ಅಯೋಧ್ಯೆ :
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಸಮೀಪ ನಿರ್ಮಿಸಲಾದ ಬೃಹತ್ ಯಾಗಶಾಲೆಗೆ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಮಾರು 1 ಎಕರೆ ವ್ಯಾಪ್ತಿಯ ಪೆಂಡಲ್ ಕೆಲವೇ ನಿಮಿಷಗಳಲ್ಲಿ ಸುಟ್ಟು ಭಸ್ಮವಾಗಿದೆ. ಘಟನೆಯ ಸಮಯದಲ್ಲಿ ಯಾರೂ ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾಗಶಾಲೆಯಲ್ಲಿ 9 ದಿನಗಳ ಕಾಲ ಲಕ್ಷ್ಮೀ ನಾರಾಯಣ ಮಹಾಯಜ್ಞ ನಡೆಯುತ್ತಿತ್ತು. ಯಜ್ಞ ಕಾರ್ಯಕ್ರಮ ಮುಗಿದು ಸುಮಾರು ಒಂದೂವರೆ ಗಂಟೆ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಯಾಗ ಮುಗಿದ ನಂತರ ತೆಂಗಿನಕಾಯಿ ಒಡೆಯುವ ವೇಳೆ ಉಂಟಾದ ಕಿಡಿ ಪೆಂಡಲ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ನಿಖರ ಕಾರಣ ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ ಎಂದು ಸಚಿವ ದಯಾಶಂಕರ್ ಸಿಂಗ್ ತಿಳಿಸಿದ್ದಾರೆ. ಯಾಗಶಾಲೆಯಲ್ಲಿ ಒಟ್ಟು 1,251 ಹವನ್ ಕುಂಡಗಳನ್ನು ನಿರ್ಮಿಸಲಾಗಿದ್ದು, ಕೊನೆಯ ದಿನದಲ್ಲಿ 5,000ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಯಜ್ಞದಲ್ಲಿ ಒಟ್ಟು 50,000ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರೆಂದು ಹೇಳಲಾಗಿದ್ದು, ಕಾರ್ಯಕ್ರಮ ಮುಗಿದ ನಂತರ ಎಲ್ಲರೂ ಸ್ಥಳವನ್ನು ತೊರೆದಿದ್ದರಿಂದ ದೊಡ್ಡ ದುರಂತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದರೂ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ.






