
ಬೆಂಗಳೂರು:”ಕೆಂಗಲ್ ಹನುಮಂತಯ್ಯ (Kengal Hanumanthaiah)ಅವರು ತಮ್ಮ 44 ನೇ ವಯಸ್ಸಿಗೆ ಮುಖ್ಯಮಂತ್ರಿಗಳಾಗಿ ನಂತರ ದೇಶದ ರೈಲ್ವೇ ಸಚಿವರಾಗಿ ಆಡಳಿತಕ್ಕೆ ಹೊಸ ರೂಪ ಕೊಟ್ಟ ಶ್ರೇಷ್ಠ ನಾಯಕ.ಅವರು ಕೆಪಿಸಿಸಿ ಅಧ್ಯಕ್ಷರಾಗಿ (KPCC President)ಅಧಿಕಾರ ವಹಿಸಿಕೊಂಡು 75 ವರ್ಷಗಳು ತುಂಬುತ್ತಿದೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ (DCM d.K.Shivakumar)ಅವರು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು.

“ಹನುಮಂತಯ್ಯ ಅವರು ತಮ್ಮ ಪಾರ್ಥಿವ ಶರೀರವನ್ನು ವಿಧಾನಸೌಧದ ಸುತ್ತ ಪ್ರದಕ್ಷಿಣೆ ಮಾಡಿಸಬೇಕು ಎಂದು ಆಸೆ ಪಟ್ಟಿದ್ದರು. ಅದನ್ನು ನೆರವೇರಿಸಲಾಗಿತ್ತು.ಅವರ ನೆನಪಿಗೆ ವಿಧಾನಸೌಧದಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಕೆಂಗಲ್ ಹನುಮಂತಯ್ಯ ಗೇಟ್ ಎಂದು ನಾಮಕರಣ ಮಾಡಲಾಗಿದೆ” ಎಂದರು.
“ವಿಧಾನಸೌಧ ಎನ್ನುವ ಸಾಕ್ಷಿಗುಡ್ಡೆಯನ್ನು ಈ ರಾಜ್ಯಕ್ಕೆ ಬಿಟ್ಟು ಹೋಗಿದ್ದಾರೆ. ವಿಧಾನಸೌಧ ಸರ್ಕಾರದ ಭವ್ಯ ಆಡಳಿತ ಕಚೇರಿ.ಇಡೀ ದೇಶದಲ್ಲಿಯೇ ಇಂತಹ ಕಟ್ಟಡ ಮತ್ತೊಂದಿಲ್ಲ.ಎರಡು ರುಪಾಯಿಗೆ ಭಗವದ್ಗೀತೆ ಹಂಚಿದವರು.ಕನ್ನಡ ಸಂಸ್ಕೃತಿ ಇಲಾಖೆಗೆ ಹೊಸ ರೂಪ ಕೊಟ್ಟವರು ಕೆಂಗಲ್ ಹನುಮಂತಯ್ಯ” ಎಂದರು.
“ರಾಮನ ಹಾಗೂ ಆಂಜನೇಯನ ಪರಮ ಭಕ್ತರಾಗಿದ್ದ ಇವರು ಕ್ಲೋಸ್ ಪೇಟೆಗೆ ‘ರಾಮನಗರ’ ಎಂದು ಹೊಸದಾಗಿ ನಾಮಕರಣ ಮಾಡಿದವರು. ಫ್ರೆಂಚ್ ರಾಕ್ಸ್ ಎಂದು ಕರೆಯುತ್ತಿದ್ದ ಊರಿಗೆ ‘ಪಾಂಡವಪುರ’ ಎಂದು ನಾಮಕರಣ ಮಾಡಿದವರೂ ಇವರೇ” ಎಂದು ಹೇಳಿದರು.
“ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಹುದ್ದೆಗೆ ಅರ್ಜಿ ಹಾಕಲು ತೆರಳುವ ಮುಂಚಿತವಾಗಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಂಗಲ್ ಹನುಮಂತಯ್ಯ ಅವರನ್ನು ಸಾಕಷ್ಟು ಬಾರಿ ನೆನಪಿಸಿಕೊಂಡಿದ್ದರು.ಈ ದೇಶದ ವಿತ್ತ ಸಚಿವರಾಗಿ ಅವರ ಕೊನೆ ಕಾರ್ಯಕ್ರಮ ವಿಧಾನಸೌಧದಲ್ಲಿ ನಡೆದಿತ್ತು.ಆ ಕಾರ್ಯಕ್ರಮದ ನೇತೃತ್ವವನ್ನು ನಾನು ವಹಿಸಿಕೊಂಡಿದ್ದೆ” ಎಂದರು.