ದೇಶದ ಹಣಕಾಸು ಮಾರುಕಟ್ಟೆಯ ಇತಿಹಾಸದಲ್ಲೇ ಅತಿ ದೊಡ್ಡದಾದ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ದೇಶದ ಅತಿದೊಡ್ಡ ಗೃಹ ಹಣಕಾಸು ಸಂಸ್ಥೆಯಾಗಿರುವ ಎಚ್ಡಿಎಫ್ಸಿಯು ಎಚ್ಡಿಎಫ್ಸಿ ಬ್ಯಾಂಕ್ ನೊಂದಿಗೆ ವಿಲೀನ ಗೊಳ್ಳುತ್ತಿದೆ.
ಈ ವಿಲೀನ ಪ್ರಕ್ರಿಯೆಯೊಂದಿಗೆ ಎಚ್ಡಿಎಫ್ಸಿ ಬ್ಯಾಂಕ್ ದೇಶದ ಅತಿದೊಡ್ಡ ಬ್ಯಾಂಕ್ ಆಗಿ ಉದಯಿಸುವುದಲ್ಲದೇ, ಷೇರುಪೇಟೆಯಲ್ಲಿ ಮಾರುಕಟ್ಟೆ ಬಂಡವಾಳದ ಲೆಕ್ಕದಲ್ಲಿ ಮೂರನೇ ಅತಿದೊಡ್ಡ ಕಂಪನಿಯಾಗಲಿದೆ.
ಎಚ್ಡಿಎಫ್ಸಿ- ಎಚ್ಡಿಎಫ್ಸಿ ಬ್ಯಾಂಕ್ ವಿಲೀನಗೊಳಿಸುವ ವಿಷಯ ಸೋಮವಾರ ಪ್ರಕಟಗೊಳ್ಳುತ್ತಿದ್ದಂತೆ ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳ ದರ ಶೇ.10ರಷ್ಟು ಜಿಗಿದವು. ಅಷ್ಟೇ ಅಲ್ಲದೇ, ಈ ವಿಲೀನದ ಸುದ್ಧಿಯಿಂದಾಗಿ ಷೇರುಪೇಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಶೇ.2ರಷ್ಟು ಏರಿಕೆ ದಾಖಲಿಸಿವೆ.
ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳ ಮಾರುಕಟ್ಟೆದರಗಳಲ್ಲಿ ವ್ಯತ್ಯಾಸ ಇರುವುದರಿಂದ ಎಚ್ಡಿಎಫ್ಸಿಯ ಪ್ರತಿ 25 ಷೇರುಗಳಿಗೆ ಎಚ್ಡಿಎಫ್ಸಿ ಬ್ಯಾಂಕ್ ನ 42 ಷೇರುಗಳನ್ನು ನೀಡಲಾಗುತ್ತದೆ.
“ಇದು ಸಮಾನ ಶಕ್ತರ ವಿಲೀನವಾಗಿದೆ. ಕಳೆದ ಕೆಲವು ವರ್ಷಗಳಿಂದ,ಎಚ್ಡಿಎಫ್ಸಿ- ಎಚ್ಡಿಎಫ್ಸಿ ಬ್ಯಾಂಕ್ ವಿವಿಧ ನಿಯಮಾವಳಿಗಳನ್ನು ಸಮನ್ವಯಗೊಳಿಸಲಾಗಿದೆ, ಇದರಿಂದಾಗಿ ಸಂಭಾವ್ಯ ವಿಲೀನವನ್ನು ಸಕ್ರಿಯಗೊಳಿಸಲಾಗಿದೆ” ಎಂದು ಎಚ್ಡಿಎಫ್ಸಿ ಅಧ್ಯಕ್ಷ ದೀಪಕ್ ಪರೇಖ್ ತಿಳಿಸಿದ್ದಾರೆ.
