
ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬೆನ್ನಲ್ಲೆ ಗೋ ಬ್ಯಾಕ್ ಆಭಿಯಾನ ಶುರುವಾಗಿದೆ. ಕೋಲಾರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ ಗೌತಮ್ ಹೆಸರು ಘೋಷಣೆ ಆಗಿದೆ. ಆದರೆ ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೌತಮ್ ಗೋ ಬ್ಯಾಕ್ ಪೋಸ್ಟರ್ ಹಾಕುತ್ತಿದ್ದಾರೆ. ಸ್ಥಳೀಯರನ್ನು ಕಡೆಗಣಿಸಿ ಹೊರಗಿನ ವ್ಯಕ್ತಿಗೆ ಮಣೆ ಹಾಕಿದ ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ನಡೆಯಿಂದ ಕಾರ್ಯಕರ್ತರು ಹಾಗು ಮುಖಂಡರಲ್ಲಿ ಅಸಮಾಧಾನ ಮನೆ ಮಾಡಿದೆ.
ಕೋಲಾರ ಕಾಂಗ್ರೆಸ್ ಟಿಕೆಟ್ ಕದನಕ್ಕೆ ತೆರೆ ಬಿದ್ದಿದೆ. ಕೆ.ವಿ ಗೌತಮ್‌ರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೈಕಮಾಂಡ್ ಘೋಷಣೆ ಮಾಡಿದೆ. ಈ ಮಧ್ಯೆ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣದ ಮುನಿಸು ಮಾತ್ರ ಇನ್ನೂ ಬಗೆಹರಿದಿಲ್ಲ. ರಮೇಶ್ ಕುಮಾರ್ ಬಣದ ಮನವೊಲಿಕೆ ಜವಾಬ್ದಾರಿಯನ್ನ ರಾಜ್ಯ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಹಿಸಿದ್ದಾರೆ. ರಮೇಶ್ ಕುಮಾರ್ ಬಣದ ಮನವೊಲಿಕೆ ನಮ್ಮ ಜವಾಬ್ದಾರಿ. ಮುನಿಯಪ್ಪರನ್ನ ನೀವೇ ಸಮಾಧಾನ ಮಾಡಬೇಕು. ಅವರು ಹೇಳಿದಂತೆ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಆದ್ರೆ ತಮಗೆ ಹಿನ್ನಡೆ ಆಯ್ತು ಎಂದು ಸಂಪೂರ್ಣ ಶಕ್ತಿ ಬಳಸಿ ಗೆಲುವಿಗೆ ಶ್ರಮಿಸದೆ ಇರಬಹುದು ಎಂದು ರಾಜ್ಯ ನಾಯಕರು ಖರ್ಗೆ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಕೋಲಾರದಲ್ಲಿ ಯಾವುದೇ ಅಸಮಾಧಾನ ಇಲ್ಲ, ಎಲ್ಲರೂ ವಿಜಯ ಪಾತಾಕೆ ಹಾರಿಸಲು ಹೊರಟ್ಟಿದ್ದಾರೆ. ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರ್ತೇವೆ ಎಂದು ಹೊರಟಿದ್ದಾರೆ. ಮುನಿಯಪ್ಪ, ರಮೇಶ್ ಕುಮಾರ್ ಸೇರಿದಂತೆ ಶಾಸಕರು ಈ ಬಗ್ಗೆ ಸಂಕಲ್ಪ ಮಾಡಿದ್ದಾರೆ. ಇತ್ತ ಡಿ.