ಭಾರತದಲ್ಲಿ ಹಿಂದೂಗಳು ಮತ್ತು ಹಿಂದೂ ಧರ್ಮದ ಭವಿಷ್ಯದ ಬಗ್ಗೆ ಭಯದ ಮತ್ತು ಕಪೋಲ ಕಲ್ಪಿತ ಭಾವನೆ ಬಿತ್ತುವುದು ಬಲಪಂಥೀಯ ರಾಜಕೀಯದ ವಿಶಿಷ್ಟ ಲಕ್ಷಣವಾಗಿದೆ. ಅದರಲ್ಲೂ ಚುನಾವಣೆ ಮುಂದಿರುವಾಗ ಅಲ್ಪಸಂಖ್ಯಾತರಿಂದ, ವಿಶೇಷವಾಗಿ ಮುಸ್ಲಿಮರಿಂದ ಈ ದೇಶದ ಹಿಂದೂಗಳು ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಇತ್ತೀಚಿನ ಕೆಲ ವರ್ಷಗಳಲ್ಲಿ ಖಯಾಲಿಯೇ ಆಗಿದೆ. ಇದರ ಅಂಗವಾಗಿಯೇ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ‘ಧರ್ಮ ಸಂಸದ್’ ಹಿಂದುತ್ವದ ಪ್ರತಿಪಾದಕರಿಂದ ಪ್ರಚೋದನಕಾರಿ ಭಾಷಣಗಳಿಗೆ ಸಾಕ್ಷಿಯಾಯಿತು. ಆ ಸಮಾವೇಶದಲ್ಲಿ ಅನೇಕ ಧಾರ್ಮಿಕ ಸಂಘಟನೆಗಳ ಮುಖಂಡರು, ಭಾಷಣಕಾರರು ಮುಸ್ಲಿಮರ ವಿರುದ್ಧ ಸಂಘಟಿತ ಹಿಂಸಾಚಾರಕ್ಕೆ ಕರೆ ನೀಡಿದ್ದರು ಮತ್ತು ಮ್ಯಾನ್ಮಾರ್ ಮಾದರಿಯ ‘ಶುದ್ಧೀಕರಣ ಅಭಿಯಾನ’ಕ್ಕೆ ಕರೆಯನ್ನೂ ನೀಡಿದ್ದರು.
ಇದೀಗ ಹರಿದ್ವಾರದಲ್ಲಿ ಆಯೋಜಿಸಲಾಗಿದ್ದ ಧರ್ಮ ಸಂಸದ್‌ನಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪಿಗಳನ್ನು ಇನ್ನೂ ಯಾಕೆ ಬಂಧಿಸಿಲ್ಲ ಎಂಬ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಗೃಹ ಸಚಿವಾಲಯ ಮತ್ತು ದೆಹಲಿ ಹಾಗೂ ಉತ್ತರಾಖಂಡದ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಈ ಆದೇಶ ನೀಡಿದೆ.
ಹರಿದ್ವಾರ ಮತ್ತು ದೆಹಲಿಯಲ್ಲಿ ಭಾಷಣಕಾರರು ಮಾಡಿದ ಕೋಮುದ್ವೇಷದ ಘೋಷಣೆಗಳು ಹಿಂದೆ ಯಾವತ್ತೂ ನೋಡಿರಲೂ ಇಲ್ಲ, ಕೇಳಿರಲೂ ಇಲ್ಲ ಎಂದು ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ಇಂದಿರಾ ಜೈಸಿಂಗ್ ಪ್ರತಿಪಾದಿಸಿದ್ದು “ಅವರು ಒಂದಿಡೀ ಸಮುದಾಯವನ್ನು ನಿರ್ನಾಮ ಮಾಡಲು ಮುಕ್ತ ಕರೆ ನೀಡಿದ್ದಾರೆ” ಎಂದಿದ್ದಾರೆ.
ಜನವರಿ 23ರಂದು ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಧರ್ಮಸಂಸದ್ ಅಸಯೋಜಿಸಲಾಗಿದ್ದು ನ್ಯಾಯಾಲಯವು ಈ ಬಗ್ಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಉನಾ, ಕುರುಕ್ಷೇತ್ರ, ದಾಸ್ನಾ ಮತ್ತು ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ರಾಜ್ಯಗಳಲ್ಲಿ ‘ಧರ್ಮ ಸಂಸದ್’ಗಳನ್ನು ನಡೆಸಲಾಗುವುದು. ಇದರಿಂದ ಇಡೀ ದೇಶದ ವಾತಾವರಣ ಕಲುಷಿತವಾಗುವ ಅಪಾಯವಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ವಿಶೇಷವಾಗಿ ಜನವರಿ 23 ರಂದು ನಡೆಯುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರವೇ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕಪಿಲ್ ವ ನ್ಯಾಯಾಲಯವನ್ನು ಕೋರಿದ್ದಾರೆ. ಆದರೆ, ಸೋಮವಾರ ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯವು ದ್ವೇಷದ ಭಾಷಣದ ಇತರ ಪ್ರಕರಣಗಳೂ ನ್ಯಾಯಾಲಯದ ಮುಂದಿದ್ದು ಹರಿದ್ವಾರ ದ್ವೇಷ ಭಾಷಣ ಪ್ರಕರಣವನ್ನು ಪ್ರತ್ಯೇಕವಾಗಿ ಅಥವಾ ಹಿಂದಿನ ಪ್ರಕರಣಗಳೊಂದಿಗೆ 10 ದಿನಗಳ ನಂತರ ವಿಚಾರಣೆ ಮಾಡಲಾಗುವುದು ಎಂದು ಸಿಜೆಐ ಹೇಳಿದರು.

