ಗೌತಮ್ ಅದಾನಿ ಎಂಬ ಹೆಸರು ಕೆಲ ವರ್ಷಗಳ ಹಿಂದೆ ಭಾರತದ ಜನರಿಗಷ್ಟೇ ತಿಳಿದಿತ್ತು. ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ವಜ್ರದ ವ್ಯಾಪಾರ ಆರಂಭಿಸಿದ್ದ ಈ ವ್ಯಕ್ತಿ ಈಗ ವಿಶ್ವದ ನಂ. 3 ಶ್ರೀಮಂತನಾಗಿದ್ದಾನೆ. ಹೌದು, ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ, ಫ್ರಾನ್ಸ್ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ನಂ. 3 ಶ್ರೀಮಂತನಾಗಿ ಕಾಣಿಸಿಕೊಂಡಿದ್ದಾರೆ ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸಿದೆ.
ಇಂಥಹದ್ದೊಂದು ಸ್ಥಾನಕ್ಕೇರಲು ಮುಕೇಶ್ ಅಂಬಾನಿ, ಚೀನಾದ ದಿಗ್ಗಜ ಜಾಕ್ ಮಾಗೂ ಸಾಧ್ಯವಾಗಿರಲಿಲ್ಲ ಆದರೆ ಗೌತಮ್ ಅದಾನಿ ಏರಿದ್ದಾರೆ. ಈ ಮೂಲಕ ಬಿಲ್ ಗೇಟ್ಸ್, ವಾರೆನ್ ಬಫೆಟ್, ಬರ್ನಾರ್ಡ್ ಅರ್ನಾಲ್ಟ್ ಮೊದಲಾದ ದಿಗ್ಗಜರನ್ನೇ ಹಿಂದಿಕ್ಕಿ ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ. ಅಷ್ಟೇ ಅಲ್ಲ ಈ ಸ್ಥಾನಕ್ಕೇರಿದ ಮೊದಲ ಏಷ್ಯಾ ಉದ್ಯಮಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
137.4 ಬಿಲಿಯನ್ ಡಾಲರ್ (10.97 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿರುವ ಅದಾನಿ, ಇದೀಗ ಅಮೆರಿಕದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆಜಾನ್ ಜೆಫ್ ಬೆಜೋಸ್ ನಂತರದ ಸ್ಥಾನದಲ್ಲಿದ್ದಾರೆ.
60 ವರ್ಷ ವಯಸ್ಸಿನ ಅದಾನಿ ಕಳೆದ ಕೆಲವು ವರ್ಷಗಳಿಂದೆ ಕಲ್ಲಿದ್ದಲು ಉದ್ಯಮದತ್ತ ಹೊರಳಿದ ಹಣಗಳಿಸುತ್ತಾ ಹೋದರು. ವಿಮಾನ ನಿಲ್ದಾಣ ನಿರ್ವಾಹಕರಾಗಿಯೂ ಮೊದಲ ಸ್ಥಾನ ಕಾಯ್ದುಕೊಂಡಿದೆ. ಅತೀ ದೊಡ್ಡ ನಗರ-ಅನಿಲ ವಿತರಣಾ ಜಾಲ, ಕಲ್ಲಿದ್ದಲು ಗಣಿಗಾರಿಕೆಯಲ್ಲೂ ಕಂಪನಿ ಮುಂಚೂಣಿಯಲ್ಲಿದೆ.ವಿಶ್ವದ ಅತಿದೊಡ್ಡ ನವೀಕರಿಸಬಹುದಾದ-ಶಕ್ತಿ ಉತ್ಪಾದಕ ಕಂಪನಿಯಾಗಲು ಹಸಿರು ಇಂಧನ ಕ್ಷೇತ್ರದಲ್ಲಿ 70 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಅದಾನಿ ನವೆಂಬರ್ನಲ್ಲಿ ಘೋಷಿಸಿದ್ದಾರೆ.
