Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ವಂಶ ರಾಜಕಾರಣದ ನೆಲೆಗಳೂ ಸಾಮಾಜಿಕ ವಾಸ್ತವವೂ

ಭಾರತೀಯ ಸಮಾಜವೇ ರಾಜಪ್ರಭುತ್ವದ ಪಳೆಯುಳಿಕೆಗಳಿಂದ ಮುಕ್ತವಾಗಬೇಕಿದೆ
ನಾ ದಿವಾಕರ

ನಾ ದಿವಾಕರ

July 28, 2022
Share on FacebookShare on Twitter

ಸ್ವತಂತ್ರ ಭಾರತದ ಒಂದು ದುರಂತ ಎಂದರೆ 75 ವರ್ಷಗಳ ಪ್ರಜಾಪ್ರಭುತ್ವದ ಆಳ್ವಿಕೆಯ ನಂತರವೂ ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿ, ಅಧಿಕಾರ ರಾಜಕಾರಣದಲ್ಲಿ, ಸಾಮಾಜಿಕ ಚಳುವಳಿಗಳಲ್ಲಿ ಮತ್ತು ಸಾಂಸ್ಥಿಕ ನೆಲೆಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಬೇರೂರಲು ಸಾಧ್ಯವಾಗಿಲ್ಲ. ಸಾಂಸ್ಥಿಕ ಮತ್ತು ಸಾಂಘಿಕ ನೆಲೆಯಲ್ಲಿ ಪ್ರಜಾತಂತ್ರ ಮೌಲ್ಯಗಳ ಬಗ್ಗೆ ಗಂಭೀರವಾದ ಚಿಂತನ ಮಂಥನಗಳು ನಡೆಯುತ್ತಲೇ ಇದ್ದರೂ, ಆಚರಣೆಯ ಹಂತದಲ್ಲಿ, ಕಾರ್ಯ ಚಟುವಟಿಕೆಗಳಲ್ಲಿ ಮತ್ತು ಆಡಳಿತ ನಿರ್ವಹಣೆಯ ಹಂತದಲ್ಲಿ ಮೇಲ್‌ ಸ್ತರದ ಅಧಿಕಾರ ಸಂರಚನೆಗಳು ಸಡಿಲವಾಗಲು ಸಾಧ್ಯವಾಗಿಲ್ಲ. ಭಾರತದ ಸಾಮಾಜಿಕ ಜೀವನದಲ್ಲೂ ಸಹ ನಾಯಕತ್ವದ ಪ್ರಶ್ನೆ ಎದುರಾದಾಗ ಒಂದು ಪ್ರಬಲ ವರ್ಗದ, ಗುಂಪಿನ, ವ್ಯಕ್ತಿಯ, ಸಾಂಘಿಕ ಶಕ್ತಿಯ ಪರಮಾಧಿಪತ್ಯವೇ ಮುನ್ನೆಲೆಗೆ ಬರುತ್ತದೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಾಯಕತ್ವದ ಆಯ್ಕೆ ಎನ್ನುವ ಪರಿಕಲ್ಪನೆಗೆ ಇನ್ನೂ ನಮ್ಮ ಸಮಾಜ ತೆರೆದುಕೊಂಡಿಲ್ಲ ಎನ್ನುವುದನ್ನು ಎಲ್ಲ ವಲಯಗಳಲ್ಲೂ ಗಮನಿಸಬಹುದು.

ಹೆಚ್ಚು ಓದಿದ ಸ್ಟೋರಿಗಳು

ಅಳಿದುಹೋಗಿರುವ ಸಂಸ್ಕೃತ ಭಾಷೆಯ ತಾಯ್ನೆಲ ಯಾವುದು?

ಭಾರತದ ಪ್ರಜಾತಂತ್ರ ಮತ್ತು ಪ್ರಗತಿಪರರ ಹೋರಾಟ

ಹೆಚ್ಚು ಹೆಚ್ಚು ಸಂಸ್ಕರಿತ ಆಹಾರದ ಸೇವನೆಯು ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು: ಅಧ್ಯಯನ ವರದಿ

