ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ ಮತ್ತು ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು ಕೂಡ ಅಮಾನುಷವಾಗಿ ಹಲ್ಲೆ ನಡೆಸಿರುವುದು ಕನ್ನಡಕ್ಕೆ, ಕರ್ನಾಟಕಕ್ಕೆ ಬಗೆದ ದೊಡ್ಡ ದ್ರೋಹ ಕಿಡಿಕಾರಿದ್ದಾರೆ.
ಡಿಸಿಪಿ ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳು ಇಬ್ಬರು ಬಾಲಕನ ವಿಷಯದಲ್ಲಿ ಕ್ರೂರವಾಗಿ ವರ್ತಿಸಿ ದರ್ಪ ತೋರಿಸಿರುವುದು ಸರಿಯಲ್ಲ. ಡಿಸಿಪಿ ಅಧಿಕಾರಿ ಆ ಬಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿ, ಬೂಟು ಕಾಲಿನಿಂದ ಒದ್ದಿರುವುದು ಅಕ್ಷಮ್ಯ ಹಾಗೂ ಅನಾಗರಿಕ ವರ್ತನೆ ಎಂದು ಬೇಸರಿಸಿದ್ದಾರೆ.
ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಬಾಲಕನ ಮೇಲೆ ಹಲ್ಲೆ ನಡೆಸಿದ ಇತರೆ ಬಾಲಕರನ್ನು ವಶಕ್ಕೆ ಪಡೆದು, ಅವರಿಗೆ ಚಿತಾವಣೆ ನೀಡಿದವರನ್ನು ಬಂಧಿಸಬೇಕು ಹಾಗೂ ಕನ್ನಡ ಬಾವುಟ ಹಾರಿಸಿದ ಬಾಲಕನ ಮೇಲೆ ದುಂಡಾವರ್ತನೆ ತೋರಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸಾವಮಿ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.