ಅದಾನಿ ಸಾಮ್ರಾಜ್ಯ ಹೀಗೆ ಏಕಾಏಕಿ ಬೆಳವಣಿಗೆ ಕಾಣುತ್ತಿದ್ದಂತೆ, ಈ ಬಗ್ಗೆ ಕಳವಳಗಳೂ ಹುಟ್ಟಿಕೊಂಡಿವೆ. ಇದಕ್ಕೆ ಕಾರಣ ಅದಾನಿ ಗ್ರೂಪ್ನ ಬೆಳವಣಿಗೆಗಳಲ್ಲಿ ಸಾಲದ ಪಾಲು ದೊಡ್ಡದಿರುವುದು. ಈ ಬಗ್ಗೆ ಕೆಲ ದಿನಗಳ ಹಿಂದೆ ಕ್ರೆಡಿಟ್ಸೈಟ್ಸ್ ವರದಿ ಬೆಳಕು ಚೆಲ್ಲಿತ್ತು.
ಹೆಚ್ಚು ಮಹತ್ವಾಕಾಂಕ್ಷೆಯ, ಸಾಲದ ಹಣದಲ್ಲಿ ನಡೆಯುವ ಬೆಳವಣಿಗೆ ಯೋಜನೆಗಳು ಕಾಲಕ್ರಮೇಣ ಭಾರಿ ಸಾಲದ ಸುಳಿಗೆ ಸಿಲುಕಬಹುದು. ಅತ್ಯಂ ತ ನಕಾರಾತ್ಮಕ ಸಂದರ್ಭದಲ್ಲಿ ಮಾತ್ರ ಹೀಗಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದಾನಿ ಸಮೂಹವು ಹೊಸ ಮತ್ತು ನೇರವಾಗಿ ಸಂಬಂಧ ಇಲ್ಲದ ವಹಿವಾಟುಗಳಿಗೆ ವಿಸ್ತರಿಸಿಕೊಳ್ಳುತ್ತಿದೆ. ಈ ವಹಿವಾಟುಗಳು ಹೆಚ್ಚಿನ ಬಂಡವಾಳ ಬಯಸುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅದಾನಿ ಸಮೂಹದ ಆರು ಕಂಪನಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿವೆ. ಈ ಆರು ಕಂಪನಿಗಳ ಒಟ್ಟು ಸಾಲವು ಈ ವರ್ಷದ ಮಾರ್ಚ್ 31ಕ್ಕೆ ₹ 2.30 ಲಕ್ಷ ಕೋಟಿ ಆಗಿತ್ತು. ಕಂಪನಿಗಳ ಬಳಿ ಇರುವ ನಗದನ್ನು ಪರಿಗಣಿಸಿದರೆ, ನಿವ್ವಳ ಸಾಲದ ಮೊತ್ತವು ₹ 1.72 ಲಕ್ಷ ಕೋಟಿ ಆಗುತ್ತದೆ. ಸಮೂಹದ ವಿಸ್ತರಣಾ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದಾಗಿ ವರದಿಯು ತಿಳಿಸಿದೆ. ಅದಾನಿ ಸಮೂಹವು ದೇಶದ ಮೂರನೆಯ ಅತಿದೊಡ್ಡ ಉದ್ಯಮ ಸಮೂಹ. ಸಮೂಹದ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 15.97 ಲಕ್ಷ ಕೋಟಿಗಿಂತ ಹೆಚ್ಚು. ಈಚಿನ ವರ್ಷಗಳಲ್ಲಿ ಅದಾನಿ ಸಮೂಹವು ಹಾಲಿ ವಹಿವಾಟುಗಳನ್ನು ವಿಸ್ತರಿಸುವ ಹಾಗೂ ಹೊಸ ಉದ್ದಿಮೆಗಳನ್ನು ಸ್ಥಾಪಿಸುವ ಕೆಲಸವನ್ನು ತೀವ್ರವಾಗಿ ಮಾಡುತ್ತಿದೆ. ‘ನಾವು, ಇತರ ಹೂಡಿಕೆದಾರರು ಸಮೂಹದ ತೀವ್ರಗತಿಯ ಬೆಳವಣಿಗೆ ಮತ್ತು ಸಾಲದ ಮಟ್ಟದ ಬಗ್ಗೆ ಕಳವಳ ಹೊಂದಿದ್ದೇ ವೆ’ ಎಂದು ವರದಿಯಲ್ಲಿ ಹೇಳಲಾಗಿದೆ.