ಕೆ ಶಿವಕುಮಾರ್ ಮಾತನಾಡಿದ ಕೆಲವೇ ಹೊತ್ತಲ್ಲಿ ಸಚಿವ ಕೆ.ಹೆಚ್ ಮುನಿಯಪ್ಪ ಮಾತನಾಡಿ, ಗೌತಮ್‌ಗೆ ಟಿಕೆಟ್ ಕೊಟ್ಟಿರೋದಕ್ಕೆ ಅಭ್ಯಂತರವಿಲ್ಲ. ಆದರೆ ಟಿಕೆಟ್ ಕೊಡುವ ಮೊದಲು ಸ್ಥಳೀಯ ನಾಯಕರನ್ನ ಕೂರಿಸಿಕೊಂಡು ರಾಜಿ ಸೂತ್ರ ಮಾಡಬೇಕಿತ್ತು. ಕೋಲಾರ ಪ್ರಚಾರಕ್ಕೆ ನನ್ನನ್ನು ಕರೆದರೆ ನಾನು ಹೋಗುತ್ತೇನೆ ಎಂದಿದ್ದಾರೆ. ಒಂದು ವೇಳೆ ಸೋಲುಂಡರೆ ಅದರ ಹೊಣೆಯನ್ನು ನೀವು ಹೊತ್ತುಕೊಳ್ತೀರಾ..? ಅನ್ನೋ ಪ್ರಶ್ನೆಗೆ ನಾನು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ, ಕೋಲಾರಕ್ಕಲ್ಲ. ಕೋಲಾರ ಉಸ್ತುವಾರಿ ಸಚಿವರಾಗಿ ಬೈರತಿ ಸುರೇಶ್ ಇದ್ದಾರೆ. ಯಾರು ಟಿಕೆಟ್ ಕೊಟ್ಟಿದ್ದಾರೆ ಅವರದ್ದು ಸೋಲಿನ ಹೊಣೆ ಇರುತ್ತದೆ ಎನ್ನುವ ಮೂಲಕ ಹೈಕಮಾಂಡ್ ನಾಯಕರಿಗೆ ಸಡ್ಡು ಹೊಡೆದಿದ್ದಾರೆ.

ಇನ್ನು ಗೌತಮ್ ಆಯ್ಕೆ ರಮೇಶ್ ಕುಮಾರ್ ಬಣ ಹಾಗು ಮುನಿಯಪ್ಪ ಬಣ ಇಬ್ಬರಿಗೂ ಒಪ್ಪಿಗೆ ಇಲ್ಲ ಎನ್ನಲಾಗ್ತಿದ್ದು, ಮುನಿಯಪ್ಪ ಬಣ ಎಡಗೈ ಸಮುದಾಯ ಅನ್ನೋ ಕಾರಣಕ್ಕೆ ಸುಮ್ಮನಿದೆ. ಆದರೆ ರಮೇಶ್ ಕುಮಾರ್ ಬಣ ಬಲಗೈ ಸಮುದಾಯಕ್ಕೆ ಟಿಕೆಟ್ ಕೇಳಿತ್ತು. ಆದರೆ ಬಲಗೈ ಸಮುದಾಯಕ್ಕೆ ಟಿಕೆಟ್ ಸಿಗದೆ ಇರುವುದು ಮತ್ತಷ್ಟು ಕೆರಳುವಂತೆ ಮಾಡಿದೆ. ಇದೀಗ ಮುಂದೇನು ಎನ್ನುವ ಗುಸುಗುಸು ನಡೆದಿದ್ದು, ರಮೇಶ್ ಕುಮಾರ್ ಬಣ ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರನ್ನು ವಿರೋಧ ಮಾಡಿದ್ದ ಸಚಿವರಾದ ಡಾ ಎಂ.ಸಿ ಸುಧಾಕರ್ ಹಾಗು ಬೈರತಿ ಸುರೇಶ್ ಇಬ್ಬರಿಗೂ ಗೆಲುವಿನ ಟಾಸ್ಕ್ ನೀಡಲಾಗಿದ್ದು, ಚಿಕ್ಕಬಳ್ಳಾಪುರ ಹಾಗು ಕೋಲಾರದಲ್ಲಿ ಗೆಲ್ಲಿಸದಿದ್ದರೆ ಸಚಿವ ಸ್ಥಾನ ಹೋಗುವ ಮುನ್ಸೂಚನೆ ಸಿಕ್ಕಿದೆ ಎನ್ನುವುದು ಕಾಂಗ್ರೆಸ್ ಮೂಲಗಳಿಂದ ಲಭ್ಯವಾಗಿದೆ.






