ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಬದಲಾವಣೆ ಹೇಳಿಕೆಗೆ ಸ್ವಾಮೀಜಿ ಒಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ನೀಡಿದ್ದ ಹೇಳಿಕೆಗೆ ಮುರುಘಾ ಶ್ರೀ ವಿರೋಧ ವ್ಯಕ್ತಪಡಿಸಿದ್ದಾರೆ. ಧಾರವಾಡದ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸ್ಪಷ್ಟನೆ ನೀಡಿದ್ದು, ನಮಗೆ ಸ್ವಾಮೀಜಿಗಳ ಸಭೆ ಎಂದು ದಿಂಗಾಲೇಶ್ವರ ಶ್ರೀಗಳು ಕರೆದಿದ್ದಿದರು. ಆದ್ರೆ ಅಲ್ಲಿ ಲೋಕಸಭೆ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಯಿತು. ಇದಕ್ಕೆ ನಮ್ಮ ಸಮ್ಮತಿ ಇಲ್ಲ, ಆ ಹೇಳಿಕೆಗೂ ನಮ್ಮ ಮುರುಘಾ ಮಠಕ್ಕೂ ಸಂಬಂಧವಿಲ್ಲ, ಒಮ್ಮತವಿಲ್ಲ ಎಂದಿದ್ದಾರೆ.

ಶ್ರೀ ಮುರುಘಾ ಮಠ ಸರ್ವ ಸಮಾಜದ ಭಕ್ತರನ್ನ ಒಳಗೊಂಡಿದೆ. ಯಾವುದೇ ರಾಜಕೀಯ ಪಕ್ಷಕ್ಕೆ ಮುರುಘಾಮಠ ಸೀಮಿತವಾಗಿಲ್ಲ ಎಂದಿರುವ ಶ್ರೀಗಳು, ರಾಜಕೀಯ ವಿಷಯಗಳಿಗೆ ಭಾಗವಹಿಸುವುದಿಲ್ಲ. ಯಾವುದೇ ಅಭ್ಯರ್ಥಿ ಆಯ್ಕೆ ಮಾಡುವುದು ಆಯಾ ಪಕ್ಷದ ತೀರ್ಮಾನ ಆಗಿದೆ. ಪ್ರಹ್ಲಾದ್ ಜೋಶಿಯವರ ಬದಲಾವಣೆ ಕುರಿತು ಹೇಳಿಕೆ ನೀಡಿರುವುದು, ಅದು ಅವರ ವೈಯಕ್ತಿಕ ಹೇಳಿಕೆ. ಹಾಗೂ ಹೇಳಿಕೆ ವಿವಾದಾಸ್ಪದವಾಗಿದ್ದು, ಆ ಹೇಳಿಕೆಗೂ ನಮ್ಮ ಮಠಕ್ಕೂ ಸಂಬಂಧವಿಲ್ಲ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಈ ನಿರ್ಧಾರ ಹೊರಬಿದ್ದಿದೆ ಎನ್ನಲಾಗ್ತಿದೆ.

ಇನ್ನು ನಾನು ಮೂರು ವರ್ಷದ ಹಿಂದೆ ಪ್ರಹ್ಲಾದ್ ಜೋಶಿ ಅವರಿಗೆ ಕರೆ ಮಾಡಿದ ಬಹಳ ನೊಂದಿದ್ದೇನೆ ಎಂದು ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಮಾಡಿದ್ದರು. ನಾನು ಕರೆ ಮಾಡಿದಾಗ ನಿಮಗೆ ಯಾವ ಲಿಂಗಾಯತ ನಾಯಕರಿಲ್ವಾ..? ಎಂದಿದ್ರು ಅವತ್ತಿನಿಂದ ಇಂದಿನವರೆಗೂ ಯಾವುದೇ ಕರೆ ಮಾಡಲಿಲ್ಲ. ಅವರಿಂದ ಸಂಪರ್ಕ ಕಡಿತ ಮಾಡಿಕೊಂಡಿದ್ದೇವೆ. ಪ್ರಹ್ಲಾದ್ ಜೋಶಿ ಅವರ ಸಹೋದರ ಗೋವಿಂದ ಜೋಶಿ ಕೂಡ ದಿಂಗಾಲೇಶ್ವರ ಸ್ವಾಮೀಜಿಯಂತಹ ನೂರು ಜನರು ನಮ್ಮ ಮನೆಗೆ ಬರ್ತಾರೆ ಅಂತ ಹೇಳೀಕೆ ನೀಡಿದ್ದೂ ಕೂಡ ನೋವು ತರಿಸಿದೆ ಎಂದಿದ್ದರು. ಪ್ರಹ್ಲಾದ್ ಜೋಶಿ ಒಮ್ಮೆ ರಾಜಿ ಸಂಧಾನಕ್ಕೆ ಬಂದಿದ್ರು. ಚುನಾವಣೆ ಬಂದಾಗ ಮಾತ್ರ ಯಾಕೆ ಲಿಂಗಾಯತ ಜನರ ಮೇಲೆ ಪ್ರೀತಿ ಎಂದು ಪ್ರಶ್ನಿಸಿದ್ದರು. ಇನ್ನು ಮಾರ್ಚ್ 31 ರ ಒಳಗೆ ಟಿಕೆಟ್ ಬದಲಾವಣೆ ಮಾಡ್ಬೇಕು, ಇಲ್ಲದಿದ್ದರೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ಎಚ್ಚರಿಕೆಯನ್ನೂ ನೀಡಿದ್ದರು.
ಧಾರವಾಡದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಕೂಡ ದಿಂಗಾಲೇಶ್ವರ ಶ್ರೀಗಳ ಬೆಂಬಲಕ್ಕೆ ನಿಂತಿತ್ತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಮೂಹ ಇದೆ. ಜಿಲ್ಲೆಯಲ್ಲಿ 6 ಲಕ್ಷ ಜನಸಂಖ್ಯೆ ಇದೆ, 25 ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡಿದರೂ ಏನು ಅಭಿವೃದ್ಧಿ ಆಗಿಲ್ಲ. ಲೋಕಸಭಾ ಚುನಾವಣೆಗೆ ಸುಮಾರು ವರ್ಷಗಳಿಂದ ಯಾವುದೇ ಲಿಂಗಾಯತ ವ್ಯಕ್ತಿ ಗುರುತಿಸಿಲ್ಲ. ನಾವು ನಮ್ಮ ಲಿಂಗಾಯತ ಸಮುದಾಯದ ವ್ಯಕ್ತಿಗೆ ಕೊಡಿ ಎಂದು ಬೇಡಿಕೆ ಇಟ್ಟಿದ್ದರು. ಆ ಬಳಿಕ ಸ್ವಾಮೀಜಿ ವಿಚಾರದಲ್ಲಿ ತಮ್ಮಿಂದ ತಪ್ಪಾಗಿದ್ದರೆ ಕ್ಷಮೆ ಕೇಳಲು ಸಿದ್ಧ ಎಂದಿದ್ದರು. ಇದೀಗ ಲಿಂಗಾಯತ ಸ್ವಾಮೀಜಿಗಳ ಒಗ್ಗಟ್ಟು ಮುರಿದು ಹೋಗಿದೆ. ರಾಜಕೀಯ ನಡೆದಿದೆ ಎನ್ನಬಹುದು.