ಈ ಸನ್ನಿವೇಶದಲ್ಲೇ ಭಾರತದ ರಾಜಕಾರಣದಲ್ಲಿ ʼವಂಶಾಡಳಿತ ಮುಕ್ತʼ ಭಾರತದ ಘೋಷಣೆ ಹೆಚ್ಚು ಚಾಲನೆ ಪಡೆದುಕೊಳ್ಳುತ್ತಿದೆ. ಮೂಲತಃ ನೆಹರೂ-ಇಂದಿರಾ-ರಾಜೀವ್-ಸೋನಿಯಾ ಗಾಂಧಿ ಕೇಂದ್ರಿತ ಕುಟುಂಬ ರಾಜಕಾರಣವನ್ನೇ ಉದ್ದೇಶಿಸಿ ಭಾರತದ ರಾಜಕಾರಣವನ್ನು ವಂಶಾಡಳಿತದಿಂದ ಮುಕ್ತಗೊಳಿಸುವ ಆಲೋಚನೆ ಹೊರಹೊಮ್ಮಿದೆಯಾದರೂ, ಭಾರತ ಸ್ವತಂತ್ರ ರಾಷ್ಟ್ರವಾದ ದಿನದಿಂದಲೂ ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಾತೀತವಾಗಿ ಈ ಪರಂಪರೆ ಬೆಳೆದುಬಂದಿರುವುದನ್ನು ಗುರುತಿಸಬಹುದು. ಎಡಪಕ್ಷಗಳನ್ನು ಹೊರತುಪಡಿಸಿದರೆ ಎಲ್ಲ ಬಂಡವಳಿಗ ಪಕ್ಷಗಳೂ, ಪ್ರಾದೇಶಿಕ ಪಕ್ಷಗಳೂ ಸಹ ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿನಲ್ಲಿ ವಂಶಾಡಳಿತವನ್ನು ಮುಂದುವರೆಸಿಕೊಂಡು ಬಂದಿವೆ. ರಾಜಕೀಯ ಪಕ್ಷಗಳ ಮತ್ತು ಸಂಘಟನೆಗಳ ನಾಯಕತ್ವದ ನೆಲೆಯಲ್ಲಿ ಕಾಣಲಾಗದಿದ್ದರೂ, ಸಾಂಘಿಕ ಚಟುವಟಿಕೆಗಳ ನೆಲೆಯಲ್ಲಿ ತಮ್ಮ ನಂತರದ ಪೀಳಿಗೆಯನ್ನು ಮುನ್ನೆಲೆಗೆ ತರುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಹಪಹಪಿ ಬಹುಪಾಲು ಎಲ್ಲ ರಾಜಕೀಯ ನಾಯಕರಲ್ಲೂ ಕಾಣಬಹುದು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗಳಲ್ಲಿ ಈ ಆಧಿಪತ್ಯದ ನೆಲೆಗಳು ಕುಟುಂಬಗಳಿಂದ ಗುಂಪುಗಳಿಗೆ ಅಥವಾ ಅಸ್ಮಿತೆಗಳನ್ನಾಧರಿಸಿದ ಬಣಗಳಿಗೆ ರೂಪಾಂತರ ಹೊಂದುತ್ತವೆ. ಅಧಿಕಾರ ರಾಜಕಾರಣದಿಂದ ಮುಕ್ತವಾಗಿ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಾಂಸ್ಕೃತಿಕ ಸೃಜನಶೀಲತೆಗಾಗಿ ಹೋರಾಡುವ ಸಂಘಟನೆಗಳ ನಡುವೆಯೂ ಸಹ ವಂಶಾಡಳಿತದ ಮತ್ತೊಂದು ಸ್ವರೂಪವನ್ನು ಕಾಣುತ್ತಲೇ ಬಂದಿದ್ದೇವೆ. ರಾಜಕಾರಣದಲ್ಲಿ ರಕ್ತ ಸಂಬಂಧಗಳು ನಿರ್ಣಾಯಕವಾದರೆ, ಸಾಮಾಜಿಕ ಸ್ತರದಲ್ಲಿ ವ್ಯಕ್ತಿನಿಷ್ಠೆ, ಗುಂಪುನಿಷ್ಠೆ ಮತ್ತು ನಿರ್ದಿಷ್ಟ ಅಸ್ಮಿತೆಗಳ ಚೌಕಟ್ಟುಗಳು ನಿರ್ಣಾಯಕವಾಗುತ್ತವೆ. ಪ್ರಜಾಸತ್ತಾತ್ಮಕ ಮಾರ್ಗದಲ್ಲೇ ಮುನ್ನಡೆದು, ಸಮಷ್ಟಿ ನೆಲೆಯಲ್ಲಿ ಸಮಾಜಕ್ಕೆ ಒಂದು ಮೌಲ್ಯಯುತ ಹಾದಿಯನ್ನು ತೋರಬೇಕಾದ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳಲ್ಲೂ ಸಹ ಈ ನಿರ್ಣಾಯಕ ಅಂಶಗಳೇ ಪಟ್ಟಭದ್ರ ಹಿತಾಸಕ್ತಿಗಳನ್ನು ಸೃಷ್ಟಿಸುತ್ತಾ ಹೋಗುತ್ತವೆ. ಮುಂಚೂಣಿ ನಾಯಕತ್ವವನ್ನು ಆಯ್ಕೆ ಮಾಡಬೇಕಾದ ಸಂದರ್ಭದಲ್ಲಿ ನಡೆಯುವಂತಹ ನೇಪಥ್ಯದ ಸ್ವಾರ್ಥ ರಾಜಕಾರಣ ಮತ್ತು ಸ್ವ-ಹಿತಾಸಕ್ತಿಗಳ ಮೇಲಾಟದಿಂದ, ಬಹುತೇಕ ಸಂಘಟನೆಗಳು ತಮ್ಮ ಪ್ರಜಾಸತ್ತಾತ್ಮಕ ನೆಲೆಯನ್ನು ಕಳೆದುಕೊಂಡಿರುವುದನ್ನು ಗಮನಿಸಬಹುದು.

