ಜಿಡಿಪಿ ಪ್ರಗತಿ: ಜನರ ಕಣ್ಣೀರಿಗೆ ಕರಗುತ್ತಿದೆ ಹಸಿ ಸುಳ್ಳಿನ ಬಣ್ಣದ ವೇಷ!

ಕರೋನಾ ಎರಡನೇ ಅಲೆ ದೇಶದ ಲಕ್ಷಾಂತರ ಮಂದಿಯ ಜೀವ, ಕೋಟ್ಯಂತರ ಜನರನ್ನು ಬಡತನ, ಸಂಕಷ್ಟಕ್ಕೆ ನೂಕಿದೆ ಎಂಬುದನ್ನು ಸರ್ಕಾರ ಒಪ್ಪಲು ಸಿದ್ಧವಿಲ್ಲ. ಸರ್ಕಾರ ಮತ್ತು ಆಳುವ ಪಕ್ಷದ ಪರ ಆಹೋರಾತ್ರಿ ಪ್ರಾಪಗಾಂಡಾ ಸಮರ ನಡೆಸುವ ಮಂದಿ ಜಿಡಿಪಿ, ವಿದೇಶಿ ಹೂಡಿಕೆ(ಎಫ್ ಡಿಐ), ದೇಶದ ಆರ್ಥಿಕತೆಗಳ ಕುರಿತ ಕಪೋಲಕಲ್ಪಿತ ಸುದ್ದಿಗಳನ್ನು ಸೃಷ್ಟಿಸುತ್ತಾ ‘ಸಬ್ ಚೆಂಗಾಸಿ’ ಚಿತ್ರಣ ನೀಡಲು ಹೆಣಗಾಡುತ್ತಿವೆ.

ಆದರೆ, ಭಕ್ತರನ್ನು ರಂಜಿಸಿ, ರಮಿಸುವ ಬಿಜೆಪಿ ಟ್ರೋಲ್ ಪಡೆ, ಪೇಯ್ಡ್ ಮೀಡಿಯಾಗಳು ಸೃಷ್ಟಿಸುವ ಸುಳ್ಳು ಸುದ್ದಿಗಳು ನೀಡುವ ಚಿತ್ರಣಕ್ಕೆ ವ್ಯತಿರಿಕ್ತವಾಗಿ ವಾಸ್ತವ ಸ್ಥಿತಿ ಹೇಗಿದೆ ಎಂಬುದಕ್ಕೆ ಜಿಡಿಪಿ ಮತ್ತು ಆರ್ಥಿಕ ಪ್ರಗತಿ ದರದ ಕುರಿತು ಈ ವಾರ ಹೊರಬಿದ್ದಿರುವ ಮೂಡಿ, ನ್ಯೂಯಾರ್ಕ್ ಟೈಮ್ಸ್ ಸಮೀಕ್ಷೆಗಳೇ ಸಾಕ್ಷಿ. ಇದೀಗ ಆರ್ ಬಿಐ ಕೂಡ ದನಿಗೂಡಿಸಿದ್ದು, ಮೇ 27ರಂದು ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ದೇಶದ ಜಿಡಿಪಿ ದರ ಸಾರ್ವಕಾಲಿಕ ಕುಸಿತ ಕಂಡಿರುವುದನ್ನು ದಾಖಲಿಸಿದೆ. ಹಾಗೇ ಎಸ್ ಬಿಐ ವರದಿ ಕೂಡ ಅದೇ ಆತಂಕವನ್ನು ವ್ಯಕ್ತಪಡಿಸಿದ್ದು, ಜಿಡಿಪಿ ಕುಸಿತ ಭಾರೀ ಪ್ರಮಾಣದಲ್ಲಿದೆ ಎಂದು ಹೇಳಿದೆ.

