ಕಾಂಗ್ರೆಸ್ ಗ್ಯಾರಂಟಿಗಳ (congress gurantee) ಚಾಲನೆಗೆ ಆಯಾಯ ಇಲಾಖೆಗಳು ಕೆಲಸ ಮಾಡುತ್ತಿವೆ. ಸಣ್ಣ ಪ್ರಮಾಣದ ನಿಬಂಧನೆಗಳನ್ನು ಹಾಕಿಕೊಂಡು ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗುವಂತೆ ಸಿದ್ದರಾಮಯ್ಯ (cmsiddaramaiah) ಸೂತ್ರ ಹೆಣೆದಿದ್ದರು. ಸಮಾಜದ ಬಹುತೇಕ ವರ್ಗಗಳನ್ನು ತಲುಪುವ ಉದ್ದೇಶದಿಂದ ಎಲ್ಲರಿಗೂ ಯೋಜನೆ ಸಿಗುವಂತೆ ಮಾಡಿದ್ದರು. ಆದರೆ ಇಂಧನ ಇಲಾಖೆಯ ಅಧಿಕಾರಿಗಳು ಜೊತೆಗೆ ಇಂಧನ ಸಚಿವ ಕೆ.ಜೆ ಜಾರ್ಜ್ (kj george) ಸಭೆ ನಡೆಸಿದ ಸಮಯದಲ್ಲಿ ಸಚಿವರನ್ನೇ ದಿಕ್ಕು ತಪ್ಪಿಸಲಾಗಿದೆ. ಮುಖ್ಯಮಂತ್ರಿ ಕೊಟ್ಟಿದ್ದ ಹೇಳಿಕೆಯನ್ನೇ ಅಲ್ಲಗಳೆದು ಬೇರೊಂದು ಹೇಳಿಕೆ ನೀಡಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವೇ ಆಗಿದೆ. ಹಾಗಿದ್ದರೆ ಈ ರೀತಿ ಮಾಡಿದ ಅಧಿಕಾರಿ ಯಾರು..?
ಸಿಎಂ ಸಿದ್ದರಾಮಯ್ಯ ಮಾತನ್ನೇ ಧಿಕ್ಕರಿಸಿದ್ದು ಯಾಕೆ..?
ಜೂನ್ 2 ರಂದು ಸಚಿವ ಸಂಪುಟ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ, RR ನಂಬರ್ ಆಧಾರದಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡ್ತೇವೆ. ಬೆಂಗಳೂರಿನಲ್ಲಿ ಬಾಡಿಗೆದಾರ, ಮಾಲೀಕ ಅನ್ನೋ ತಾರತಮ್ಯ ಮಾಡಲ್ಲ, ಒಂದು ಮೀಟರ್ನಲ್ಲಿ 200 ಯೂನಿಟ್ ಉಚಿತ. ಇದು ಗೃಹಪಯೋಗಿ ಬಳಕೆಗೆ ಮಾತ್ರ ಅನ್ವಯ ಆಗಲಿದ್ದು, ಉದ್ಯಮ ನಡೆಸುವುದಕ್ಕೆ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ರು. ಆದರೆ ಇಂಧನ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದ ಇಂಧನ ಸಚಿವ ಕೆ.ಜೆ ಜಾರ್ಜ್, ಬಾಡಿಗೆದಾರ, ಮಾಲೀಕ ಎಂದು ನೋಡಿಕೊಂಡು ಉಚಿತ ವಿದ್ಯುತ್ ಕೊಡಲ್ಲ, ಒಂದು ಮನೆ, ಒಬ್ಬ ವ್ಯಕ್ತಿ, ಒಂದು ಮೀಟರ್ಗೆ ಮಾತ್ರ ಉಚಿತ ಅನ್ವಯ ಆಗಲಿದೆ. ಒಬ್ಬನೇ ವ್ಯಕ್ತಿ ಹೆಸರಲ್ಲಿ ಎರಡ್ಮೂರು ಮೀಟರ್ ಇದ್ದರೆ ಒಂದಕ್ಕೆ ಮಾತ್ರ ಅನ್ವಯ ಎಂದಿದ್ದರು.