ನಾಯಕತ್ವ ಬದಲಾವಣೆ ಎಂದರೆ ಕೇವಲ ಅಧಿಕಾರ ಹಸ್ತಾಂತರ ಮಾತ್ರ ಎನ್ನುವ ಚಾರಿತ್ರಿಕ ಪರಿಕಲ್ಪನೆಯನ್ನು ನಾವು ರಾಜಪ್ರಭುತ್ವದ ಪರಂಪರೆಯಿಂದಲೂ ರೂಢಿಸಿಕೊಂಡು ಬಂದಿದ್ದೇವೆ. ಹೊಸತನ್ನು ಅಪ್ಪಿಕೊಳ್ಳುತ್ತಲೇ, ಹಳೆಯದನ್ನು ವೈಭವೀಕರಿಸುತ್ತಾ ಮುನ್ನಡೆಯುವ ನಾಯಕತ್ವವು ಕ್ರಮೇಣವಾಗಿ ಹೊಸತನ ಬಯಸುವ ಯುವ ಪೀಳಿಗೆಯಲ್ಲಿ ಭ್ರಮನಿರಸನ ಉಂಟುಮಾಡುವುದನ್ನೂ ಗಮನಿಸುತ್ತಲೇ ಬಂದಿದ್ದೇವೆ. ಸಂಸ್ಕೃತಿಯ ಚಲನಶೀಲತೆ ಮತ್ತು ಸಾಮಾಜಿಕ ಬದುಕಿನ ಚಾಲನಾ ಶಕ್ತಿಯನ್ನು ಮನಗಾಣದೆ, ಪರಂಪರೆಯ ಪಳೆಯುಳಿಕೆಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಬರುವ ಮೂಲಕ ಬಹುತೇಕ ಸಾಂಸ್ಕೃತಿಕ ಸಂಘಟನೆಗಳೂ ಸಹ ನವ ಯುಗದಲ್ಲಿ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿರುವುದೂ ವಾಸ್ತವ . ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ನವ ತಂತ್ರಜ್ಞಾನ ಯುಗದಲ್ಲಿ ಯುವ ಪೀಳಿಗೆಯ ಆಲೋಚನೆಯ ವ್ಯಾಪ್ತಿಯೂ ಹಿರಿದಾಗುತ್ತಲೇ ಹೋಗುತ್ತದೆ. ಈ ಪೀಳಿಗೆಯ ಚಿಂತನಾ ಕ್ರಮಗಳನ್ನು ಗ್ರಹಿಸಿ, ಸೂಕ್ತ ಭವಿಷ್ಯ ಮಾರ್ಗಗಳನ್ನು ರೂಪಿಸುವುದು ಹಿರಿಯ ಪೀಳಿಗೆಯ ಆದ್ಯತೆಯಾಗಿರಬೇಕು.

ಆದರೆ ಭಾರತದ ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನ ಧೋರಣೆ ಮತ್ತು ತತ್ಸಂಬಂಧಿ ಊಳಿಗಮಾನ್ಯ ಮನೋಭಾವ ಈ ಮುನ್ನಡೆಯ ಹಾದಿಗೆ ತೊಡಕಾಗಿ ಪರಿಣಮಿಸುತ್ತದೆ. ಭಾರತದ ರಾಜಕಾರಣದಲ್ಲಿ ಆಳವಾಗಿ ಬೇರೂರಿರುವ ವಂಶಾಡಳಿತದ ಬೇರುಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಪ್ರಜಾತಂತ್ರದ ಮೌಲ್ಯಗಳನ್ನು ಸಂರಕ್ಷಿಸುವ ಧ್ಯೇಯ ಕಂಡುಬಂದರೂ ಅದು ಸಾಪೇಕ್ಷವಾಗಿಯೇ ಉಳಿದಿರುತ್ತದೆ. ಅಧಿಕಾರ ರಾಜಕಾರಣದಲ್ಲಿ ವರ್ತಮಾನದ ಸ್ಥಿತಿ, ಭವಿಷ್ಯದ ಅಸ್ತಿತ್ವ ಮತ್ತು ನಿರಂತರ ಮುನ್ನಡೆಯೇ ಪ್ರಧಾನವಾಗುವುದರಿಂದ, ಪಕ್ಷವನ್ನು ಮುನ್ನಡೆಸುವುದೆಂದರೆ ಆಂತರಿಕ ಅಧಿಕಾರ ಕೇಂದ್ರಗಳನ್ನು ಯಥಾಸ್ಥಿತಿಯಲ್ಲಿರಿಸಿಕೊಂಡು ಮುಂದುವರೆಯುವುದೇ ಆಗಿರುತ್ತದೆ. ಕಾಂಗ್ರೆಸ್‌ ಪಕ್ಷವು ಆರಂಭದಿಂದಲೇ ರೂಢಿಸಿಕೊಂಡು ಬಂದಿರುವ ಹೈಕಮಾಂಡ್‌ ಸಂಸ್ಕೃತಿಯ ಆಧಾರವೂ ಇದೇ ಆಗಿದೆ.