2007-08ನೇ ಸಾಲಿನಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಭಾರೀ ಕುಸಿತ ಕಂಡಿದ್ದ ದೇಶದ ಜಿಡಿಪಿ ಪ್ರಗತಿ ದರ, 2013ರ ಹೊತ್ತಿಗೆ ಏರಿಕೆ ಗತಿ ಕಂಡಿತ್ತು. ಆ ಬಳಿಕ ನಿರಂತರ ಏರಿಕೆಯ ಹಾದಿಯಲ್ಲೇ ಇದ್ದ ಜಿಡಿಪಿ, 2016ರ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದ ಹೊತ್ತಿಗೆ ಅಧೋಮುಖವಾಯಿತು. ಆ ಬಳಿಕ ಬಂದ ಜಿ ಎಸ್ ಟಿ, ನಂತರದ ಕೋವಿಡ್ ಮೊದಲ ಅಲೆ ಮತ್ತು ಇದೀಗ ಎರಡನೇ ಅಲೆಗಳು ದೇಶದ ಪ್ರಗತಿಯನ್ನು ಅಧೋಗತಿಗಿಳಿಸಿವೆ. ಮುಖ್ಯವಾಗಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಳ್ಳುವವರೆಗೆ ನಿರಂತರ ಏರುಗತಿಯಲ್ಲೇ ಇದ್ದ ಜಿಡಿಪಿ ಪ್ರಗತಿ, ಅವರು ಪ್ರಧಾನಿಯಾಗಿ ಎರಡೂವರೆ ವರ್ಷಕ್ಕೆ ಜಾರಿಗೆ ಬಂದ (2016ರ ನವೆಂಬರ್) ನೂಟು ರದ್ದತಿಯ ಅವಿವೇಕಿ ನಿರ್ಧಾರವೇ ದೇಶದ ಪ್ರಗತಿಗೆ ದೊಡ್ಡ ಕೊಡಲಿ ಏಟಾಯಿತು. ಆ ಬಳಿಕ ಜಾರಿಗೊಳಿಸಿದ ಜಿಎಸ್ ಟಿ ವ್ಯವಸ್ಥೆ ಕೂಡ ಮೊದಲೇ ನೆಲಕಚ್ಚಿದ್ದ ಜಿಡಿಪಿಯನ್ನು ಇನ್ನಷ್ಟು ಮಲಗಿಸಿತು. ಹಾಗಾಗಿ ಕೋವಿಡ್ ಮೊದಲ ಅಲೆಗೆ ಮುಂಚೆಯೇ ದೇಶದ ಆರ್ಥಿಕತೆ ಮೋದಿ ಅವಧಿಯಲ್ಲಿ ಶೇ.9ರಿಂದ ಶೇ.4ಕ್ಕೆ ಕುಸಿದಿತ್ತು.

ಅದಾದ ಬಳಿಕ ಕೋವಿಡ್ ಮೊದಲ ಅಲೆ ನಿರ್ವಹಣೆಯ ವಿಷಯದಲ್ಲಿ ಯಾವ ಸ್ಪಷ್ಟ ಕಾರ್ಯತಂತ್ರವಿಲ್ಲದೆ, ಆರ್ಥಿಕ, ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆ ಇಲ್ಲದೆ, ಏಕಾಏಕಿಯಾಗಿ, ಪಾಶ್ಚಿಮಾತ್ಯ ರಾಷ್ಟ್ರಗಳ ಅಂಧಾನುಕರಣೆಯ ಉಮೇದಿನಲ್ಲಿ ದಿಢೀರನೇ ಜಾರಿಗೊಳಿಸಿದ ದೇಶವ್ಯಾಪಿ ಲಾಕ್ ಡೌನ್ ಪ್ರಗತಿದರವನ್ನು ನಕಾರಾತ್ಮಕ ಹಾದಿಗೆ(ಮೈನಸ್) ತಳ್ಳಿತು. ಪರಿಣಾಮವಾಗಿ ದೇಶದ ಆರ್ಥಿಕತೆಯ ಮಾನದಂಡವಾದ ಜಿಡಿಪಿ, ಸಂಪೂರ್ಣ ಕುಸಿದುಬಿದ್ದಿತು. ಕುಸಿದ ಜಿಡಿಪಿಗೆ ಇದೀಗ ಎರಡನೇ ಅಲೆ ಕೂಡ ಮತ್ತೆ ಮರ್ಮಾಘಾತ ನೀಡಿದ್ದು, ಉತ್ಪಾದನಾ, ಸೇವಾ ಮತ್ತು ಕೃಷಿ ಸೇರಿದಂತೆ ದೇಶದ ಪ್ರಮುಖ ವಲಯಗಳಲ್ಲಿ ಭಾರೀ ಹಾಹಾಕಾರವೆದ್ದಿದೆ.

