ರಾಜ್ಯದಲ್ಲಿ 600, ಉ.ಪ್ರ.ದಲ್ಲಿ1621 ಶಿಕ್ಷಕರ ಸಾವು: ಶಿಕ್ಷಕರಿಗೆ ಮಾರಕವಾದ ಉಪ ಚುನಾವಣೆ ಕಾರ್ಯ

ಕಳೆದ ವರ್ಷದ ಮಾರ್ಚ್ ನಲ್ಲಿ ಕೋವಿಡ್ 19 ನ ಸಾಂಕ್ರಾಮಿಕ ಅಟ್ಟಹಾಸ ಶುರುವಾದಾಗಿನಿಂದ ವಿದ್ಯಾರ್ಥಿಗಳು ಮತ್ತೆ ಶಾಲೆಯ ಮುಖವನ್ನು ನೋಡಿಲ್ಲ. ದುರಂತವೆಂದರೆ, ಮತ್ತೆ ಶಾಲೆ ಶುರುವಾದರೂ ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ಶಿಕ್ಷಕರ ಮುಖವನ್ನು ಮತ್ತೊಮ್ಮೆ ನೋಡುವ ಭಾಗ್ಯ ಬರಲಾರದು. ಏಕೆಂದರೆ ದೇಶದ ಸಾವಿರಾರು ಶಿಕ್ಷಕರನ್ನು ಕೊರೋನಾ ಈಗಾಗಲೇ ಬಲಿ ಪಡೆದುಕೊಂಡಿದೆ!

ಸಾಂದರ್ಭಿಕ ಚಿತ್ರ

ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಪಂಚಾಯತಿ ಚುನಾವಣೆಗಳಲ್ಲಿ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದ್ದ ಸಾವಿರಾರು ಶಿಕ್ಷಕರ ಪೈಕಿ 1621 ಕ್ಕೂ ಅಧಿಕ ಶಿಕ್ಷಕರ ಪ್ರಾಣವನ್ನು ಕೋವಿಡ್ ಮಹಾಮಾರಿ ಹರಣ ಮಾಡಿದೆ. ಅಷ್ಟೇಕೆ, ಕೋವಿಡ್  ತನ್ನ ಪ್ರತಾಪ ಆರಂಭಿಸಿದ್ದ 2020ರ ಮಾರ್ಚ್ ನಿಂದ ಈವರೆಗೆ ಕರ್ನಾಟಕದಲ್ಲಿ 600 ಕ್ಕೂ ಅಧಿಕ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮೃತ ಪಟ್ಟಿದ್ದಾರೆ. ಅವರ ಜೀವವನ್ನು ಕೊರೋನಾವೇ ಆಪೋಷಣ ತೆಗೆದುಕೊಂಡಿದೆ.

ಕರ್ನಾಟಕ, ಉತ್ತರ ಪ್ರದೇಶ, ಇನ್ನುಳಿದ ರಾಜ್ಯಗಳನ್ನೂ ಸೇರಿಸಿದರೆ ಕೋವಿಡ್ ನಿಂದ ಸಾವಿಗೀಡಾದ ಶಿಕ್ಷಕರ ಸಂಖ್ಯೆಯು  ಬಹಳ ದೊಡ್ಡದಾಗುವುದರಲ್ಲಿ ಅನುಮಾನವಿಲ್ಲ.

