ಕೇಂದ್ರ ಸರ್ಕಾರ ಒನ್ನೇಷನ್ ಒನ್ ಟ್ಯಾಕ್ಸ್ ನಿಯಮ ಮಾಡಿತ್ತು. ನೇರವಾಗಿ ಕೇಂದ್ರವೇ ತೆರಿಗೆ ಸಂಗ್ರಹಿಸಿ ರಾಜ್ಯದ ಪಾಲು ನೀಡುವ ನಿಯಮವಿದು. ಆದರೆ ಅಂಥಾ ಯೋಜನೆಗೂ ಬಿಬಿಎಂಪಿ ಟಕ್ಕರ್ ಕೊಟ್ಟು ಸಾವಿರಾರು ಕೋಟಿ ಉಂಡೇನಾಮೆ ಹಾಕಿರುವ ಆರೋಪ ಕೇಳಿ ಬಂದಿದೆ.
ಮಾಹಿತಿ ಹಕ್ಕು ಅಧ್ಯಯನ ಕೇಂದ್ರದಿಂದ ಬಿಬಿಎಂಪಿ ಮೇಲೆ ಗಂಭೀರ ಆರೋಪ.!!
ಬಿಬಿಎಂಪಿಯಲ್ಲಿ ಹಳೇ ಕಲ್ಲಿಗೆ ಹೊಸ ಬಿಲ್ಲು ಎನ್ನುವುದು ಬಹಳ ಹಿಂದಿನಿಂದಲೂ ಇರುವ ಕುಖ್ಯಾತಿ. ಈಗ ಆ ಸಾಲಿಗೆ ಹೊಸ ಆರೋಪವೊಂದು ಕೇಳಿ ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಯಾವ ಕಾಮಗಾರಿಗೂ GST ಮೊತ್ತ ಪಾವತಿಯಾಗುತ್ತಿಲ್ಲ ಎಂದು ಬೆಂಗಳೂರು ಮಾಹಿತಿ ಹಕ್ಕು ಕೇಂದ್ರ ಗಂಭೀರವಾಗಿ ಆರೋಪಿಸಿದೆ. ಬಿಬಿಎಂಪಿಯಲ್ಲಿ ನೀಡಲಾಗುತ್ತಿರುವ ಯಾವ ಟೆಂಡರ್ ಗೂ GST ಕಟ್ಟಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೇಂದ್ರದ One Nation – One Tax ಅಡಿಯಲ್ಲಿ ಕಡ್ಡಾಯವಾಗಿ GST ಕಟ್ಟಬೇಕು ಎಂಬ ನಿಯಮವಿದೆ. ಆದರೆ ಬಿಬಿಎಂಪಿಯಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ಕಾಮಗಾರಿಯ ಬಿಲ್ ಗಳಿಗೆ GST Invoice ಮಾಡಲಾಗುತ್ತಿಲ್ಲ ಎಂದು ಮಾಹಿತಿ ಹಕ್ಕು ಕೇಂದ್ರದ ಪದಾಧಿಕಾರಿಗಳು ದೂರಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೇ GST ಉಂಡೇನಾಮ ಹಾಕಿದ ಬಿಬಿಎಂಪಿ & ಗುತ್ತಿಗೆದಾರರು.!?
ಈ ಮೂಲಕ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿ ಸರ್ಕಾರಕ್ಕೆ GST ಕಟ್ಟದೆ ಮೋಸ ಮಾಡುತ್ತಿದ್ದಾರಂತೆ. ಬಿಬಿಎಂಪಿಯ ದಾಸರಹಳ್ಳಿ ವಲಯದಲ್ಲಿ ಮಾಡಲಾದ ರಸ್ತೆ ಕಾಮಗಾರಿಯ ಬಿಲ್ ನಲ್ಲಿ ಈ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಕೇಂದ್ರದಿಂದ ಪ್ರಧಾನಿ ಮೋದಿ ಕಚೇರಿಗೆ ಈ ಮೇಲ್ ಮೂಲಕ ದೂರು ನೀಡಲಾಗಿದೆ. 2017ರಿಂದ ಈಚೆಗೆ ಸುಮಾರು ಸಾವಿರ ಕೋಟಿಗೂ ಅಧಿಕ ಮೊತ್ತದ GST ಕೇಂದ್ರಕ್ಕೆ ಕಟ್ಟದೆ ಯಾಮಾರಿಸಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರ ವೀರೇಶ್ ಆರೋಪಿಸಿದ್ದಾರೆ.
ಪಾಲಿಕೆಯಿಂದ ಟೆಂಡರ್ ಪಡೆದುಕೊಳ್ಳುವ ಗುತ್ತಿಗೆದಾರರು, ಬಿಲ್ ಪಾವತಿಗಾಗಿ ಕೇಳಿಕೊಳ್ಳುವಾಗ ಕಾಮಾಗರಿಗೆ ಬಳಿಸಿದ ಮೆಟೀರಿಯಲ್ಗಳ ಬಗ್ಗೆಗಿನ ಯಾವ ಮಾಹಿತಿಯನ್ನೂ ನೀಡಲಾಗುತ್ತಿಲ್ಲ. ಕೇಂದ್ರದ ಪ್ರಕಾರ ಒಟ್ಟು 18% GST ಪಾವತಿಸಬೇಕು. ಆದರೆ ಮೆಟೀರಿಯಲ್ ಇನ್ವಾಯಿಸ್ ನೀಡದೆ ಕೇವಲ 1% ನಷ್ಟು ಮಾತ್ರ ಟ್ಯಾಕ್ಸ್ ಪಾವತಿ ಮಾಡುತ್ತಿದ್ದಾರೆ. ಮೆಟೀರಿಯಲ್ ಇನ್ವಾಯಿಸ್ ಕೇಳಿ ಪಡೆದುಕೊಳ್ಳಬೇಕಾದ ಬಿಬಿಎಂಪಿ ಅಧಿಕಾರಿಗಳು ಕೂಡ ಗುತ್ತಿಗೆದಾರರ ಜೊತೆಗೂಡಿ ಇನ್ವಾಯಿಸ್ ಇಲ್ಲದೆ ಬಿಲ್ ನೀಡಿ, ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂಬುವುದು ಒಟ್ಟಾರೆ ಆರೋಪದ ಒಳ ಹುರುಳು. ಸದ್ಯ ಬಿಬಿಎಂಪಿ ಹಾಗೂ ಗುತ್ತಿಗೆದಾರರ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಧಾನಿ ಕಚೇರಿಗೂ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳು ಹಾಗೂ ದೋಖಾ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಹಿತಿ ಹಕ್ಕು ಕೇಂದ್ರ ಆಗ್ರಹಿಸಿದೆ.