ರೈತರ ಆದಾಯ ದ್ವಿಗುಣ ಮಾಡುವ ಪ್ರಧಾನಿ ನರೇಂದ್ರಮೋದಿಯವರ ಕನಸು ನನಸಾಗಲು ಕೃಷಿ ಇಲಾಖೆ ಅಕಾರಿಗಳು ಶ್ರಮಿಸುವ ಮೂಲಕ ರೈತರ ಬದುಕು ಹಸನಾಗಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದರು.
ತಾಲೂಕಿನ ಅಡ್ಡಗಲ್ ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಹಲವು ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಅಭಿವೃದ್ಧಿ ಎಂಬುದು ಕೇವಲ ಕಾಗದಕ್ಕೆ ಸೀಮಿತವಾಗಬಾರದು. ರೈತರ ನಿಜವಾದ ಅಭಿವೃದ್ಧಿಗಾಗಿ ಸರಕಾರದ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರದ 3 ಗ್ರಾಪಂಲ್ಲಿ ಯೋಜನೆ ಅನುಷ್ಠಾನ
ರಾಜ್ಯದ 57 ತಾಲೂಕುಗಳಲ್ಲಿ ಮಾತ್ರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನವಾಗುತ್ತಿದೆ. ಅದರಲ್ಲಿ ಚಿಕ್ಕಬಳ್ಳಾಪುರವೂ ಒಂದು. ತಾಲೂಕಿನ ಅಡ್ಡಗಲ್, ಮಂಡಿಕಲ್ ಮತ್ತು ಗೊಲ್ಲಹಳ್ಳಿ ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಪಂಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲು ಒಟ್ಟು 8.7 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಿರುವುದಾಗಿ ಸಚಿವರು ಹೇಳಿದರು.
ಸರ್ಕಾರದಿಂದ ಬರುವ ಪ್ರತಿ ರೂಪಾಯಿ ರೈತರಿಗೆ ತಲುಪಿಸಲು ಕೃಷಿ ಇಲಾಖೆ ಶ್ರಮಿಸಬೇಕು. ನೀರು ಮತ್ತು ಮಣ್ಣಿನ ರಕ್ಷಣೆ, ತೋಟಗಾರಿಕೆ ಮತ್ತು ಕೃಷಿಗೆ ಅಗತ್ಯವಿರುವ ಗಿಡಗಳ ವಿತರಣೆ ಮಾಡಲು ಕ್ರಮ ವಹಿಸಬೇಕು. ಹೆಬ್ಬೇವು, ತೆಂಗು, ಮಾವು, ಮಹಾಗನಿ, ಶ್ರೀಗಂಧ, ಕಾಡು ಬಾದಾಮಿ ಮುಂತಾದ ಗಿಡ ನೀಡಲಾಗುತ್ತಿದೆ ಇದನ್ನು ರೈತರು ಬದುಗಳಲ್ಲಿ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದರು.
ಬದು ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣದಂತಹ ಕಾರ್ಯಕ್ರಮಗಳು ಇದೇ ಯೋಜನೆಯಲ್ಲಿದ್ದು, ಇವುಗಳ ಅಗತ್ಯ ಎಲ್ಲಿದೆಯೋ ಅಲ್ಲಿ ನಿರ್ಮಿಸಬೇಕು. ಕಾಮಗಾರಿಗಳ ಮಾಹಿತಿಯ ದಾಖಲೆ ಇಡಬೇಕು. ಕಾಮಗಾರಿಗಳ ಚಿತ್ರ ಸೇರಿದತೆ ರೈತರ ಮಾಹಿತಿ ದಾಖಲಾಗಬೇಕು. ಹಣ ಪೋಲಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ಮಹಿಸಬೇಕು. ಸರ್ಕಾರದ ಯೋಜನೆ ಸಾರ್ಥಕವಾಗಲು ಅಧಿಕಾರಿವರ್ಗದವರು ಶ್ವಹಿಸಿ ಕೆಲಸ ಮಾಡಬೇಕು ಎಂದು ಸಚಿವರು ಹೇಳಿದರು.
ರೈತರ ಆದಾಯ ದ್ವಿಗುಣವಾಗಬೇಕು
ರೈತರ ಆದಾಯ ದ್ವಿಗುಣ ಮಾಡಲು ಪ್ರಧಾನಿ ಪಣ ತೊಟ್ಟಿದ್ದಾರೆ. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಒಂದೇ ಬೆಳೆ ಬೆಳೆಯುವುದು ಈ ಭಾಗದಲ್ಲಿ ವಾಡಿಕೆಯಾಗಿದ್ದು, ಇದರ ಬದಲಿಗೆ ಮಿಶ್ರ ಬೆಳೆ ಬೆಳೆಯುವುದರಿಂದ ಮಾರುಕಟ್ಟೆ ಕುಸಿತ, ರೋಗ ಮುಂತಾದ ಸಮಸ್ಯೆಗಳಿಂದ ಪಾರಾಗಿ ರೈತರು ಲಾಭ ಗಳಿಸಲು ಸಾಧ್ಯ ಎಂದು ಹೇಳಿದರು.