ರಾಜ್ಯದಲ್ಲಿ ಸುಮಾರು 268 ಕ್ಕೂ ಅಧಿಕ ಸರಕಾರಿ ಶಿಕ್ಷಕರು ಇನ್ನಿಲ್ಲ:

ಸಾರ್ವಜನಿಕ ಸೂಚನೆಗಳ ಇಲಾಖೆಯ ಮಾಹಿತಿಯನ್ನು ಪರಿಗಣಿಸುವುದಾದರೆ ಮಾರ್ಚ್ 2020ರಿಂದ ಮೇ 13, 2021ರವರೆಗೆ ಕೊರೋನಾಗೆ ಬಲಿಯಾದ ಶಿಕ್ಷಕರ ಸಂಖ್ಯೆ 268. ಇದರಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರ 183 ಹಾಗೂ ಪ್ರೌಢಶಾಲಾ ಶಿಕ್ಷಕರು 49. ಅದೇ ವೇಳೆ ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಸಂಖ್ಯೆ ಕ್ರಮವಾಗಿ 13 ಮತ್ತು 19.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ (ಕೆ.ಎಸ್.ಜಿ.ಇ.ಎ) ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 300 ಕ್ಕೂ ಅಧಿಕ ಸರಕಾರು ನೌಕರರು ಕೋವಿಡ್ ನಿಂದ ಮೃತಪಟ್ಟಿದ್ದು, ಅವರಲ್ಲಿ 250 ಕ್ಕೂ ಅಧಿಕ ಮಂದಿ ಸರಕಾರಿ ಪ್ರಾಥಮಿಕ  ಹಾಗೂ ಪ್ರೌಢ ಶಾಲೆಗಳ ಶಿಕ್ಷಕರಾಗಿದ್ದಾರೆ. ಅದರಲ್ಲೂ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಕೊರೋನಾ ವೈರಸ್ ಶಿಕ್ಷಕರ ಮೇಲೆ ಅತಿ ಹೆಚ್ಚು ಮುನಿಸು ತೋರಿದ್ದು, ಈ ಎರಡು ವಿಭಾಗಗಳಲ್ಲೇ 150 ಕ್ಕೂ ಹೆಚ್ಚು ಶಿಕ್ಷಕರು ಮೃತರಾಗಿದ್ದಾರೆ.

ಕರ್ನಾಟಕದ ಸರಕಾರಿ, ಖಾಸಗಿ ಸೇರಿದರೆ 600 ಕ್ಕೂ ಅಧಿಕ ಶಿಕ್ಷಕರು ಬಲಿ:

ರಾಜ್ಯದಲ್ಲಿ 1.70 ಲಕ್ಷ ಸರಕಾರಿ ಶಿಕ್ಷಕರಿದ್ದು, ಅವರ ಪೈಕಿ 262 ಶಿಕ್ಷಕರು ಕೊರೋನಾದಿಂದ ಮೃತಪಟ್ಟಿದ್ದಾರೆ, ಅವರಿಗೆ ತಲಾ 1 ಕೋಟಿ ರೂ. ಪರಿಹಾರ ಕೊಡುವಂತೆ ರಾಜ್ಯ ಸರಕಾರಿ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಆಗ್ರಹಿಸಿದ್ದಾರೆ. ಖಾಸಗಿ ಶಾಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಶಿಕ್ಷಕರಿದ್ದು, 422 ಕ್ಕೂ ಹೆಚ್ಚು ಅಧ‍್ಯಾಪಕರು ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ, ಮೃತರ ಕುಟುಂಬಳಿಗೆ ಪರಿಹಾರ ಕೊಡಿ ಎಂದು ಖಾಸಗಿ ಶಾಲಾ ಒಕ್ಕೂಟ ರುಪ್ಸಾದ ಅಧ‍್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಸರಕಾರಿ ಶಿಕ್ಷಕರನ್ನೇ ಪರಿಗಣಿಸುವುದಾದರೆ ಬೆಂಗಳೂರಿನಲ್ಲಿ 81, ಕಲಬುರಗಿಯಲ್ಲಿ 70, ವಿಜಯಪುರ 56, ಬೆಳಗಾವಿಯಲ್ಲಿ 52, ಬೀದರ್ 50, ಮೈಸೂರಿನಲ್ಲಿ 46 ಶಿಕ್ಷಕರು ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಅನುದಾನಿತ ಶಾಲೆಗಳನ್ನು ಪರಿಗಣಿಸುವುದಾದರೆ, ಕಲಬುರಗಿಯಲ್ಲಿ 25, ಬೆಳಗಾವಿ 6, ಬೆಂಗಳೂರು 5, ಮೈಸೂರಿನಲ್ಲಿ 3 ಮಂದಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ನಿಂದ ಈವರೆಗೆ 15 ಪ್ರಾಥಮಿಕ  ಹಾಗೂ ಪ್ರೌಢ ಶಿಕ್ಷಕರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಸರಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರ ಸಂಘಗಳು ನೀಡಿರುವ ಮಾಹಿತಿಯನ್ನು ಪರಿಗಣಿಸಿದರೆ, ಕರ್ನಾಟಕದಲ್ಲಿ ಕೊರೋನಾ ಆರಂಭವಾದಾಗಿನಿಂದ ಈವರೆಗೆ 600 ಕ್ಕೂ ಅಧಿಕ ಶಿಕ್ಷಕರು ಮಹಾಮಾರಿಗೆ ಬಲಿಯಾಗಿದ್ದಾರೆ!