ಮಂಗಳವಾರ ಬಿಡುಗಡೆಯಾಗಿರುವ ಎಸ್ ಬಿಐ ಸಮೀಕ್ಷೆ ಕೂಡ, ದೇಶದ ಜಿಡಿಪಿ ಪ್ರಗತಿಯಲ್ಲಿ ಈ ಹಿಂದಿನ ಶೇ.10.4ರ ದರಕ್ಕೆ ಬದಲಾಗಿ, ಇದೀಗ ಕೋವಿಡ್ ಎರಡನೇ ಅಲೆಯ ಪರಿಣಾಮವಾಗಿ ಶೇ.7.9 ಪ್ರಗತಿ ದರ ನಿರೀಕ್ಷಿಸಲಾಗಿದೆ ಎಂದಿದೆ. ಕಳೆದ ವಾರ ಬಹಿರಂಗಗೊಂಡಿರುವ ಮೂಡಿ ಸಮೀಕ್ಷೆ ಜಿಡಿಪಿ ಪ್ರಗತಿ ದರವನ್ನು ಶೇ.9.3 ಇರಬಹುದು ಎಂದು ಅಂದಾಜಿಸಿತ್ತು. ಆದರೆ, ಇತರೆ ಹಲವು ಸಮೀಕ್ಷೆಗಳು ಕಳೆದ ವಾರ ಜಿಡಿಪಿ ಪ್ರಗತಿ ದರ ಶೇ.8.5ರಷ್ಟು ಎಂದು ಅಂದಾಜಿಸಿದ್ದವು. ಇದೀಗ ಎಸ್ ಬಿಐ, ಅಂದಾಜನ್ನು ಇನ್ನಷ್ಟು ತಗ್ಗಿಸಿ ಶೇ.7.9ಕ್ಕೆ ನಿಲ್ಲಿಸಿದೆ. ಆದರೆ, ಈ ಬಾರಿಯ ರಿವರ್ಸ್ ಲಾಕ್ ಡೌನ್ ನ ನಿಜವಾದ ಪರಿಣಾಮಗಳು ವ್ಯವಸ್ಥೆಯ ಮೇಲ್ಮಟ್ಟಕ್ಕೆ ತಲುಪಲು ಇನ್ನಷ್ಟು ಸಮಯ ಹಿಡಿಯಲಿದ್ದು, ಮುಂದಿನ ದಿನಗಳಲ್ಲಿ ಜಿಡಿಪಿ ಪ್ರಗತಿ ದರದ ನಿಜವಾದ ಚಿತ್ರಣ ಸಿಗಲಿದ್ದು, ಅದು ಇನ್ನಷ್ಟು ಆತಂಕಕಾರಿಯಾಗಿರಲಿದೆ ಎಂಬುದು ತಜ್ಞರ ಅಭಿಪ್ರಾಯ.

ಹಾಗಾಗಿ, ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಪ್ರಾಯೋಜಿತ ಫೇಕ್ ನ್ಯೂಸ್ ಫ್ಯಾಕ್ಟರಿಗಳು ಯಾವುದೇ ರೋಚಕ ಚಿತ್ರಣವನ್ನು ಸೃಷ್ಟಿಸಿ ದೇಶದ ಆರ್ಥಿಕತೆ, ಪ್ರಗತಿಯ ಬಣ್ಣದವೇಷ ಮೆರೆಸಿದರೂ, ಅಂತಿಮವಾಗಿ ಜನರ ಬವಣೆ, ಕಣ್ಣೀರಿನ ದೇಶದ ಕಟು ವಾಸ್ತವಾಂಶಗಳ ಮುಂದೆ ಅಂತಹ ಬಣ್ಣಗಳು ನಿಧಾನವಾಗಿಯಾದರೂ ಕರಗಲೇಬೇಕು. ಕರಗತೊಡಗಿವೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...