ಎರಡು ಮೂರು ದಶಕಗಳ ಹಿಂದೆ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಸಂಸ್ಕೃತಿಯನ್ನು ತೀವ್ರವಾಗಿ ಖಂಡಿಸುತ್ತಿದ್ದ ಬಿಜೆಪಿ ಇಂದು ಅದೇ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ರಾಜ್ಯಗಳಲ್ಲಿ ರಚಿಸಲಾಗುವ ಮಂತ್ರಿಮಂಡಲದಿಂದ ನಿಗಮ ಮಂಡಲಿಯ ನೇಮಕಾತಿಯವರೆಗೂ ಆಡಳಿತಾರೂಢ ಪಕ್ಷವು ಹೈಕಮಾಂಡ್‌ ಸೂಚನೆಯನ್ನೇ ಅನುಸರಿಸುವುದು ಸ್ವೀಕೃತ ಪದ್ಧತಿಯೇ ಆಗಿಹೋಗಿದೆ. 1980-90ರ ದಶಕದಲ್ಲಿ ಕಾಂಗ್ರೆಸ್‌ ಸರ್ಕಾರಗಳು ಅಧಿಕಾರದಲ್ಲಿದ್ದಾಗ, ಸಚಿವ ಸಂಪುಟವೂ ಮುಚ್ಚಿದ ಲಕೋಟೆಯಲ್ಲಿ ದೆಹಲಿಯಿಂದಲೇ ಬರುತ್ತದೆ ಎಂದು ಲೇವಡಿ ಮಾಡಲಾಗುತ್ತಿತ್ತು. ಇಂದು ಬಿಜೆಪಿ ಸಹ ಇದೇ ಮಾದರಿಯನ್ನು ಅನುಸರಿಸುತ್ತಿದೆ. ರಾಜ್ಯ ರಾಜಕೀಯ ನಾಯಕತ್ವದ ಸ್ವಾಯತ್ತತೆಯನ್ನು, ಪಕ್ಷ ನಿಷ್ಠೆಗಾಗಿ ಬಲಿಕೊಡುವ ಒಂದು ವಿಕೃತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲಾಗಿದೆ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣವೇ ಮೂಲ ಮಂತ್ರವಾದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ.

ಆದರೆ ಭಾರತದ ಸಂಸದೀಯ ರಾಜಕಾರಣದಲ್ಲಿ ಈ ತಾತ್ವಿಕ ನೆಲೆಗಳು ಎಂದೋ ಅಳಿಸಿಹೋಗಿವೆ. ಸಾಂವಿಧಾನಿಕವಾಗಿ ಅಧಿಕಾರ ವಿಕೇಂದ್ರೀಕರಣವನ್ನು ಸಾಕಾರಗೊಳಿಸಲಾಗಿದೆಯಾದರೂ, ಮಂಡಲ ಪಂಚಾಯತಿಯ ಹಂತದಿಂದ ಪ್ರಧಾನಮಂತ್ರಿಯ ಕಚೇರಿಯವರೆಗೂ ಪಕ್ಷ ರಾಜಕಾರಣದ ಛಾಯೆ ದಟ್ಟವಾಗಿ ಹರಡಿದ್ದು, ಹೆಚ್ಚಿನ ಮಟ್ಟಿಗೆ ಜನಪ್ರತಿನಿಧಿಗಳ ಕಾರ್ಯಚಟುವಟಿಕೆಗಳು ಪಕ್ಷಕೇಂದ್ರಿತವಾಗಿಯೇ ಇರುತ್ತವೆ. ಸಾರ್ವಭೌಮ ಜನತೆಯ ಮುಂದಿರುವ ಆಯ್ಕೆಯ ಪ್ರಶ್ನೆ ನೇಪಥ್ಯಕ್ಕೆ ಸರಿದು, ಅಧಿಕಾರಯುತ ಅಥವಾ ಅಧಿಕಾರಸ್ಥ ರಾಜಕೀಯ ಪಕ್ಷಗಳ ಆದ್ಯತೆಗಳು ಮುನ್ನೆಲೆಗೆ ಬರುತ್ತವೆ. ಹಾಗಾಗಿಯೇ ಬಹುತೇಕ ಸನ್ನಿವೇಶಗಳಲ್ಲಿ ಜನತೆಯ ಮುಂದಿನ ಆಯ್ಕೆಯ ಪ್ರಶ್ನೆ ಜಟಿಲವಾಗುತ್ತದೆ ಅಥವಾ ನಗಣ್ಯವೂ ಆಗುತ್ತದೆ. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಜಾತಿ ರಾಜಕಾರಣ ಬೇರುಗಳು ಪಾತಾಳ ತಲುಪಿರುವುದರಿಂದ, ಪ್ರತಿಯೊಂದು ಜಾತಿಯೂ ಸಹ ತನ್ನದೇ ಅದ ಪ್ರಬಲ ಗುಂಪುಗಳ ನಡುವೆಯೇ ಆಯ್ಕೆ ಮತ್ತು ಆದ್ಯತೆಗಳತ್ತ ಗಮನಹರಿಸಬೇಕಾಗುತ್ತದೆ.

