ನವದೆಹಲಿ:
ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮಂಡಿಸಿರುವ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025 ಕುರಿತು ಸಂಸದೀಯ ಸಂಯುಕ್ತ ಸಮಿತಿ (JPC) ಈ ವಾರ ಪ್ರಮುಖ ಸಭೆ ನಡೆಸಲಿದೆ. ಈ ಸಭೆಯಲ್ಲಿ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ – ಯುಜಿಸಿ(UGC),ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ – ಎಐಸಿಟಿಇ ಹಾಗೂ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್ – ಎನ್ಸಿಟಿ ಅಧಿಕಾರಿಗಳೊಂದಿಗೆ ಸಮಿತಿ ಚರ್ಚೆ ನಡೆಸಲಿದೆ.

ಈ ಮಸೂದೆ ದೇಶದ ಉನ್ನತ ಶಿಕ್ಷಣದ ನಿಯಂತ್ರಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ರಚಿಸುವ ಉದ್ದೇಶ ಹೊಂದಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಯುಜಿಸಿ, ಎಐಸಿಟಿಇ ಮತ್ತು ಎನ್ಸಿಟಿಇ ಸಂಸ್ಥೆಗಳ ಬದಲು ಒಂದೇ ಕೇಂದ್ರ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸುವ ಪ್ರಸ್ತಾವನೆ ಹೊಂದಿದೆ.

ಮಸೂದೆಯ ಪ್ರಕಾರ “ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಎಂಬ ಏಕೈಕ ಶ್ರೇಷ್ಟ ಸಂಸ್ಥೆಯನ್ನು ರಚಿಸಲಾಗುತ್ತದೆ. ಇದರ ಅಡಿಯಲ್ಲಿ ನಿಯಂತ್ರಣ, ಮಾನ್ಯತೆ (accreditation) ಹಾಗೂ ಶೈಕ್ಷಣಿಕ ಮಾನದಂಡಗಳನ್ನು ನಿರ್ಧರಿಸುವ ಮೂರು ಪ್ರತ್ಯೇಕ ಮಂಡಳಿಗಳನ್ನು ಸ್ಥಾಪಿಸುವ ಯೋಜನೆ ಇದೆ. ಸಂಸದೀಯ ಸಂಯುಕ್ತ ಸಮಿತಿ ಮಸೂದೆಯ ವಿಧಿಗಳನ್ನು ಪರಿಶೀಲಿಸಿ, ಶಿಕ್ಷಣ ತಜ್ಞರು ಹಾಗೂ ಸಂಬಂಧಿತ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆದು ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಲಿದೆ. ಈ ವರದಿ 2026ರ ಬಜೆಟ್ ಅಧಿವೇಶನದೊಳಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಮಸೂದೆ ಜಾರಿಗೆ ಬಂದರೆ ದೇಶದ ಉನ್ನತ ಶಿಕ್ಷಣದ ನಿಯಂತ್ರಣ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವ್ಯವಸ್ಥೆಯ ಮೂಲಕ ದೇಶದಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಒಂದೇ ರೀತಿಯ ನಿಯಮಗಳು, ಮಾನದಂಡಗಳು ಹಾಗೂ ಗುಣಮಟ್ಟದ ನಿಯಂತ್ರಣ ವ್ಯವಸ್ಥೆ ಜಾರಿಗೆ ಬರಬಹುದು. ಇದರಿಂದ ಆಡಳಿತ ಸರಳವಾಗುವುದು, ಅನೇಕ ನಿಯಂತ್ರಣ ಸಂಸ್ಥೆಗಳ ನಡುವೆ ಇರುವ ಗೊಂದಲ ಕಡಿಮೆಯಾಗುವುದು ಹಾಗೂ ಶಿಕ್ಷಣದ ಗುಣಮಟ್ಟವನ್ನು ಏಕೀಕೃತವಾಗಿ ಮೇಲ್ದರ್ಜೆಗೆ ತರುವ ಅವಕಾಶ ಸಿಗಬಹುದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.






