ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ನಿವಾಸಿಗಳ ಪಾಡು ಹೇಳತೀರದಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ನಗರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆಗಳು ಜಲಾವೃತವಾಗುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣ ನೀಡಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಚರಂಡಿಗಳ ಒತ್ತುವರಿಯಿಂದ ಬೆಂಗಳುರಿನಲ್ಲಿ ಜಲಾವೃತ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರ ಮುನ್ಸಿಪಲ್ ಕಾರ್ಪೊರೇಷನ್ ಕಾಲದಿಂದಲೂ ಈ ಸಮಸ್ಯೆ ಮುಂದುವರೆದುಕೊಂಡು ಬಂದಿದ್ದು, ಇಲ್ಲಿನ ಹಲವು ಪ್ರದೇಶಗಳಲ್ಲಿ ಮಳೆನೀರು ಚರಂಡಿಗಳನ್ನು ಒತ್ತುವರಿ ಮಾಡಲಾಗಿದೆ ಎಂದು ಹೇಳಿದರು.

ಮಳೆನೀರು ಹರಿಯುವ ಪ್ರಮುಖ ಚರಂಡಿಯನ್ನು ಒತ್ತುವರಿ ಮಾಡಿಕೊಂಡ ಪರಿಣಾಮವಾಗಿ, ಬೆಳ್ಳಂದೂರಿನ ಇಕೋಸ್ಪೇಸ್ ಬಳಿ ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯ ಪ್ರವಾಹ ಉಂಟಾಗಿದೆ. ಸ್ಥಳೀಯರು ಈಗ ಸಮಸ್ಯೆಯನ್ನು ಅರಿತು ಸ್ವಲ್ಪ ಭೂಮಿಯನ್ನು ಬಿಟ್ಟುಕೊಡಲು ಒಪ್ಪಿದ್ದಾರೆ, ನೀರಿನ ತಿರುವು ಕಾಲುವೆ ನಿರ್ಮಿಸುವಂತೆ ಸ್ಥಳೀಯರು ಪಾಲಿಕೆಗೆ ಮನವಿ ಮಾಡಿದ್ದಾರೆ. ಬಾಕ್ಸ್ಗಳನ್ನು ಹಾಕಿ ದೊಡ್ಡ ಕಾಲುವೆಗೆ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.