ರಾಜ್ಯದ ಶಿಕ್ಷಕರಿಗೆ ಮಾರಕವಾದ ಉಪಚುನಾವಣೆ:

ಕರೋನಾ ಎರಡನೆಯ ಅಲೆಯ ಸಂದರ್ಭದಲ್ಲಿ ಉಪಚುನಾವಣೆ ನಡೆದ ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ ಶಿಕ್ಷಕರ ಮೇಲೆ ಕೊರೋನಾ ಕರಿನೆರಳು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಕೊರೋನಾದಿಂದ ಮೃತರಾದ 55 ಕ್ಕೂ ಹೆಚ್ಚು ಶಿಕ್ಷಕರು ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎನ್ನುವುದು ಆತಂಕಕಾರಿ. ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಮೇ 1ರಿಂದ 16 ರವರೆಗೆ 15 ಶಿಕ್ಷಕರು ಕೋವಿಡ್ ನಿಂದ ಮೃತರಾಗಿದ್ದಾರೆ. ಬೆಳಗಾವಿ ಲೋಕಸಭೆ  ಉಪಚುನಾವಣೆಯ ಕಾರ್ಯದಲ್ಲಿ ಪಾಲ್ಗೊಂಡಿದ್ದ 2 ಸಾವಿರಕ್ಕೂ ಅಧಿಕ ಶಿಕ್ಷಕರ ಪೈಕಿ 17 ಮಂದಿ ಕೋವಿಡ್ ನಿಂದ ಕಣ್ಮುಚ್ಚಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಳಗಾವಿ ಮತ್ತು ಚಿಕ್ಕೋಡಿಗಳಲ್ಲಿ 2 ನೇ ಅಲೆಗೆ 49 ಶಿಕ್ಷಕರು ಸಾವನ್ನಪ್ಪಿರುವುದನ್ನು ಬೆಳಗಾವಿ ಡಿಡಿಪಿಐ ಎ.ಬಿ.ಪುಂಡಲೀಕ ಅವರು ಖಾತ್ರಿಪಡಿಸಿದ್ದಾರೆ. ಇನ್ನೊಂದೆಡೆ ಎರಡನೇ ಅಲೆಯಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಅಧಿಕ ಸಂಖ್ಯೆಯ ಶಿಕ್ಷಕರು ಕೊರೋನಾಗೆ ಬಲಿಯಾಗುತ್ತಿರುವುದು ಕೂಡ ಕಳವಳಕಾರಿಯಾಗಿದೆ.