ಭಾರತದ ಸಂದರ್ಭದಲ್ಲಿ ವಂಶ ರಾಜಕಾರಣ ಅಥವಾ ಕುಟುಂಬ ರಾಜಕಾರಣವನ್ನು ಕೊಂಚ ವಿಸ್ತೃತ ನೆಲೆಯಲ್ಲಿ ಪರಾಮರ್ಶಿಸಿದಾಗ, ಇದು ಗುಂಪು, ಬಣ ಮತ್ತು ಪ್ರಬಲ ವರ್ಗಗಳಿಗೂ ವ್ಯಾಪಿಸುತ್ತದೆ. ಜಾತಿ, ಮತ, ಧರ್ಮ ಮತ್ತು ವ್ಯಕ್ತಿ ಪಾರಮ್ಯಗಳು ಈ ಎಲ್ಲ ಪ್ರಭೇದಗಳನ್ನೂ ಮೀರಿ ಮೇಲರಿಮೆ ಸಾಧಿಸುತ್ತದೆ. ಹಾಗಾಗಿಯೇ ಕುಟುಂಬ ಅಥವಾ ವಂಶ ರಾಜಕಾರಣವೇ ರೂಪಾಂತರ ಹೊಂದುವ ಮೂಲಕ ವ್ಯಕ್ತಿ ಕೇಂದ್ರಿತ ರಾಜಕಾರಣ ಪ್ರಧಾನವಾಗಿ ಕಂಡುಬರುತ್ತದೆ. ಬಹುಜನ ಸಮಾಜಪಕ್ಷ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಆಮ್‌ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರೀಯ ಸಮಿತಿ, ಬಿಜು ಜನತಾ ದಳ, ನೀತಿಶ್‌ ಕುಮಾರ್‌ ಅವರ ಸಂಯುಕ್ತ ಜನತಾದಳ ಇವೆಲ್ಲವೂ ಈ ಪ್ರಭೇದದ ನಿದರ್ಶನಗಳು. ಈ ಪಕ್ಷಗಳನ್ನು ಕುಟುಂಬಗಳು ನಿಯಂತ್ರಿಸುವುದಿಲ್ಲ ಆದರೆ ವ್ಯಕ್ತಿಗಳು ನಿಯಂತ್ರಿಸುತ್ತಾರೆ. ಎಲ್ಲ ಅಧಿಕಾರ ಸೂತ್ರಗಳೂ ಈ ವ್ಯಕ್ತಿಯ ಸುತ್ತಲೂ ನಿರ್ಮಿತವಾಗುತ್ತವೆ ಹಾಗಾಗಿ ಅಧಿಕಾರ ಕೇಂದ್ರಗಳೂ ಸಹ ಈ ಪರಿಧಿಯಲ್ಲೇ ನಿರ್ಣಯವಾಗುತ್ತವೆ. ಈ ಪರಿಧಿಯನ್ನು ಮೀರಿದ ಯಾವುದೇ ವ್ಯಕ್ತಿ ಬಹಿಷ್ಕೃತನಾಗುತ್ತಾನೆ. ಅಥವಾ ಭಿನ್ನಮತದ ಗುಂಪು ಪ್ರತ್ಯೇಕವಾಗುತ್ತದೆ. ಈ ಪಕ್ಷಗಳಲ್ಲಿ ತತ್ವ ಸಿದ್ಧಾಂತಗಳು ಕೇವಲ ಅಧಿಕಾರ ಗಳಿಕೆಯ ಮಾರ್ಗವಾಗಿ ಮಾತ್ರವೇ ಉಳಿಯುತ್ತವೆ.