ಅರ್ಜಿದಾರರಾಗಿರುವ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ್ ಮತ್ತು ಪತ್ರಕರ್ತ ಕುರ್ಬಾನ್ ಅಲಿ, “ದ್ವೇಷ ಭಾಷಣಗಳು ಜನಾಂಗೀಯ ನಿರ್ಮೂಲನೆಯನ್ನು ಸಾಧಿಸುವ ಸಲುವಾಗಿ ಮುಸ್ಲಿಮರ ನರಮೇಧದ ಬಹಿರಂಗ ಕರೆಗಳನ್ನು ಒಳಗೊಂಡಿವೆ” ಎಂದು ಹೈಲೈಟ್ ಮಾಡಿದ್ದರು. ಈ ಭಾಷಣಗಳು ಕೇವಲ ದ್ವೇಷದ ಭಾಷಣಗಳಲ್ಲ, ಇಡೀ ಸಮುದಾಯದ ಹತ್ಯೆಗೆ ಮುಕ್ತ ಕರೆಯಾಗಿದೆ. ಈ ಭಾಷಣಗಳು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಗಂಭೀರ ಬೆದರಿಕೆಯನ್ನುಂಟುಮಾಡುತ್ತವೆ ಮತ್ತು ಲಕ್ಷಾಂತರ ಮುಸ್ಲಿಂ ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದ ಸಿಬಲ್ “ದೇಶದಲ್ಲಿ ಸತ್ಯಮೇವ ಜಯತೆಯಿಂದ ಶಸ್ತ್ರಮೇವ ಜಯತೇ ಎಂದು ಘೋಷಣೆಗಳು ಬದಲಾಗಿರುವ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಈಗಾಗಲೇ ಎಫ್‌ಐಆರ್‌ಗಳನ್ನು ದಾಖಲಿಸಿದ್ದರೂ ಯಾವುದೇ ತನಿಖೆ ಅಥವಾ ಬಂಧನಗಳನ್ನು ಮಾಡಲಾಗಿಲ್ಲ ಎಂದು ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಡಿಸೆಂಬರ್ 17 ಮತ್ತು 19 ರ ನಡುವೆ ಹರಿದ್ವಾರದಲ್ಲಿ ಯತಿ ನರಸಿಂಹಾನಂದ ಮತ್ತು ದೆಹಲಿಯಲ್ಲಿ ‘ಹಿಂದೂ ಯುವ ವಾಹಿನಿ’ ದ್ವೇಷದ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ದ್ವೇಷದ ಭಾಷಣಕಾರರೊಂದಿಗೆ ಪೊಲೀಸರೂ ಕೈಜೋಡಿಸಿದ್ದಾರೆ ಎಂಬ ಅನುಮಾನವನ್ನು ಕೆಲವು ವಿಡಿಯೋ ದೃಶ್ಯಾವಳಿಗಳು ಹುಟ್ಟುಹಾಕಿವೆ. ಭಾಷಣಕಾರರೊಬ್ಬರು ತಮಗೆ ಸಹಕಾರ ನೀಡಿರುವ ಪೊಲೀಸ್ ಅಧಿಕಾರಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಧರ್ಮ ಸಂಸದ್ ನಡೆದು ಮೂರು ವಾರಗಳೇ ಕಳೆದರೂ ಪೊಲೀಸ್ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿರುವುದು ಮತ್ತಷ್ಟು ಅನುಮಾನ ಹುಟ್ಟಿಸುತ್ತದೆ. IPC ಸೆಕ್ಷನ್ 1860ರ 120B, 121A 153Bಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಅವಕಾಶವಿದ್ದೂ ಪೊಲೀಸರು ಪ್ರಕರಣ ದಾಖಲಿಸಲಿಲ್ಲ. ಆದ್ದರಿಂದ ಮುಸ್ಲಿಂ ಸಮುದಾಯದ ವಿರುದ್ಧದ ದ್ವೇಷ ಭಾಷಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಅರ್ಜಿದಾರರು ಕೋರಿದ್ದಾರೆ.











