ಶೋಷಿತರ ಸ್ವಾಭಿಮಾನದ ಹಾಡು ಹಾಡಿದ ಕವಿಗಳಿಗೆ ವಿದಾಯ!

‘ತುಳಿತಕ್ಕೊಳಗಾದವರ ಸ್ವಾಭಿಮಾನದ ಹಾಡು’ ಎಂದೇ ಗುರುತಿಸಿಕೊಂಡಿದ್ದ ಕವಿ ಡಾ ಸಿದ್ದಲಿಂಗಯ್ಯ ತಮ್ಮ ಸ್ವಾಭಿಮಾನದ ಹಾಡುಗಳನ್ನು ನಿಲ್ಲಿಸಿ, ನಿರ್ಗಮಿಸಿದ್ದಾರೆ.

ಸುರಿಸುಮಾರು ಅರ್ಧ ಶತಮಾನ ಕಾಲ ನಾಡಿನ ಉದ್ದಗಲಕ್ಕೆ ಶೋಷಿತ ಸಮುದಾಯಗಳ ಸ್ವಾಭಿಮಾನದ ಹಾಡಾಗಿ, ಪ್ರತಿ ಹೋರಾಟ, ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳಿಗೆ ಕೆಚ್ಚು ಕೊಟ್ಟ ಹಾಡು, ಘೋಷಣೆಗಳ ಕವಿ ಸಿದ್ದಲಿಂಗಯ್ಯ. ಹೀಗೆ ಹೇಳಿದರೆ, ಮೇಲ್ನೋಟಕ್ಕೆ ವಿನಯ ಮತ್ತು ದೈನ್ಯದ ಸಾಕಾರಮೂರ್ತಿಯಂತಿದ್ದ, ಆಳದಲ್ಲಿ ಮಹಾತುಂಟತನ ಮತ್ತು ಚಿಮ್ಮುವ ಜ್ವಾಲಾಮುಖಿಯಂಥ ಪ್ರತಿಭಟನೆಯ, ಆಕ್ರೋಶವನ್ನು ಬಚ್ಚಿಟ್ಟುಕೊಂಡಿದ್ದ ಸಿದ್ದಲಿಂಗಯ್ಯ ಎಂಬ ಕವಿಯ ಕುರಿತು ಅರ್ಧ ಸತ್ಯವನ್ನು ಆಡಿದಂತೆಯೇ ಸರಿ.

“ಜಗದ ಗೊಂದಲ ಬೇಡ ನಿನಗೆ, ಎದೆಯ ಹಾಡು ನೀನು ನನಗೆ.. ಗೆಳತಿ, ಓ.. ಗೆಳತಿ..” ಎಂದು ಹಾಡುತ್ತಲೇ “ಮೇಲು ಕೀಳಿನ ಬೇಲಿ ಜಿಗಿದು, ಪ್ರೇಮಲೋಕದಿ ನಿನ್ನ ಬಿಗಿದು,..” ಪ್ರೇಮಕಾವ್ಯದಲ್ಲೂ ಸಾಮಾಜಿಕ ಅಸಮಾನತೆಯ ರಾಗ ಬೆಸೆದ ಕವಿ ಸಿದ್ದಲಿಂಗಯ್ಯ, “ದೊಡ್ಡ ಗೌಡರ ಬಾಗಿಲಿಗೆ, ನಮ್ಮ ಮೂಳೆಯ ತೋರಣ,.. ಅವರ ತೋಟದ ತೆಂಗಿನಲ್ಲಿ ನಮ್ಮ ರಕ್ತದ ಎಳನೀರು, ಅವರ ಅಮಲಿನ ಗುಂಗಿನಲ್ಲಿ ಕೂಲಿ ಹೆಣ್ಣಿನ ಕಣ್ಣೀರು..” ಎಂದು ದಮನದ ವಿರುದ್ಧದ ಅಸಹಾಯಕ ಆಕ್ರೋಶಕ್ಕೆ ಕಾವ್ಯದ ದನಿ ಕೊಟ್ಟವರು ಕೂಡ.