ಇದೇ ರೂಪಾಂತರದ ಮತ್ತೊಂದು ಚಿತ್ರಣವನ್ನು ನೋಡುವುದಾದರೆ, ಶತಮಾನದ ಇತಿಹಾಸ ಇರುವ ಕಾಂಗ್ರೆಸ್‌, ದಶಕಗಳ ಇತಿಹಾಸ ಇರುವ ಶಿವಸೇನೆ, ಜಾತ್ಯತೀತ ಜನತಾದಳ (ಜೆಡಿಎಸ್), ಆರ್‌ಜೆಡಿ, ಡಿಎಂಕೆ, ವೈಎಸ್‌ಆರ್‌ ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಒಂದು ನಿರ್ದಿಷ್ಟ ಕುಟುಂಬವನ್ನೇ ಆಧರಿಸಿ ಸಂಸದೀಯ ಸ್ವರೂಪ ಪಡೆಯುತ್ತವೆ. ಬಿಜೆಪಿ ಈ ಎರಡೂ ಪ್ರಭೇದಗಳನ್ನು ಪ್ರಾದೇಶಿಕ ನೆಲೆಯಲ್ಲಿ ಬಿಂಬಿಸುತ್ತದೆ. ಕೆಲವೆಡೆ ವ್ಯಕ್ತಿಗಳು, ಕೆಲವೆಡೆ ಕುಟುಂಬಗಳು ಬಿಜೆಪಿಯ ರಾಜಕಾರಣವನ್ನು ನಿಯಂತ್ರಿಸುತ್ತದೆ. ವ್ಯತ್ಯಾಸವೆಂದರೆ ಬಿಜೆಪಿಯಲ್ಲಿನ ಹೈಕಮಾಂಡ್‌ ದ್ವಿಮುಖಿಯಾಗಿದೆ. ಒಂದೆಡೆ ಪಕ್ಷದ ನಾಯಕತ್ವ ಇದ್ದರೆ ಮತ್ತೊಂದೆಡೆ ಆರೆಸ್ಸೆಸ್‌ನ ನಿಯಂತ್ರಣದ ಸೂತ್ರಗಳೂ ಪಕ್ಷವನ್ನು ನಿಯಂತ್ರಿಸುತ್ತದೆ. ಹಾಗಾಗಿಯೇ ಬಿಜೆಪಿಯ ಹೈಕಮಾಂಡ್‌  ಕಾಂಗ್ರೆಸ್‌ಗಿಂತಲೂ ಭಿನ್ನವಾಗಿ ಕಾಣುತ್ತದೆ. ಹೈಕಮಾಂಡ್‌ ಸಂಸ್ಕೃತಿಯನ್ನು ಖಂಡಿಸುವ ಅಥವಾ ತಿರಸ್ಕರಿಸುವ ನೈತಿಕ ಹಕ್ಕನ್ನು ಎಲ್ಲ ರಾಜಕೀಯ ಪಕ್ಷಗಳು ಕಳೆದುಕೊಂಡಿರುವುದರಿಂದಲೇ ಇಂದು ಅಧಿಕಾರ ರಾಜಕಾರಣದ ಕೇಂದ್ರಗಳು ಪ್ರಾದೇಶಿಕ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತವೆ. ಎಡಪಕ್ಷಗಳಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಅವಕಾಶ ಇರುವುದಿಲ್ಲವಾದರೂ, ಪಕ್ಷ ನಿಷ್ಠೆಯೇ ನಿರ್ಣಾಯಕವಾಗುವುದರಿಂದ, ಭಿನ್ನ ನೆಲೆಗಳು, ಮುಕ್ತ ಚರ್ಚೆಯ ಅವಕಾಶಗಳೂ ಇಲ್ಲದೆ,  ಅಸ್ತಿತ್ವ ಕಳೆದುಕೊಳ್ಳುತ್ತಲೇ ಹೋಗುತ್ತವೆ.

ವರ್ತಮಾನದ ಭ್ರಷ್ಟ ರಾಜಕಾರಣ ಮತ್ತು ಪರಮಾಧಿಪತ್ಯ ರಾಜಕಾರಣದ ಹಿನ್ನೆಲೆಯಲ್ಲಿ ನಾವು, ನಮ್ಮ ಸುತ್ತಲಿನ ಸಾಮಾಜಿಕ ಚಟುವಟಿಕೆಗಳಲ್ಲಿ, ಆಂದೋಲನಗಳಲ್ಲಿ, ಹೋರಾಟದ ನೆಲೆಗಳಲ್ಲಿ ಮತ್ತು ಸಾಂಸ್ಕೃತಿಕ ಮುಖಾಮುಖಿಯಲ್ಲಿ ಎಷ್ಟರ ಮಟ್ಟಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ಯೋಚಿಸಬೇಕಿದೆ. ಎಲ್ಲ ರೀತಿಯ ಸಾಮಾಜಿಕ ಚಟುವಟಿಕೆಗಳು ಯಾವುದೋ ಒಂದು ಮಾರ್ಗದಲ್ಲಿ ಅಧಿಕಾರ ರಾಜಕಾರಣದ ಮೆಟ್ಟಿಲುಗಳ ಬಂದು ನಿಲ್ಲುವ ಒಂದು ವಿಕೃತ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. ಹಾಗಾಗಿಯೇ ಜಾತಿ ಸಂಘಟನೆಗಳೂ ಸಹ ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೇ ತಮ್ಮ ಕಾರ್ಯ ಯೋಜನೆಗಳನ್ನು ರೂಪಿಸುತ್ತವೆ, ತಮ್ಮ ಪ್ರತಿರೋಧದ ನೆಲೆಗಳನ್ನೂ ನಿಷ್ಕರ್ಷೆ ಮಾಡುತ್ತವೆ, ತಮ್ಮ ಪ್ರತಿಪಾದನೆಗಳನ್ನೂ ನಿಯಂತ್ರಿಸುತ್ತವೆ. ಹಾಗಾಗಿಯೇ ದುಡಿಯುವ ವರ್ಗಗಳ ಹಿತಾಸಕ್ತಿಯಾಗಲೀ, ಶ್ರಮಜೀವಿಗಳ ಅಸ್ತಿತ್ವವಾಗಲೀ, ದೌರ್ಜನ್ಯಕ್ಕೊಳಗಾದ ಮಹಿಳೆಯರ ಅಸ್ಮಿತೆಗಳಾಗಲೀ, ಅಸ್ಪೃಶ್ಯತೆಯ ಅಪಮಾನಕ್ಕೊಳಗಾದ ಸಮುದಾಯಗಳ ನೆಲೆಗಳಾಗಲೀ, ಎಲ್ಲವೂ ಯಾವುದೋ ಒಂದು ಉದ್ದೇಶಿತ ರಾಜಕೀಯ ನೆಲೆಯಲ್ಲೇ ಸಾಪೇಕ್ಷವಾಗಿ  ನಿಷ್ಕರ್ಷೆಗೊಳಗಾಗುತ್ತವೆ.