ರೈತರಿಗೆ ಕೃಷಿ ಇಲಾಖೆ ಮಾರ್ಗದದರ್ಶನ ನೀಡಬೇಕು. ಕೃಷಿಗೆ ಹೊಂದುವ ಉಪ ಕಸಬು ನಿರ್ವಹಿಸಲು ಮಾರ್ಗದರ್ಶನ ನೀಡಬೇಕು. ಕೋಳಿ, ಕುರಿ ಸಾಕಾಣಿಕೆ ಜೊತೆಯಲ್ಲಿ ಅಳವಡಿಸಿಕೊಂಡರೆ ರೈತರ ಆದಾಯ ದ್ವಿಗುಣವಾಗಲಿದೆ. ಇದರಿಂದ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ರೈತನ ಕೈ ಹಿಡಿಯಲಿದೆ ಎಂದು ಸಚಿವರು ವಿವರಿಸಿದರು.
ಕೊಟ್ಟ ಮಾತು ಈಡೇರಿಸಿದ್ದೇನೆ
ಕೃಷಿ ಇಲಾಖೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ, ರೈತರಿಗೆ ಮಾರ್ಗದರ್ಶನ, ಮಾಹಿತಿ ಮತ್ತು ತರಬೇತಿ ನೀಡಬೇಕು. ಇದರಿಂದ ರೈತರ ಬದುಕು ಹಸನಾಗಲಿದೆ. ರೈತನಿಗೆ ಫಲವತ್ತಾದ ಮಣ್ಣು ಮತ್ತು ನೀರು ಅಗತ್ಯ. 2017ರಲ್ಲಿ ನಿಮಗೆ ನೀಡಿದ ಮಾತಿನಂತೆ ಎಚ್ಎನ್ ವ್ಯಾಲಿ ಮೂಲಕ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ. ಅದೇ ರೀತಿಯಲ್ಲಿ ರೈತನು ಬೆಳೆದ ಬೆಳೆ ಸಾಗಣೆ ಮಾಡಲು ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಸಚಿವರು ಹೇಳಿದರು.

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಹಾಗಾಗಿ ಸಾವಯವ ಕೃಷಿ ಅಳವಡಿಸಿಕೊಂಡು, ನೈಸರ್ಗಿಕ ಬೆಳೆ ಬೆಳೆಯುವ ಪದ್ಧತಿಗೆ ರೈತರು ಮರಳಬೇಕು. ಈ ಪದ್ಧತಿ ನಮ್ಮ ಪೂರ್ವಿಕರಲ್ಲಿಯೇ ಇತ್ತು. 80ರ ದಶಕ್ಕೂ ಮೊದಲು ಯಾವುದೇ ಕೀಟನಾಶಕ ಮತ್ತು ರಸಗೊಬ್ಬರ ಬಳಸುತ್ತಿರಲಿಲ್ಲ.
ಈಗ ಕೀಟನಾಶಕ ಬಳಸದೆ ಬೆಳೆ ಸಿಗುವುದಿಲ್ಲ ಎಂಬ ಸ್ಥಿತಿ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಇದು ಆರೋಗ್ಯಕ್ಕೂ ಮಾರಕ
ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಪ್ರಸ್ತುತ ಜನ ತುತ್ತಾಗುತ್ತಿದ್ದಾರೆ. ನಮ್ಮ ಆರೋಗ್ಯಕ್ಕೆ ಸೇವಿಸುವ ಆಹಾರವೂ ಮುಖ್ಯವಾಗಿದ್ದು, ನೈಸರ್ಗಿಕವಾಗಿ ಬೆಳೆ ತೆಗೆದರೆ ಇದರಿಂದ ಆರೋಗ್ಯವೂ ವೃದ್ಧಿಯಾಗಲಿದೆ. ಎಚ್ಎನ್ ವ್ಯಾಲಿ ಜೊತೆಗೆ ಎತ್ತಿನಹೊಳೆ ಯೋಜನೆ ಮುಂದಿನ ಒಂದು ವರ್ಷದಲ್ಲಿ ಅನುಷ್ಠಾನಗೊಳಿಸಿ ಶಾಶ್ವತವಾಗಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದರು.