1975ರಲ್ಲಿ ‘ಹೊಲೆಮಾದಿಗರ ಹಾಡು’ವಿನ ಮೂಲಕ ಕನ್ನಡ ಸಾಹಿತ್ಯದ ಶಿಷ್ಟಾಚಾರದ ದನಿಗೆ ದಲಿತ ಕ್ರಾಂತಿಯ ಗಡಸುತನ ಕೊಟ್ಟ ಸಿದ್ದಲಿಂಗಯ್ಯ, ಕವಿತೆ ಮತ್ತು ತಮ್ಮ ವೈಚಾರಿಕ ಬರಹಗಳ ಮೂಲಕವಷ್ಟೇ ಅಲ್ಲದೆ, ‘ಊರುಕೇರಿ’ ಎಂಬ ತಮ್ಮ ಆತ್ಮಕಥನದ ಮೂಲಕವೂ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕ ಮತ್ತು ದಲಿತ ಜಗತ್ತಿನ ಸೀಮೆಗಳನ್ನು ವಿಸ್ತರಿಸಿದವರು. ಚಿಂತನ ಡಿ ಆರ್ ನಾಗರಾಜ್ ಅವರು ಗುರುತಿಸುವಂತೆ ‘ದಲಿತ ಆದಿಕವಿ’ಯಾಗಿ ದಲಿತ ಮತ್ತು ಶೋಷಿತ ಸಮುದಾಯಗಳು ನೋವು ಮತ್ತು ಹತಾಶೆಗೆ, ಆಕ್ರೋಶ ಮತ್ತು ಆಗ್ರಹಕ್ಕೆ ದನಿಯಾದವರು. ‘ಹೊಲೆಮಾದಿಗರ ಹಾಡು’ ಸಂಕಲನದಿಂದ ಆರಂಭವಾಗಿ, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ಹಾಗೂ ‘ಊರುಕೇರಿ’ ಭಾಗ-1 ಮತ್ತು ಭಾಗ-2 ಸೇರಿದಂತೆ ಇತ್ತೀಚಿನ ತಮ್ಮ ಬರಹಗಳವರೆಗೆ ಸಿದ್ದಲಿಂಗಯ್ಯ ಅವರ ಬರಹ ಮತ್ತು ಬದುಕು ಕೇವಲ ಗಡಿ-ಸೀಮೆಗಳನ್ನು ದಾಟಿ ಜಗತ್ತಿನ ಮೂಲೆಮೂಲೆಯ ಶೋಷಿತ ಜನಾಂಗಗಳಿಗೆ ಹೊಸ ಪ್ರೇರಣೆಯಾಗಿವೆ.

“ಒಂದು ಜನಾಂಗವನ್ನು ಎರಡು ರೀತಿಗಳಲ್ಲಿ ಕಟ್ಟಲು ಸಾಧ್ಯ… ಒಂದು ರಾಜಕೀಯ ಸಂಕಲ್ಪದ ಮೂಲಕ, ಮತ್ತೊಂದು ಸಾಹಿತ್ಯದ ಪ್ರತಿಭಾ ಸಂಕಲ್ಪದ ಮೂಲಕ. .. ರಾಜಕೀಯ ಸಂಕಲ್ಪದ ಮೂಲಕ ನಿರ್ಮಾಣವಾದ ಜನಾಂಗ ತನಗೆ ಅಗತ್ಯವಿರುವ ಸಾಂಸ್ಕೃತಿಕ ರೂಪಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಹಾಗೂ ಸಾಹಿತ್ಯ ಸಂಕಲ್ಪ ಕೂಡ ಸಾಧ್ಯವಿರುವ ರಾಜಕೀಯ ಕ್ರಿಯೆಯ ಮಾದರಿಗಳನ್ನು ಕಟ್ಟಿಕೊಳ್ಳುತ್ತದೆ..” ಎಂದು ಡಿ ಆರ್ ನಾಗರಾಜ್ ಅವರು ಸಿದ್ದಲಿಂಗಯ್ಯ ಕಾವ್ಯದ ಕುರಿತು ಆಡಿದ ಮಾತುಗಳು ಕಳೆದ 45 ವರ್ಷಗಳಲ್ಲಿ ಹಲವು ಬಗೆಯಲ್ಲಿ ಮತ್ತೆ ಮತ್ತೆ ನಿರೂಪಿತವಾಗಿವೆ.