ಈ ನಿಷ್ಕರ್ಷೆಯ ಮಾರ್ಗಗಳಲ್ಲಿ ಸ್ವಾಯತ್ತ ಚಿಂತನೆಗೆ ಅವಕಾಶವನ್ನು ಕಲ್ಪಿಸದೆ ಹೋದರೆ ಯಾವ ಸಂಘಟನೆಯೂ ತನ್ನ ಗುರಿ ಈಡೇರಿಸುವಲ್ಲಿ ತಾರ್ಕಿಕ ಅಂತ್ಯ ತಲುಪುವುದಿಲ್ಲ. ಈ ವಾಸ್ತವವನ್ನು ನಮ್ಮ ನಡುವಿನ ದಲಿತರ, ಅಲ್ಪಸಂಖ್ಯಾತರ, ಕಾರ್ಮಿಕರ ಮತ್ತು ಎಡಪಕ್ಷಗಳ ಎಲ್ಲ ಹೋರಾಟಗಳಲ್ಲೂ ಗಮನಿಸಬಹುದು. ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಸಾಮಾಜಿಕ ನೆಲೆಗಳ ಹಿನ್ನೆಲೆಯಲ್ಲಿ ನೋಡಿದಾಗ, ಜನಸಮೂಹಗಳ ನಡುವೆ ಇರುವ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕರ್ತರ ಚಟುವಟಿಕೆಗಳಲ್ಲಿ ಸ್ವಾಯತ್ತ ಚಿಂತನೆಗೆ ಅವಕಾಶಗಳಿಲ್ಲದಿದ್ದರೆ ತಳಸಮುದಾಯಗಳನ್ನಾಗಲೀ, ತಳಮಟ್ಟದ ಜನತೆಯನ್ನಾಗಲೀ ತಲುಪಲು ಸಾಧ್ಯವಾಗುವುದೇ ಇಲ್ಲ. ಈ ಸ್ವಾಯತ್ತ ಚಿಂತನೆಗೆ ಅವಕಾಶವನ್ನೇ ನೀಡದಂತೆ ನಮ್ಮ ನಡುವಿನ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು ಅಧಿಕಾರ ಕೇಂದ್ರೀಕರಣದ ನೆಲೆಗಳನ್ನು ಪೋಷಿಸುತ್ತಲೇ ಬಂದಿವೆ. ಹಾಗಾಗಿಯೇ ತಳಮಟ್ಟದ ಜನತೆಯ ಆಶಯಗಳು ಮತ್ತು ಸಂಘಟನಾತ್ಮಕ ಧ್ಯೇಯಗಳ ನಡುವೆ ಸಮನ್ವಯ ಸಾಧಿಸುವುದು ಕಷ್ಟವಾಗುತ್ತದೆ.

ಸಹಜವಾಗಿಯೇ ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅಧಿಕಾರ ರಾಜಕಾರಣ ಕೆಂದ್ರಗಳು ಮೇಲುಗೈ ಸಾಧಿಸುತ್ತವೆ. ಸಾಮಾಜಿಕ ಚಳುವಳಿಗಳಲ್ಲಿ, ಸಮಾಜದ ತಳಸ್ತರದಲ್ಲಿ, ತಳಮಟ್ಟದ ಜನಸಮುದಾಯಗಳ ನಡುವೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಿತ್ತದೆಯೇ, ದೇಶದ ಅಧಿಕಾರ ರಾಜಕಾರಣವನ್ನು ವಂಶಾಡಳಿತ ಅಥವಾ ಕುಟುಂಬ ಕೇಂದ್ರಿತ ರಾಜಕಾರಣದಿಂದ ಮುಕ್ತಗೊಳಿಸಲು ಯೋಚಿಸುವುದು ಕೇವಲ ಅಲಂಕಾರಿಕವಾಗಿ ಕಾಣುತ್ತದೆ. ಪ್ರಜಾಸತ್ತೆಯ ಬೀಜಗಳು ಪ್ರತಿಯೊಬ್ಬ ವ್ಯಕ್ತಿಯ ಮನಸಿನಲ್ಲಿರುವಂತೆಯೇ ಪ್ರತಿಯೊಂದು ಮನೆಯಲ್ಲೂ ಇದ್ದಾಗ ಮಾತ್ರವೇ, ಪ್ರಜಾಪ್ರಭುತ್ವ ಯಶಸ್ಸು ಕಾಣಲು ಸಾಧ್ಯ. ಈ ಸುಡುವಾಸ್ತವದ ಬಗ್ಗೆ ನಾವು ಗಂಭೀರ ಆಲೋಚನೆ ಮಾಡಲು ಇದು ಸಕಾಲ.

RS 500
RS 1500

SCAN HERE

don't miss it !

ನೆರೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ : ಎಂ.ಬಿ.ಪಾಟೀಲ್
ಕರ್ನಾಟಕ

ನೆರೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ : ಎಂ.ಬಿ.ಪಾಟೀಲ್

by ಪ್ರತಿಧ್ವನಿ
August 7, 2022
KMF ಮದರ್‌ ಡೈರಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ Amith Shah
ಇದೀಗ

KMF ಮದರ್‌ ಡೈರಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ Amith Shah

by ಪ್ರತಿಧ್ವನಿ
August 4, 2022
ಸಿದ್ದರಾಮೋತ್ಸವದಿಂದ ಬೆದರಿದ ಬಿಜೆಪಿ : ಅಮಿತ್ ಶಾ ದಿಢೀರ್ ಭೇಟಿಗೆ ಕಾರಣವೇನು?
ದೇಶ

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಕೇಸ್‌ ಪತ್ತೆ!

by ಪ್ರತಿಧ್ವನಿ
August 2, 2022
ಮನೆಮನೆಯಲಿ ಧ್ವಜ ಹಾರಿಸಿ, ಮನಮನದಲಿ ಸಂವಿಧಾನವನ್ನೂ ಸ್ಥಾಪಿಸಿ!
ದೇಶ

ಮನೆಮನೆಯಲಿ ಧ್ವಜ ಹಾರಿಸಿ, ಮನಮನದಲಿ ಸಂವಿಧಾನವನ್ನೂ ಸ್ಥಾಪಿಸಿ!

by ನಾ ದಿವಾಕರ
August 3, 2022
ಕಾಮನ್‌ ವೆಲ್ತ್:‌ ಕಂಚು ಗೆದ್ದು ವೇಟ್‌ ಲಿಫ್ಟಿಂಗ್‌ ನಲ್ಲಿ 9ನೇ ಪದಕ ತಂದ ಲವ್‌ ಪ್ರೀತ್‌!
ಕ್ರೀಡೆ

ಕಾಮನ್‌ ವೆಲ್ತ್:‌ ಕಂಚು ಗೆದ್ದು ವೇಟ್‌ ಲಿಫ್ಟಿಂಗ್‌ ನಲ್ಲಿ 9ನೇ ಪದಕ ತಂದ ಲವ್‌ ಪ್ರೀತ್‌!

by ಪ್ರತಿಧ್ವನಿ
August 3, 2022
Next Post
ಸದಾ ಭೀತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳು ಮತ್ತು ಭಾರತದ ಆರ್ಥಿಕತೆಯಲ್ಲಿ ಅವರ ಪಾತ್ರ- ಭಾಗ 2

ಸದಾ ಭೀತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳು ಮತ್ತು ಭಾರತದ ಆರ್ಥಿಕತೆಯಲ್ಲಿ ಅವರ ಪಾತ್ರ- ಭಾಗ 2

KPTCL ನಲ್ಲಿ ಶುರುವಾಗಿದೆ ಶೀಥಲ ಸಮರ : ಅಮಾನತುಗೊಂಡ ಸಿಬ್ಬಂದಿಗಳಿಂದ ಮೇಲಾಧಿಕಾರಿ ವಿರುದ್ಧ ತಗಾದೆ

KPTCL ನಲ್ಲಿ ಶುರುವಾಗಿದೆ ಶೀಥಲ ಸಮರ : ಅಮಾನತುಗೊಂಡ ಸಿಬ್ಬಂದಿಗಳಿಂದ ಮೇಲಾಧಿಕಾರಿ ವಿರುದ್ಧ ತಗಾದೆ

ರಾಜ್ಯ ಸರ್ಕಾರದಿಂದ ಬಿಬಿಎಂಪಿ ಡಿ ಲಿಮಿಟೇಷನ್ ಗೆ ಅನುಮೋದನೆ

ರಾಜ್ಯ ಸರ್ಕಾರದಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ: ಇಲ್ಲಿದೆ ಪಟ್ಟಿ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist