ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹರ್ ಘರ್ ತಿರಂಗ ಘೋಷಣೆ ಅತ್ಯಂತ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225ನೇ ಜಯಂತೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಹರ್ ಘರ್ ತಿರಂಗಾ ಅತ್ಯಂತ ಯಶಸ್ವಿಯಾಗಿ, ಅದ್ಭುತವಾಗಿಯಾಗಿದೆ. ಮುಂದಿನ 25 ವರ್ಷಕ್ಕೆ ಭದ್ರ ಬುನಾದಿಯಾಗಿದೆ. ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

75 ವರ್ಷದ ಸ್ವತಂತ್ರ್ಯೋತ್ಸವವನ್ನು ಇಡೀ ದೇಶವೇ ಆಚರಣೆ ಮಾಡುತ್ತಿದೆ. ದೇಶದಲ್ಲಿ 40 ಕೋಟಿ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ಕರ್ನಾಟಕದಲ್ಲಿ 1.25 ಕೋಟಿ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ಎಲ್ಲರೂ ಸೇರಿ ಸಂಭ್ರಮಿಸಬೇಕು. ಇದರಲ್ಲಿ ಜಾತಿ, ಮತ, ಪಕ್ಷ, ಪಂಗಡ ಇಲ್ಲ. ನಾವೆಲ್ಲರೂ ಭಾರತೀಯರು. ಒಗ್ಗಟ್ಟಾಗಿ ಒಂದಾಗಿ ಮಾಡಬೇಕು. ಎಷ್ಟು ಜನ ಇದರಲ್ಲಿ ಪಾಲ್ಗೊಳ್ಳುತ್ತಾರೆ ಅಷ್ಟು ಒಳ್ಳೆಯದ್ದು. ನಾನು ಎಲ್ಲವನ್ನೂ ಸ್ವಾಗತ ಮಾಡುತ್ತೇನೆ.ದೇಶ ಒಂದಾಗಿ ಎದ್ದು ನಿಲ್ಲಬೇಕೆಂದು ಎಲ್ಲರೂ ಸಹಕಾರ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಾವುಟದ ಬಗ್ಗೆ ಜಗಳ ಏನಿಲ್ಲ. ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಒಂದೇ. ಉಳಿದ ವೇಳೆ ಬೇರೆ. ಭಾರತದ ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.