ಏಕೆಂದರೆ; ಸಿದ್ದಲಿಂಗಯ್ಯ ಅವರ ಕಾವ್ಯ ಎಂಬುದು ಸಾಹಿತ್ಯ ವಲಯ ಗುರುತಿಸುವಂತೆ ಭಾರತೀಯ ದಲಿತ ಸಾಹಿತ್ಯದ ಪ್ರಮುಖ ದನಿಯಾಗಿ, ದಲಿತ ಸಂವೇದನೆಯ ಹರಿವಾಗಿ ಮಾತ್ರ ಉಳಿಯಲಿಲ್ಲ; ಬದಲಾಗಿ, ಆ ಕಾವ್ಯ ದಲಿತರ ನಿತ್ಯ ಗೋಳು ಮತ್ತು ಸಂಭ್ರಮದ ಹಾಡಾಗಿ ಹರಿಯಿತು. ಕರ್ನಾಟಕದ ಮಟ್ಟಿಗಂತೂ ದಲಿತ ಕವಿಯ ಚೊಚ್ಚಲ ಕವಿತೆಗಳ ಸಂಕಲನ ‘ಹೊಲೆಮಾದಿಗರ ಹಾಡಿ’ನೊಂದಿಗೇ ದಲಿತ ಹೋರಾಟದ ಹಾಡು ಕೂಡ ಮೊಳಗಿತು. ಅಂಬೇಡ್ಕರ್, ಲೋಹಿಯಾ, ಬುದಧ ಮತ್ತು ಬಸವರಾಗಿಯಾಗಿ ಅಷ್ಟರಲ್ಲಾಗಲೇ ಹೊತ್ತಿಸಿದ್ದ ಅರಿವಿನ, ಸಮಾನತೆಯ, ಹಕ್ಕೊತ್ತಾಯದ ಕಿಡಿಗಳಿಗೆ ‘ಹೊಲೆಮಾದಿಗರ ಹಾಡು’, ಸೊಲ್ಲಾಗಿ ತಿದಿಯೊತ್ತಿತು. ದಲಿತ ಮತ್ತು ಬಂಡಾಯದ ಹೋರಾಟ, ರೈತ ಹೋರಾಟಗಳಲ್ಲಿ ಕವಿಯ ಹಾಡುಗಳೇ ಕ್ರಾಂತಿಗೀತೆಗಳಾದವು.

ಆಗ ತಾನೇ ಶತಮಾನಗಳ ಶೋಷಣೆಯ ವಿರುದ್ಧ ದನಿ ಎತ್ತಲು ಕಲಿಯತೊಡಗಿದ್ದ ಶೋಷಿತರ ಪಾಲಿಗೆ ಕವಿಯ ಹಾಡೇ ಹಾದಿಯ ತೋರಿತು. ದಲಿತ ಎಚ್ಚರದ ಜೊತೆಗೆ ಎಚ್ಚೆತ್ತ ಪ್ರಜ್ಞೆಗೆ ಸೂಕ್ತ ಭಾಷೆಯನ್ನು ಕಟ್ಟಿಕೊಟ್ಟದ್ದು ಕವಿ ಹಾಡು. ಹಾಗಾಗಿಯೇ ನಾಲ್ಕೂವರೆ ದಶಕಗಳ ಬಳಿಕವೂ ‘ಯಾರಿಗೆ ಬಂತು, ಎಲ್ಲಿಗೇ ಬಂತು ನಲವತ್ತೇಳರ ಸ್ವಾತಂತ್ರ್ಯ’, ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು, ಕಪ್ಪು ಮುಖ, ಬೆಳ್ಳಿ ಗಡ್ಡ, ಉರಿಯುತ್ತಿರುವ ಕಣ್ಣುಗಳು, ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು..’, ‘ಇಕ್ರಲಾ, ಒದೀರ್ಲಾ, ಈ ನನ್ನ ಮಕ್ಕಳ ಚರ್ಮ ಎಬ್ರಲಾ..’, ಮುಂತಾದ ಅವರ ಹಾಡುಗಳು ಇಂದಿಗೂ ಬೀದಿಬೀದಿಯ ಹೋರಾಟಗಳಲ್ಲಿ ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಆಕ್ರೋಶದ ದನಿಯಾಗಿ ಮೊಳಗುತ್ತಲೇ ಇವೆ.

ಅಂದರೆ; ಸಿದ್ದಲಿಂಗಯ್ಯ ಕವಿಯಾಗಿ, ಚಿಂತಕರಾಗಿ, ಉಪನ್ಯಾಸಕರಾಗಿ, ಹೋರಾಟಗಾರರಾಗಿ, ವಿಧಾನಪರಿಷತ್ ಸದಸ್ಯರಾಗಿ ವ್ಯಕ್ತಿಗತ ನೆಲೆಯಲ್ಲಿ ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆ, ತಾವೇ ಸಿಡಿದೆದ್ದ ಶೋಷಿತ ವ್ಯವಸ್ಥೆಯಲ್ಲಿ ಎಷ್ಟು ಬದಲಾವಣೆ ತಂದಿದ್ದಾರೆ ಎಂಬುದು ಒಂದು ಕಡೆಯಾದರೆ, ಅವರನ್ನೂ ಮೀರಿ ಬೆಳೆದ ಅವರ ಹಾಡು, ಕಾವ್ಯ, ಚಿಂತನೆಗಳು, ಹೋರಾಟಕ್ಕೆ ನೀಡಿದ ಪ್ರೇರಣೆ, ಸ್ಫೂರ್ತಿಗಳು ಇಡೀ ವ್ಯವಸ್ಥೆಯ ಬದಲಾವಣೆಯ ವೇಗೋತ್ಕರ್ಷವಾಗಿ ಹಬ್ಬಿರುವುದು ಮತ್ತೊಂದು ಮಜಲು.

ಎಂಭತ್ತರ ದಶಕದ ಹೊತ್ತಿಗೆ ದಲಿತ ಚಳವಳಿಯ ದನಿಯಾದ ಕವಿಗಳ ಹಾಡುಗಳು ಒಂದು ಕಡೆ ಹೋರಾಟದ ಕಿಚ್ಚನ್ನು ಹಬ್ಬಿಸುತ್ತಿರುವಾಗಲೇ, ದಲಿತ ಸಮಾನತೆ, ದಲಿತ ಹಕ್ಕುಗಳು, ದಲಿತ ಅವಕಾಶಗಳ ಬೇಡಿಕೆಗಳು ಹೋರಾಟದ ಹಕ್ಕೊತ್ತಾಯಗಳಾಗಿರುವಾಗಲೇ ಹಾಡುಗಳನ್ನು ಹಡೆದ ಕವಿ ವಿಧಾನಪರಿಷತ್ತಿನ ಸದಸ್ಯರಾಗಿ ಅಧಿಕಾರದ ಮೊಗಸಾಲೆಗೆ ಕಾಲಿಟ್ಟಿದ್ದರು! ಅಲ್ಲಿಯೂ ಅವರು ಅಜಲು ಪದ್ಧತಿಯಂತಹ ಹೀನಾಯ ದಲಿತ ಶೋಷಣೆಯ ಪದ್ಧತಿಗಳು, ಆಚರಣೆಗಳ ವಿರುದ್ಧ ಸಮರ್ಥವಾಗಿ ಹೋರಾಡಿದರು ಎಂಬುದು ತಳ್ಳಿಹಾಕಲಾಗದ ಸಂಗತಿ. ಆದರೆ, ಅದೇ ಹೊತ್ತಿಗೆ ರಾಜಕೀಯ ಅಧಿಕಾರದ ಮೆಟ್ಟಿಲೇರುತ್ತಲೇ ಕವಿಯ ಹೋರಾಟ ಮತ್ತು ದಲಿತ ಚಳವಳಿಯ ನಾಯಕತ್ವದ ಬದ್ಧತೆಗಳು ಮಾಸತೊಡಗಿದವು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರೊಂದಿಗಿನ ಕವಿಯ ಸಖ್ಯ, ಆಗ ತಾನೇ ಕಾವು ಪಡೆದಿದ್ದ ದಲಿತ-ಬಂಡಾಯ ಚಳವಳಿಗಳಿಯನ್ನೇ ಒಂದು ರೀತಿಯ ಮುಲಾಜಿಗೆ, ಸಂದಿಗ್ಧತೆಗೆ ಸಿಲುಕಿಸಿತು ಎಂಬ ಮಾತುಗಳೂ ಕೇಳಿಬಂದಿದ್ದವು. ‘ಇಕ್ಕಲ್ರಾ, ಒದಿರ್ಲಾ…’ ಎಂದ ಕವಿ, ‘ಊರ ಗೌಡ’ರ ಸಾಲಲ್ಲೇ ನಿಂತು ಕೈಬೀಸಿದಾಗ ಸಹಜವಾಗೇ ಬೀದಿ ಹೋರಾಟದ ಕ್ರಾಂತಿಯ ಕಣ್ಣುಗಳಲ್ಲಿ ಗೊಂದಲ ಮೂಡಿತ್ತು.

ವೈಯಕ್ತಿಕವಾಗಿ ಮೃದುಭಾಷಿಯೂ, ನಯ-ವಿನಯದ ವ್ಯಕ್ತಿತ್ವದವರೂ ಆಗಿದ್ದ ಸಿದ್ದಲಿಂಗಯ್ಯ ಅವರ ಆ ಮೃದೃತ್ವವೇ ಅವರು ಕೆಲವು ಸಂದರ್ಭದಲ್ಲಿ ಮುಲಾಜಿಗೆ ಒಳಗಾಗಿ ಹೋರಾಟ ಮತ್ತು ರಾಜಕೀಯ ವಿಷಯದಲ್ಲಿ ರಾಜಿಗೆ ಒಳಗಾಗಬೇಕಾದ ಅನಿವಾರ್ಯತೆಗೆ ಅವರನ್ನು ದೂಡಿದವು. ಅದು ರಾಮಕೃಷ್ಣ ಹೆಗಡೆಯವರ ಕಾಲದಿಂದ ಇತ್ತೀಚೆಗೆ, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗಿನ ಅವರ ಭೇಟಿಯವರೆಗೆ ಹಲವು ಸಂದರ್ಭಗಳಲ್ಲಿ, ನಿರ್ಣಾಯಕ ಗಟ್ಟಿ ನಿಲುವು ತಳೆಯಬೇಕಾದಾಗ ಅವರನ್ನು ಅನಿವಾರ್ಯ ಹೊಂದಾಣಿಕೆಗೆ ನೂಕಿದವು. ಹಾಗಾಗಿ, ಸಣ್ಣಪುಟ್ಟ ಅವಕಾಶಗಳ ಮರ್ಜಿಗೆ ಬಿದ್ದು, ‘ದೊಡ್ಡವರ’ ಮುಲಾಜಿಗೆ ಬಿದ್ದು ಕವಿಗಳು, ಕರ್ನಾಟಕದಲ್ಲಿ ದಲಿತ ಚಳವಳಿಗೆ ನೀಡಬಹುದಾಗಿದ್ದ ರಾಜಕೀಯ ಆಯಾಮ ನೀಡುವಲ್ಲಿ, ಸೃಷ್ಟಿಸಬಹುದಾಗಿದ್ದ ರಾಜಕೀಯ ಅವಕಾಶ ಸೃಷ್ಟಿಸುವಲ್ಲಿ ಐತಿಹಾಸಿಕ ಅವಕಾಶವನ್ನು ಕೈಚೆಲ್ಲಿದರು ಎಂಬ ಮಾತೂ ಇದೆ.