ಬಾಡಿಗೆದಾರನಿಗೆ ವಿದ್ಯುತ್ ಫ್ರೀ ಇಲ್ಲ ಅನ್ನೋ ವರದಿ ಬಳಿಕ ಸ್ಪಷ್ಟನೆ
ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಮಾತನ್ನು ವಿಸ್ತರಿಸಿದ ಮಾಧ್ಯಮಗಳು, ಬಾಡಿಗೆ ಮನೆಯ ಮೀಟರ್ಗೆ 200 ಯೂನಿಟ್ ವಿದ್ಯುತ್ ಫ್ರೀ ಇಲ್ಲ ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ ಎನ್ನುವ ವರದಿಗಳು ಬರುತ್ತಿದ್ದಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಯಾರು ಯಾರು ಬಡವರು 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೋ ಅವರಿಗೆಲ್ಲಾ ಫ್ರೀ ಸಿಗುತ್ತೆ. ಬಾಡಿಗೆ ಮನೆಯಲ್ಲಿ ಇರುವ ಜನರಿಗೂ ಈ ಯೋಜನೆಯ ಲಾಭ ಸಿಗಲಿದೆ ಎಂದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ನಾನು ಏನು ಮಾತು ಕೊಟ್ಟಿದ್ದೇವೋ ಅದರಂತೆ ನಡೆದುಕೊಳ್ತೇವೆ. ಯಾವುದೇ ಗೊಂದಲ ಇಲ್ಲ. ಅಧಿಕಾರಿಗಳು ನೂರೆಂಟು ರೀತಿಯಲ್ಲಿ ಮಾಹಿತಿ ಕೊಡ್ತಾರೆ. ಅದಕ್ಕೆಲ್ಲಾ ಆಕ್ರೋಶ ಆತಂಕ ಬೇಡ. ಎಲ್ಲಾ ಗೊಂದಲ ನಿರ್ವಹಣೆ ಮಾಡ್ತೇವೆ ಎಂದಿದ್ದಾರೆ.
ಇಂಧನ ಸಚಿವರಿಗೆ ಆಯ್ತುಅವಮಾನ.. ಮುಂದೇನು..?
ಇಂಧನ ಸಚಿವ ಕೆ.ಜೆ ಜಾರ್ಜ್ ನಿನ್ನೆ ಸಂಜೆ ಮಾಧ್ಯಮಗಳ ಜೊತೆಗೆ ಮಾತನಾಡುವಾಗಲೇ ಪತ್ರಕರ್ತರು ಬಾಡಿಗೆದಾರರಿಗೆ 200 ಯೂನಿಟ್ ಉಚಿತ ಸಿಗಲ್ವಾ..? ಎಂದು ಪ್ರಶ್ನೆ ಮಾಡಿದ್ದರು. ಆದರೆ ಒಂದು ಮನೆಯಲ್ಲಿ ಒಂದು ಮೀಟರ್ಗೆ ಮಾತ್ರ ಎಂದು ಅಧಿಕಾರಿಗಳು ಹೇಳಿದ್ದನ್ನೇ ಮಾಧ್ಯಮಗಳ ಎದುರು ಹೇಳಿದ್ದರು. ಆ ಬಳಿಕ ಕೆಲವೇ ಗಂಟೆಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಉಲ್ಟಾ ಹೇಳಿಕೆ ಕೊಟ್ಟಿದ್ದಾರೆ. ಬಾಡಿಗೆದಾರರಿಗೂ ಅನ್ವಯ ಎಂದು ಸ್ಪಷ್ಟನೆ ನೀಡಿದ್ದಾರೆ. ಅಂದರೆ ಇಂಧನ ಇಲಾಖೆ ಅಧಿಕಾರಿಗಳು ಸಚಿವರ ಹಾದಿ ತಪ್ಪಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಸಚಿವರ ಜೊತೆಗೆ ಇರುವ ಆಪ್ತ ಸಹಾಯಕರೂ ಕೂಡ ಸಚಿವರ ಬೆಂಬಲಕ್ಕೆ ಬಂದಿದ್ದ. ಒಂದು ಬಾರಿ ಸಿಎಂ ಸ್ಥಾನದಲ್ಲಿ ಇದ್ದವರು ಹೇಳಿದ ಬಳಿಕ ಸಿಎಂ ಹೇಳಿಕೆಯನ್ನು ಸಚಿವರು ಬದಲಾಯಿಸುವುದು ಕಷ್ಟ. ಆದರೂ ಸ್ಪಷ್ಟನೆ ರೂಪದಲ್ಲಿ ಸಚಿವರು ಹೇಳಿದ್ದು, ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಆದವರಿಗೆ ತಕ್ಕ ಶಾಸ್ತಿ ಆಗಬೇಕಿದೆ ಅಲ್ಲವೇ..?
ಕೃಷ್ಣಮಣಿ