ಕರ್ನಾಟಕದಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ಚರ್ಚೆ ತಾರಕ್ಕೇರಿರುವ ನಡವೆಯೇ ಉತ್ತರ ಪ್ರದೇಶದ ಗಾಜಿಯಾಬಾದ್ನ ಮುನ್ಸಿಪಲ್ ಕಾರ್ಪೊರೇಷನ್ ನವರಾತ್ರಿಯ ಹಿನ್ನೆಲೆಯಲ್ಲಿ ಏಪ್ರಿಲ್ 2 ರಿಂದ 10 ರವರೆಗೆ ನಗರದಲ್ಲಿ ಹಸಿ ಮಾಂಸವನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಅವಧಿಯಲ್ಲಿ ದೇವಸ್ಥಾನಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೇಯರ್ ನಿರ್ದೇಶನ ನೀಡಿದ್ದಾರೆ. “ಆಯಾ ವಲಯಗಳಲ್ಲಿ, ದೇವಸ್ಥಾನಗಳಲ್ಲಿ ಶುಚಿತ್ವ ಕಾಪಾಡುವಂತೆ ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚಿರುವಂತತೆ ನೋಡಿಕೊಳ್ಳಲು ಸೂಚಿಸಲಾಗಿದೆ, ”ಎಂದು ನಾಗರಿಕ ಮಂಡಳಿ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಈ ಆದೇಶವು ಜಿಲ್ಲೆಯ ಐದು ವಲಯಗಳಿಗೆ ಅನ್ವಯಿಸಲಿದೆ.
ಲೋಣಿ ಶಾಸಕ ನಂದ್ ಕಿಶೋರ್ ಗುರ್ಜರ್ ಅವರು ಈ ಹಿಂದೆ ಹಬ್ಬಗಳ ಸಂದರ್ಭದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಹಲವಾರು ಬಾರಿ ಮನವಿಗಳನ್ನು ನೀಡಿದ್ದರು. ಮಾರ್ಚ್ 31 ರಂದು ಜಿಲ್ಲಾಧಿಕಾರಿಗಳಿಗೆ ಮತ್ತೆ ಪತ್ರ ಬರೆದ ಶಾಸಕರು ತನ್ನ ಕ್ಷೇತ್ರದಲ್ಲಿ ಹಲವಾರು ರೆಸ್ಟೋರೆಂಟ್ಗಳು ಮಾಂಸವನ್ನು ಮಾರಾಟ ಮಾಡುತ್ತಿದೆ ಎಂದು ಅಧಿಕಾರಿಗಳ ಗಮನ ಸೆಳೆದಿದ್ದರು. ಅಲ್ಲದೆ ‘ಯಾವುದೇ ಸಂಭವನೀಯ ರೋಗ ಹರಡುವಿಕೆಯನ್ನು ತಡೆಗಟ್ಟಲು’ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲೂ ಅವರು ಸಂಬಂಧಿಸಿದ ಅಧಿಕಾರಿಗಳನ್ನು ವಿನಂತಿಸಿದ್ದರು.
ನಾಗರಿಕ ಮಂಡಳಿಯ ವ್ಯಾಪ್ತಿಯಲ್ಲಿರುವ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳ ಮುಚ್ಚುವಿಕೆಯನ್ನು ಖಾತ್ರಿಪಡಿಸುವ ಆದೇಶವನ್ನು ಪ್ರತಿವರ್ಷ ಜಾರಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದು “ಪ್ರತಿ ವರ್ಷ ಆದೇಶವನ್ನು ಹೊರಡಿಸಲಾಗುತ್ತದೆ ಮತ್ತು ನಿಷೇಧವು ನವರಾತ್ರಿಯ ಸಮಯದಲ್ಲಿ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಈ ಐದು ವಲಯಗಳಲ್ಲಿ ಹಸಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಸಂಬಂಧಿಸಿದ ಎಲ್ಲಾ ನಗರ ನಿಗಮ ಇಲಾಖೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ” ಎಂದು ಗಾಜಿಯಾಬಾದ್ ಮೇಯರ್ ಆಶಾ ಶರ್ಮಾ ಹೇಳಿದ್ದಾರೆ.
ಒಟ್ಟಿನಲ್ಲಿ ಗಲಭೆ, ಗೊಂದಲ ಸೃಷ್ಟಿಸಲು ದೇಶಾದ್ಯಂತ ದಿನಕ್ಕೊಂದು ವಿಚಾರ ಎತ್ತಲಾಗುತ್ತಿದ್ದು ಧರ್ಮದ ಹೆಸರಿನಲ್ಲಿ ಅನ್ನದ ಬಟ್ಟಲನ್ನೂ ಜಾಲಾಡುವ ಪ್ರವೃತ್ತಿಗೆ, ಅದನ್ನು ಮೌನವಾಗಿ ಬೆಂಬಲಿಸುತ್ತಿರುವ ಸರ್ಕಾರದ ಕ್ರಮಕ್ಕೆ ಪ್ರಜ್ಞಾವಂತರ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ.