬುವುದು ಫ್ಯಾಕ್ಟ್ ಚೆಕ್ ಗಳ ಮೂಲಕ ಸಾಬೀತಾಯಿತು. ಆದಾಗಿಯೂ ಮತ್ತೆ ಮತ್ತೆ ವಿದೇಶದಲ್ಲಿನ ಕೆಲ ನಗರಗಳ ಫೋಟೋ ಬಳಸಿಕೊಂಡು ಇದು ಗುಜರಾತ್ ಮೋದಿಯ ಸಾಧನೆ ಎಂದು ಬಿಂಬಿಸಲು ಹೊರಟಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳಲು ನಾಗಪುರದ ಐಟಿ ಸೆಲ್ ಗಳಿಗೆ ಸಾಧ್ಯವಾಗಿಲ್ಲ.
ಹೀಗಾಗಿ ಮುಂದಿನ ಹೆಜ್ಜೆಯಾಗಿ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶವವನ್ನು ‘ಮಾಡೆಲ್’ ಎಂದು ಬಿಂಬಿಸಲು ಶುರು ಮಾಡಿಕೊಂಡರು. ಇದೂ ಕೂಡ ಅಷ್ಟರ ಮಟ್ಟಿಗೆ ಯಶಸ್ಸು ಕಾಣದೆ ಮಕಾಡೆ ಮಲಗಿತು. ಹೀಗಾಗಿ ಸಮೀಪಿಸಿದ್ದ ಪಂಚ ರಾಜ್ಯ ಚುನಾವಣೆಗೆ ಬಿಜೆಪಿಗೆ ಮತ ಸೆಳೆಯಲು ಮುಸ್ಲಿಂ ವಿರೋಧಿಯಾದ ಒಂದು ಟೂಲ್ ಕಿಟ್ ಮುನ್ನೆಲೆಗೆ ತರುವ ಅಗತ್ಯತೆ ಇತ್ತು. ಇದುವೇ ಈ ಹಿಜಾಬ್ ವಿವಾದ. ಹೆಗಲ ಮೇಲೆ ಹಾಕಿಕೊಂಡರೆ ಸಮಸ್ಯೆ ಅಲ್ಲ ಎಂದೂ, ತಲೆ ಮೇಲೆ ಹಾಕಿದರೆ ಸಮಸ್ಯೆಯಂತೆ ಬಿಂಬಿಸಿ ಒಂದು ವಿವಾದವನ್ನು ಸಂಘಪರಿವಾರ ವ್ಯವಸ್ಥಿತವಾಗಿ ಹುಟ್ಟು ಹಾಕಿತು.
ಇದು ಕೇವಲ ಹಿಜಾಬ್ ವಿವಾದಕ್ಕೆ ಸೀಮಿತವಾಗಿನಿಲ್ಲದೆ ಇದರ ಹಿಂದೆ ಕರ್ನಾಟಕವನ್ನು ಬಿಜೆಪಿಯ ಟೆಸ್ಟಿಂಗ್ ಲ್ಯಾಬ್ ಮಾಡುವ ಹುನ್ನಾರವೂ ಅಡಗಿದೆ. ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಹಿಡಿತವಿಲ್ಲದ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಬಲವಾದ ಹಿಡಿತ ಸಾಧಿಸಿಕೊಳ್ಳುವ ಅನಿರ್ವಾಯತೆ ಇದೆ. ಹೀಗಾಗಿ ಈ ಹಿಜಾಬ್ ಒಂದು ಟೂಲ್ ಕಿಟ್ ಆಗಿ ಕರ್ನಾಟಕವನ್ನು ಸಂಘಪರಿವಾರದ ಪ್ರಯೋಗ ಶಾಲೆಯಾಗಿ ಕ್ರಮೇಣವಾಗಿ ಬದಲಾಗುತ್ತಿದೆ.