50 ಕ್ಕೂ ಅಧಿಕ ಕಾಲೇಜು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮೃತ:

ಸರಕಾರಿ ಕಾಲೇಜುಗಳನ್ನು ಮಾತ್ರ ಪರಿಗಣಿಸುವುದಾದರೆ, ಈವರೆಗೆ 50 ಕ್ಕೂ ಅಧಿಕ ಕಾಲೇಜು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಕೊರೋನಾಗೆ ಬಲಿಯಾಗಿರುವುದಾಗಿ ಕರ್ನಾಟಕ ಸರಕಾರಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಟಿಎಂ ತಿಳಿಸಿದ್ದರೂ, ತನ್ನ ಬಳಿ ಈ ಬಗ್ಗೆ ಮಾಹಿತಿ ಇಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ ಖಾಸಗಿ ಕಾಲೇಜುಗಳಲ್ಲಿನ ಮಾಹಿತಿ ಇನ್ನೂ ಸಿಕ್ಕಿಲ್ಲ.

ಉತ್ತರ ಪ್ರದೇಶದ ಶಿಕ್ಷಕರಿಗೆ ಶಾಪವಾದ ಪಂಚಾಯತ್ ಚುನಾವಣೆ:

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದ್ದ ಶಿಕ್ಷಕರು ಕೋವಿಡ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರ ಪೈಕಿ ಮೇ 16 ರವರೆಗೆ 1621 ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪ್ರಾಥಮಿಕ ಶಿಕ್ಷಕರ ಸಂಘದವರು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮೃತರ ಪಟ್ಟಿ ಸಹಿತ ಮಾಹಿತಿ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಮಾತ್ರವಲ್ಲ, ಕೋವಿಡ್ ಗೆ ಬಲಿಯಾದವರ ಶಿಕ್ಷಕರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಕೊಡಬೇಕು ಮತ್ತು ಅವರನ್ನು ಅವಲಂಬಿಸಿದವರಿಗೆ ಸರಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಏಪ್ರಿಲ್ 28 ವರೆಗೆ ಇದೇ ಸಂಘದವರು ಬಿಡುಗಡೆ ಮಾಡಿದ್ದ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕರು ಹಾಗೂ ಸಹಾಯಕ ಸಿಬ್ಬಂದಿಗಳ ಪಟ್ಟಿಯಲ್ಲಿ 706 ಜನರ ಹೆಸರುಗಳಿದ್ದವು. ಅದಾಗಿ ಇನ್ನೂ 20 ದಿನಗಳಾಗಿಲ್ಲ. ಆದರೆ ಅಷ್ಟರಲ್ಲೇ ಪಟ್ಟಿಯಲ್ಲಿ ಮೃತರ ಸಂಖ್ಯೆಯು ದ್ವಿಗುಣಗೊಂಡಿದೆ. ಅಜಂಗಢ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರು (68) ಪ್ರಾಣ ಕಳೆದುಕೊಂಡಿದ್ದು, ಆ ನಂತರದ ಸ್ಥಾನ (50) ಮುಖ್ಯಮಂತ್ರಿಯವರ ತವರು ಜಿಲ್ಲೆ ಗೋರಖ್ ಪುರದ್ದಾಗಿದೆ.

ಭವಿಷ್ಯ ರೂಪಿಸುವ ಶಿಕ್ಷಕರ ದುರಂತ ಸಾವಿನಿಂದ ಮಕ್ಕಳ ಮೇಲೂ ಪರಿಣಾಮ:

ಬೇರೆ ಯಾವುದೇ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿಯು ಬಹಳ ಭಿನ್ನ. ಮಕ್ಕಳು ಮತ್ತು ಶಿಕ್ಷಕರ ನಡುವಿನ ಭಾವನಾತ್ಮಕ ನಂಟು, ಮಕ್ಕಳು ಮತ್ತು ಪೋಷಕರ ನಡುವಿನಷ್ಟೇ ಬಿಗಿಯಾಗಿಲ್ಲದಿದ್ದರೂ, ಅದನ್ನು ತೀರಾ ನಿರ್ಲಕ್ಷಿಸಲಾಗದು. ಶಾಲೆಯಲ್ಲಿ ಇಡಿ ದಿನವನ್ನು ಕಳೆಯುವ ಮಕ್ಕಳು, ಶಿಕ್ಷಕರ ಜತೆಗೆ ಒಂದು ಭಾವನಾತ್ಮಕ ನಂಟು ಹೊಂದಿರುವುದು ಸತ್ಯ. ಶಿಕ್ಷಕರು ಹೀಗೆ ದುರಂತ ಸಾವಿಗೆ ತುತ್ತಾದ ಸುದ್ದಿ, ಮಕ್ಕಳ ಕಿವಿಗೆ ಬಿದ್ದಾಗ ಅವರಿಗೆ ಆಘಾತವಾಗುವ ಸಾಧ್ಯತೆ ಇರುತ್ತದೆ. ಆಪ್ತರಾಗಿರುವ ಶಿಕ್ಷಕರ ಅಗಲುವಿಕೆ ಮಕ್ಕಳ ಮೇಲೂ ಪರಿಣಾಮ ಬೀರಬಹುದಾದ್ದರಿಂದ ಶಾಲೆಗಳು ಹಾಗೂ ಪೋಷಕರು ಈ ಸೂಕ್ಷ್ಮ ಸನ್ನಿವೇಶಗಳನ್ನು ಬಹಳ ನಾಜೂಕಾಗಿ ನಿರ್ವಹಿಸಬೇಕಾಗುತ್ತದೆ.

ಚುನಾವಣೆ, ಜನಗಣತಿ, ಸಮೀಕ್ಷೆ, ವಿಪತ್ತು ನಿರ್ವಹಣೆ, ಜನ ಜಾಗೃತಿ ಹೀಗೆ ಯಾವುದೇ ಕೆಲಸಗಳು ಎದುರಾಗಲಿ, ಕೇಂದ್ರ ಸರಕಾರಕ್ಕಗಾಗಲಿ, ರಾಜ್ಯ ಸರಕಾರಗಳಿಗಾಗಿ ಮೊದಲು ನೆನಪಾಗುವುದು ದೇಶದ ಶಿಕ್ಷಕ ವೃಂದ. ಮರು ಮಾತಿಲ್ಲದೆ ತಮಗೆ ನೀಡಿದ ಹೆಚ್ಚುವರಿ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿಕೊಡುವ ಶಿಕ್ಷಕರು ಕೋವಿಡ್ ಗೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ಸರಕಾರಗಳು ಕೂಡ ಮರು ಮಾತಿಲ್ಲದೆ ಪರಿಹಾರ ಒದಗಿಸಿಕೊಟ್ಟರೆ, ಶಿಕ್ಷಕರ ಮನೋಬಲವು ಹಿಗ್ಗಲಿದೆ.

ಪ್ರತಿ ಜಿಲ್ಲೆಯಲ್ಲೂ  ಶಿಕ್ಷಕರಿಗೆ ಕೋವಿಡ್ ಕೇರ್ ಕೇಂದ್ರ ತೆರೆಯಬೇಕೆನ್ನುವ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಮನವಿಯನ್ನು ಮುಖ್ಯಮಂತ್ರಿಯವರು ಆದ್ಯತೆ ಮೇರೆಗೆ ಪರಿಗಣಿಸಬೇಕಿದೆ. ಕೇಂದ್ರ, ರಾಜ್ಯ ಸರಕಾರಗಳು ಕೆಲಸ, ಕಾರ್ಯಗಳಿಗೆ ಮಾತ್ರ ಸ್ಮರಿಸುವುದಲ್ಲ. ಆಪತ್ತಿನಲ್ಲಿರುವ ಶಿಕ್ಷಕರಿಗೆ ಆರೋಗ್ಯ ಸೇವೆ ಒದಗಿಸಿ ಉಳಿದ ಶಿಕ್ಷಕರ ಪ್ರಾಣ ಉಳಿಸಲು ತಕ್ಷಣವೇ ಸ್ಪಂದಿಸಬೇಕಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...