ವಿಲೀನವು ನಿಫ್ಟಿ 50 ಸೂಚ್ಯಂಕದಲ್ಲಿ ವೇಟೇಜ್ ದೃಷ್ಟಿಯಿಂದ ಅತಿದೊಡ್ಡ ಷೇರಾಗಿ ಉದಯಿಸಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಪ್ರಸ್ತುತ ಶೇ.11.9 ವೇಟೇಜ್ ಹೊಂದಿದೆ. ಎಚ್ಡಿಎಫ್ಸಿ ಬ್ಯಾಂಕ್ನ ವೇಟೇಜ್ ಶೇಕಡಾ 8.4 ರಷ್ಟಿದ್ದರೆ, ಎಚ್ಡಿಎಫ್ಸಿಯ ವೇಟೇಜ್ 5.66 ರಷ್ಟಿದ್ದು, ವಿಲೀನದ ನಂತರದ ವೇಟೇಜ್ ಶೇ.12ಕ್ಕೆ ಏರಲಿದೆ. ಜತೆಗೆ ಮಾರುಕಟ್ಟೆ ಬಂಡವಾಳ ಮೌಲ್ಯವು ಸುಮಾರು 12.8 ಲಕ್ಷ ಕೋಟಿ ರೂಪಾಯಿಗಳಷ್ಟಾಗಲಿದೆ. ಇದು ವಿಲೀನ ಪ್ರಕಟಣೆ ಪೂರ್ವದಲ್ಲಿದ್ದ ಅಂಕಿ ಅಂಶಗಳು. ವಿಲೀನ ಪ್ರಕಟಣೆ ಘೋಷಿಸಿದ ನಂತರ ಉಭಯ ಷೇರುಗಳೂ ಶೇ.10ರಷ್ಟು ಹೆಚ್ಚಳವಾಗಿದ್ದು ಮಾರುಕಟ್ಟೆ ಬಂಡವಾಳ ಮೌಲ್ಯವು 13.50 ಲಕ್ಷ ಕೋಟಿ ರೂಪಾಯಿಗಳಷ್ಟಾಗಲಿದೆ.
ಗ್ರಾಹಕರ ಹಿತಾಸಕ್ತಿಗಳು
ವಿಲೀನವು ಜಾರಿಗೆ ಬರುವವರೆಗೆ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ. ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲು 12 ರಿಂದ 18 ತಿಂಗಳುಗಳು ಬೇಕಾಗಬಹುದು. ಏಕೆಂದರೆ ವಿಲೀನ ಪ್ರಸ್ತಾವನೆಗೆ ವಿವಿಧ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆ ಅಗತ್ಯವಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ), ಪಿಂಚಣಿ ನಿಧಿಗಳ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಮತ್ತು ಸ್ಪರ್ಧಾತ್ಮಕ ಆಯೋಗ ಆಫ್ ಇಂಡಿಯಾ (ಸಿಸಿಐ) ಸೇರಿದಂತೆ ಹಲವು ಪ್ರಾಧಿಕಾರಗಳು ಪರಿಶೀಲನೆ ನಡೆಸಿ, ಗ್ರಾಹಕರ ಹಿತಸಕ್ತಿಗೆ ಧಕ್ಕೆಯಾಗದಂತೆ ವಿಲೀನ ಪ್ರಕ್ರಿಯೆ ನಡೆಯುತ್ತಿದೆಯೇ ಎಂಬುದನ್ನು ಪರಾಮರ್ಶಿಸಿ ಅನುಮೋದನೆ ನೀಡುತ್ತವೆ. ಹೀಗಾಗಿ 12 ರಿಂದ 18 ತಿಂಗಳು ಕಾಲಾವಕಾಶ ತೆಗೆದುಕೊಳ್ಳುತ್ತದೆ. ವಿಲೀನ ಪಕ್ರಿಯೆಯು ವಿತ್ತೀಯ ವರ್ಷ 2024ರ ತೃತೀಯ ತ್ರೈಮಾಸಿಕ ಅಥವಾ ನಾಲ್ಕನೇ ತ್ರೈಮಾಸಿಕದಲ್ಲಿ ಜಾರಿಗೆ ಬರಬಹುದು ಎಂದು ಅಂದಾಜಿಸಲಾಗಿದೆ.
“ವಿಲೀನ ಪ್ರಕ್ರಿಯೆ ಮುಗಿಯುವವರೆಗೂ ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಠೇವಣಿದಾರರು ಅವರು ಪಡೆಯುತ್ತಿರುವ ಈಗಿನ ಬಡ್ಡಿ ದರಗಳೇ ಮುಂದುವರೆಯುತ್ತವೆ. ವಿಲೀನದ ನಂತರ, ಬ್ಯಾಂಕ್ನ ಕಾರ್ಡ್ ದರಗಳಲ್ಲಿ ಸಮನ್ವಯತೆ ಇರುತ್ತದೆ, ”ಎಂದು ಎಚ್ಡಿಎಫ್ಸಿ ಬ್ಯಾಂಕ್ನ ಎಂಡಿ ಮತ್ತು ಸಿಇಒ ಶಶಿಧರ್ ಜಗದೀಶ್ ಹೇಳಿದ್ದಾರೆ. ಇದರರ್ಥ ವಿಲೀನ ಪ್ರಕ್ರಿಯೆ ಮುಗಿದು ಏಕಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಹಂತದ ನಂತರ ಠೇವಣಿದಾರರಿಗೆ ಬ್ಯಾಂಕಿನ ದರಗಳನ್ನು ನೀಡಲಾಗುವುದು.
ಅಲ್ಲಿಯವರೆಗೆ ಸಾಲಗಾರರು ಮತ್ತು ಠೇವಣಿದಾರರಿಗೆ ಯಥಾಸ್ಥಿತಿ ಇರುತ್ತದೆ.
ಪ್ರಸ್ತುತ, ಎಚ್ಡಿಎಫ್ಸಿ ಬ್ಯಾಂಕ್ ಎರಡು ವರ್ಷ ಮತ್ತು ಒಂಬತ್ತು ತಿಂಗಳ ಅವಧಿಯೊಂದಿಗೆ 2 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿ ಮೇಲೆ ವಾರ್ಷಿಕ 6.15- 6.35 ಪ್ರತಿಶತ ಬಡ್ಡಿ ನೀಡಲಾಗುತ್ತದೆ. ಅದೇ ಎಚ್ಡಿಎಫ್ಸಿ ಇದೇ ಅವಧಿಗಳಿಗಾಗಿ ಬ್ಯಾಂಕ್ ವಾರ್ಷಿಕ 5.2- 5.7 ಶೇಕಡಾ ಬಡ್ಡಿ ನೀಡುತ್ತಿದೆ. ಅಂದರೆ ವೀಲೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಚ್ಡಿಎಫ್ಸಿ ಠೇವಣಿದಾರರು ಬ್ಯಾಂಕಿಗೆ ಸರಿಸಮನಾದ ಬಡ್ಡಿದರ ಪಡೆಯಲಿದ್ದಾರೆ.
ಇದುವರೆಗೆ ಎಚ್ಡಿಎಫ್ಸಿ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದು, ಆರ್ಬಿಐ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ, ಎಚ್ಡಿಎಫ್ಸಿ ಬ್ಯಾಂಕ್ ನೊಂದಿಗೆ ವಿಲೀನಗೊಂಡ ನಂತರ ಆರ್ಬಿಐ ನಿಯಂತ್ರಣದ ವ್ಯಾಪ್ತಿಗೆ ಬರುತ್ತದೆ. ಹಾಗೂ ಆರ್ಬಿಐ ನಿರ್ದೇಶಿತ ಬಡ್ಡಿದರಗಳನ್ನು ಜಾರಿ ಮಾಡಬೇಕಾಗುತ್ತದೆ. ಎಚ್ಡಿಎಫ್ಸಿ ಬ್ಯಾಂಕ್ ನೊಂದಿಗೆ ಎಚ್ಡಿಎಫ್ಸಿ ವಿಲೀನಗೊಳ್ಳುವುದರಿಂದ ಸಂಯೋಜಿತ ಘಟಕವು ಬ್ಯಾಂಕಿಂಗ್ ಕಂಪನಿಯಾಗಿರುತ್ತದೆ. ಆದ್ದರಿಂದ ಬ್ಯಾಂಕ್ಗಳ ನಿಯಂತ್ರಕ ಚೌಕಟ್ಟು ಅನ್ವಯಿಸುತ್ತದೆ. ವಿಲೀನಗೊಂಡ ಘಟಕದ ಹೊಸ ಗ್ರಾಹಕರಿಗೆ ಬಾಹ್ಯ ಮಾನದಂಡ- ಸಂಯೋಜಿತ ದರಗಳನ್ನು ನೀಡಲಾಗುತ್ತದೆ. ವಿಲೀನದ ನಂತರ ಎಚ್ಡಿಎಫ್ಸಿಯ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಬಡ್ಡಿದರವನ್ನು ಬದಲಾಯಿಸುವ ಆಯ್ಕೆಯನ್ನು ನೀಡಲಾಗುತ್ತದೆ.