ಹಲವು ವರ್ಷಗಳಿಂದ ಕಾಲೇಜುಗಳಲ್ಲಿ ಪಾಠ ಮಾಡುತ್ತ ಜೀವನ ಸಾಗಿಸುತ್ತಿದ್ದ ಗುರುಗಳು ಇದೀಗ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದಾರೆ. ಸೇವಾ ಭದ್ರತೆ ಜೊತೆಗೆ ಖಾಯಂ ನೇಮಕಾತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಸಾವಿರಾರು ಉಪನ್ಯಾಸಕರು, ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಇದರ ಬಿಸಿ ಈಗ ರಾಜ್ಯ ಸರ್ಕಾರಕ್ಕೆ ಮುಟ್ಟಿದ್ದು ಶೀಘ್ರದಲ್ಲೇ ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಹೌದು, ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಮುಂದಾಗಿರುವ ಸರ್ಕಾರ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಈ ಕುರಿತಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದ್ದು, ರಾಜ್ಯದ 4 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ಶಿಕ್ಷಣಕ್ಷೇತ್ರ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರು ಮತ್ತು ಅತಿಥಿ ಉಪನ್ಯಾಸಕರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು, ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಕಳೆದ ತಿಂಗಳಿನಿಂದ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಪ್ರತಿಧ್ವನಿ ಸಾಲು ಸಾಲು ವರದಿ ಮಾಡಿತ್ತು ಇದರ ಪ್ರತಿಫಲವಾಗಿ ಅನೇಕ ವಿರೋಧ ಪಕ್ಷದ ನಾಯಕರು, ಮುಖಂಡರು ರಾಜ್ಯ ಸರ್ಕಾರವು ಪ್ರಶ್ನಿಸಿದ್ದರು. ಈಗ ಎಚ್ಚತ್ತ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಸಂಕ್ರಾಂತಿಯೊಳಗೆ ಬಗೆಹರಿಸುವುದಾಗಿ ಹೇಳಿದೆ.