ತೆಲಂಗಾಣ ರಾಜ್ಯದ ಹೈದರಾಬಾದ್ನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ನಗರದ ಉತ್ತರ ಹಾಗೂ ಕೇಂದ್ರ ಭಾಗದಲ್ಲಿನ ಬಹುತೇಕ ಪ್ರದೇಶಗಳು ಮುಳುಗಡೆಯಾಗಿವೆ.
ಜು 20 ರಂದು ಸುರಿದ ಭಾರೀ ಮಳೆಯಿಂದ ಜನರು ಮನೆಯಿಂದ ಹೊರಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಮಿಯಾಪುರ್ನಲ್ಲಿಯ ಜೆಪಿ ನಗರ ಸಮುದಾಯ ಹಾಲ್ನ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ ಅಧಿಕ ಪ್ರಮಾಣದ 9 ಸೆಂ.ಮೀ ಮಳೆ ದಾಖಲಾಗಿದೆ. ಟೋಲಿಚೌಕಿ ಮತ್ತು ಹೈದರ್ನಗರದಲ್ಲಿ ತಲಾ 7 ಸೆಂ.ಮೀ ಮಳೆಯಾಗಿದೆ.
ತೆಲಂಗಾಣ ರಾಜ್ಯದ ಗುಜೂಲರಾಮರಾಮ್, ಕುಟಾಕ್ಪಲ್ಲಿ, ಕತ್ಬುಲ್ಲಾಪುರ್, ಜೀಡಿಮೆಟ್ಲಾ, ಪಟಂಚೆರು, ಯುಸುಫ್ಗುಡ, ರಾಮಚಂದ್ರಾಪುರಂ, ಬಿಎಚ್ಇಎಲ್, ಮೋತಿ ನಗರ್, ಜುಬ್ಲೀ ಹಿಲ್ಸ್ ಮತ್ತು ಬಂಜಾರಾ ಹಿಲ್ಸ್ ಪ್ರದೇಶಗಳಲ್ಲಿ 5 ಸೆಂ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿದೆ. ಅಲ್ವಾಲ್, ಲಂಗಾರ್ ಹೌಸ್, ಮುಂಡಾ ಮಾರ್ಕೆಟ್, ಕೈರತಾಬಾದ್, ಬಾಲಾನಗರ, ಖಾಜಾಗುಡ, ಅಮೀರ್ಪೇಟ್ ಮತ್ತು ಶ್ರೀನಗರ ಕಾಲೋನಿಯಲ್ಲಿ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದ ಮೂರು ದಿನಗಳಿಂದ ನಗರದಲ್ಲಿ ಮಂಜು ಮುಸುಕಿದ ವಾತಾವರಣವಿದ್ದು ಗುರುವಾರವೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತೆಲಂಗಾಣ ರಾಜ್ಯದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದೆ. ಇದರಿಂದ ವಾಹನ ಸಂಚಾರ ದುಸ್ತರವಾಗಿದೆ. ಸೆರಿಲಿಂಗಪಲ್ಲಿ ಬಳಿಯ ರೈಲು ಸೇತುವೆ ಕೆಳಗೆ ನೀರು ನಿಂತಿದ್ದು ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಹೈದರಾಬಾದ್ ಮಹಾನಗರ ಪಾಲಿಕೆಯ ವಿಚಕ್ಷಣ ದಳ, ವಿಪತ್ತು ನಿರ್ವಹಣಾ ದಳದ ಅಧಿಕಾರಿಗಳು ನಾಗರಿಕರಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ. ಯಾವುದೇ ರೀತಿಯ ಸಹಕಾರಕ್ಕಾಗಿ 9000113667 ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿದ್ದಾರೆ.
“ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಸೂಚನೆ ಮೇರೆಗೆ ರಾಜ್ಯದಲ್ಲಿನ ಮಳೆಯ ಮೇಲೆ ನಿಗಾ ಇರಿಸಲಾಗಿದೆ. ಭಾರೀ ಮಳೆಯ ಹಿನ್ನೆಲೆ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ” ಎಂದು ಶಿಕ್ಷಣ ಸಚಿವೆ ಪಿ.ಸಬಿತಾ ಇಂದ್ರ ರೆಡ್ಡಿ ಟ್ವೀಟ್ ಮೂಲಕ ಹೇಳಿದ್ದಾರೆ.