ಕೇವಲ ಹತ್ತು ದಿನಗಳ ಒಳಗಾಗಿ ಭಾರತೀಯ ಅಂಚೆ ಇಲಾಖೆಯು ಒಂದು ಕೋಟಿಗೂ ಅಧಿಕ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಿದೆ. ದೇಶದಾದ್ಯಂತ ಇರುವ 1.5 ಲಕ್ಷ ಪೋಸ್ಟ್ ಆಫೀಸ್’ಗಳ ಮೂಲಕ ಹಾಗೂ ಆನ್ಲೈನ್ ಮಾರಾಟದ ಮೂಲಕ ಅಂಚೆ ಇಲಾಖೆ ಈ ದಾಖಲೆ ನಿರ್ಮಿಸಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಕೇಂದ್ರ ಸಂವಹನ ಇಲಾಖೆ, ಅಂಚೆ ಇಲಾಖೆಯು ಹರ್ ಘರ್ ತಿರಂಗ ಅಭಿಯಾನವನ್ನು ದೇಶದ ಪ್ರತಿ ಮನೆಗಳಿಗೂ ತಲುಪಿಸಿದೆ. ಆನ್ಲೈನ್ ಮೂಲಕ 1.75 ಲಕ್ಷ ಧ್ವಜಗಳನ್ನು ಮಾರಾಟ ಮಾಡಲಾಗಿದೆ. ದೇಶದ ಯಾವುದೇ ಮೂಲೆಗೂ ರಾಷ್ಟ್ರಧ್ವಜವನ್ನು ತಲುಪಿಸುವ ಗುರಿ ನಮ್ಮದಾಗಿದೆ, ಎಂದು ಹೇಳಿದೆ.
ಅಂಚೆ ಇಲಾಖೆಯು ಪ್ರತಿ ಧ್ವಜಕ್ಕೆ ರೂ. 25 ಶುಲ್ಕ ಪಡೆಯುತ್ತಿದೆ.ಈ ಮಾರಾಟವು ಆಗಸ್ಟ್ 15ರವರೆಗೂ ಇರಲಿದೆ. “ನಾಗರಿಕರು ಹತ್ತಿರದ ಪೋಸ್ಟ್ ಆಫೀಸ್’ಗೆ ಭೇಟಿ ನೀಡಬಹುದು ಅಥವಾ ಇಲಾಖೆಯ ಇ-ಪೋಸ್ಟ್ ಸೇವೆ ಮೂಲಕ ತಮ್ಮ ಮನೆಗೆ ರಾಷ್ಟ್ರಧ್ವಜವನ್ನು ತರಿಸಿಕೊಳ್ಳಬಹುದು. ಮನೆಗಳಲ್ಲಿ ಹಾರಿಸಿದ ಧ್ವಜದೊಂದಿಗೆ ತೆಗೆದ ಸೆಲ್ಫಿಯನ್ನು www.harghartiranga.com ಎಂಬ ವೆಬ್ಸೈಟಲ್ಲಿ ಅಪ್ಲೋಡ್ ಮಾಡಿ ದೇಶದ ಅತ್ಯಂತ ದೊಡ್ಡ ಉತ್ಸವದಲ್ಲಿ ಪಾಲ್ಗೊಳ್ಳಬಹುದು,” ಎಂದು ಇಲಾಖೆ ಹೇಳಿದೆ.