ರೈತರಿಗೆ ವಾರ್ಷಿಕ ಸಹಾಯಧನ
ಕೃಷಿ ಸಮ್ಮಾನ್ ಯೋಜನೆ ಪ್ರಧಾನಿ ನರೇಂದ್ರಮೋದಿ ಅವರು ಜಾರಿಗೊಳಿಸಿದ್ದಾರೆ. ಆ ಮೂಲಕ ದೇಶದ ಪ್ರತಿ ರೈತನಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಿದರೆ, ರಾಜ್ಯ ಸರಕಾರ ನಾಲ್ಕು ಸಾವಿರ ಸೇರಿ ಒಟ್ಟು ಹತ್ತು ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.ಈವರೆಗೆ ಯಾವುದೇ ಸರ್ಕಾರ ವಾರ್ಷಿಕ ಸಹಾಯಧನ ನೀಡುವ ಬಗ್ಗೆ ವಿಚಾರವೇ ಮಾಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 6 ಸಾವಿರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 4 ಸಾವಿರ ಸೇರಿಸಿ ಒಟ್ಟು 10 ಸಾವಿರ ರೈತನ ಖಾತೆಗೆ ಸೇರುತ್ತಿದೆ. ಇಂತಹ ಅನೇಕ ರೈತಪರ ಕಾರ್ಯಕ್ರಮಗಳು ರೈತರಿಗಾಗಿ ಪ್ರಧಾನಿ ಮೋದಿ ಅವರು ನೀಡುತ್ತಿದ್ದಾರೆ ಎಂದರು.
ಪ್ರಧಾನಿಯವರು ದೇಶದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆ ಯೋಚನೆ ಮೂಲಕ ಯೋಜನೆ ಜಾರಿಗೊಳಿಸುತ್ತಿರುವ ಏಕೈಕ ನಾಯಕ ಮೋದಿಯವರಾಗಿದ್ದಾರೆ. ಈ ದೇಶದ ಅಭಿವೃದ್ಧಿಯ ಕನಸು ನನಸು ಮಾಡಲು ಪ್ರಧಾನಿ ಶ್ರಮಿಸುತ್ತಿದ್ದಾರೆ. ನಮಗೆ ಭೂಮಿಯೊಂದೇ ಆಧಾರವಾಗಿದ್ದು, ಇಂತಹ ಭೂಮಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರತಿ ಹೋಬಳಿ ಕೇಂದ್ರದಲ್ಲೂ ಕೃಷಿ ಉಪಕರಣ ಬಾಡಿಗೆ ನೀಡಲಾಗುತ್ತಿದೆ, ಯಾಂತ್ರೀಕರಣದಿಂದ ಕೃಷಿ ಸುಲಭವಾಗಿದೆ. ಇದರಿಂದ ವೆಚ್ಚ ಕಡಿಮೆಯಾಗಿ, ಆದಾಯ ಹೆಚ್ಚಾಗಬೇಕು, ಹಾಗೆ ಸಿಗುವ ಲಾಭ ರೈತರಿಗೆ ಮಾತ್ರ ದೊರೆಯಬೇಕು, ದಲ್ಲಾಳಿಗಳಿಗೆ ಅಲ್ಲ. ಇಡೀ ದೇಶದಲ್ಲಿ ಒಂದೇ ಬೆಲೆ ಇರುವಂತೆ ಆನ್ ಲೈನ್ ಮಾರುಕಟ್ಟೆ ಬೆಳೆಸಬೇಕು, ಸರ್ವಾಂಗೀಣ ದೃಷ್ಟಿಕೋನದಿಂದ ಕೃಷಿ ನೀತಿ ಮಾಡಬೇಕು, ಕೃಷಿಕರಿಗೆ ಸರ್ಕಾರದ ಸೌಲಭ್ಯ ವಿತರಿಸಬೇಕು, ಇದಕ್ಕಾಗಿ ಸರ್ಕಾರ, ಕೃಷಿ ಇಲಾಖೆ ಆದ್ಯತೆ ನೀಡಬೇಕು, ಕೃಷಿ ಇಲಾಖೆ ರೈತಪರ, ಜನಪರವಾಗಿ ಕೆಲಸ ಮಾಡಿದಾಗ ರೈತರ ಬದುಕು ಸದಾ ಹಸನಾಗಿರುತ್ತದೆ ಎಂದು ಸಚಿವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಅಡ್ಡಗಲ್ ಗ್ರಾಪಂ ಅಧ್ಯಕ್ಷೆ ಪ್ರಭಾವತಿ, ಕೃಷ್ಣಾರೆಡ್ಡಿ, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.