ಇಂತಹದ್ದೇ ಕಾರಣಗಳಿಂದಾಗಿಯೇ ಅವರ ರಾಜಕಾರಣದ ಪ್ರವೇಶದೊಂದಿಗೇ ದಲಿತ ಮತ್ತು ಬಂಡಾಯ ಚಳವಳಿಗಳೊಂದಿಗೆ ಇದ್ದ ಅವರ ನಂಟು ಕೂಡ ಮಸುಕಾಯಿತು ಎಂಬುದು, ಕವಿಯ ದಲಿತಪರ, ಶೋಷಿತ ಪರ ಕಾಳಜಿ ಮತ್ತು ಕಕ್ಕುಲತೆಗಳ ಬಗೆಗಿನ ಮುಕ್ಕಾಗದ ಗೌರವದೊಂದಿಗೇ ಒಪ್ಪಿಕೊಳ್ಳಲೇಬೇಕಾದ ಕಡುವಾಸ್ತವ. ಆದರೆ, ಅಷ್ಟರಲ್ಲಿ ಕವಿಯನೇ ಹಿಂದೆ ಬಿಟ್ಟು ಅವರ ಸ್ವಾಭಿಮಾನದ ಹಾಡು ಬಹಳ ಮುಂದೆ ಸಾಗಿತ್ತು!

ಇದೀಗ, ಕವಿಗಳು ತಮ್ಮ ಸ್ವಾಭಿಮಾನದ ಹಾಡು ಮುಗಿಸಿ, ಕ್ರಾಂತಿಯ ಕೊರಳಿಗೆ ವಿಶ್ರಾಂತಿ ಘೋಷಿಸಿದ್ದಾರೆ. ಆದರೆ, ಶೋಷಿತರ ಆ ಹಾಡು, ಶೋಷಣೆ, ಅನ್ಯಾಯ, ಅಟ್ಟಹಾಸಗಳ ಅಂಧಕಾರದಲ್ಲಿ ದಿಕ್ಕೆಟ್ಟವರಿಗೆ ಕಂದೀಲಾಗಿ ಹಾದಿಯ ತೋರಿದೆ. ಎಚ್ಚೆತ್ತ ಸಮುದಾಯಗಳು ದಶಕಗಳ ಹೋರಾಟದ ಹಾದಿಯಲ್ಲಿ ಸಾಕಷ್ಟು ಸಾಗಿಬಂದಿವೆ. ಹಾಡು ಸಮುದಾಯವನ್ನು ಕಟ್ಟಿದೆ. ಸಮುದಾಯದ ಮನಸುಗಳನ್ನು ಕಟ್ಟಿ ಬೆಳೆಸಿದೆ. ಒಂದು ಪ್ರಜ್ಞಾವಂತ ಸಮುದಾಯವಾಗಿ, ತಲೆಮಾರುಗಳಾಗಿ ದಲಿತರನ್ನು ಕಟ್ಟಿಬೆಳೆಸುವಲ್ಲಿ ಕವಿಗಳ ಹಾಡುಗಳ ಕೊಡುಗೆ ದೊಡ್ಡದಿದೆ. ಒಂದು ಜನಾಂಗಕ್ಕೆ ಪ್ರತಿರೋಧದ, ಪ್ರತಿಭಟನೆಯ ದನಿ ನೀಡಿದ ಹಾಡುಗಳು ತೋರಿದ ಹಾದಿ ಕೂಡ ವಿಸ್ತಾರವಿದೆ.

ತಲೆಮಾರುಗಳ ಎದೆಯ ತುಡಿತಕ್ಕೆ, ಸಮಾನತೆಯ ಕೂಗಿಗೆ ದನಿಯಾದ ಹಾಡು ಹಾಡಿದ, ಆ ಹಾಡುಗಳ ಮೂಲಕವೇ ದಂತಕತೆಯಾಗಿದ್ದ ಕವಿಗಳಿಗೆ ಭಾವಪೂರ್ಣ ವಿದಾಯ. ನಿಮ್ಮನ್ನೂ ಮೀರಿ ಹಬ್ಬಿರುವ ಹಾಡು, ತಲೆಮಾರುಗಳವರೆಗೆ ಹಾದಿಯ ತೋರುತ್ತಲೇ ಇರುತ್ತದೆ. ನೀವು ಹಚ್ಚಿದ ಕಂದೀಲು ದಾರಿ ದೀಪವಾಗಿಯೇ ಉರಿಯುತ್ತಿರುತ್ತದೆ.. ಹೋಗಿ ಬನ್ನಿ, ವಿದಾಯ..!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...