ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅತಿದೊಡ್ಡ ಫ್ಲೈಓವರ್ ಕಾಮಗಾರಿ ನಿಂತು ಹೋಗಿದೆ. ಈಜಿಪುರ ಫ್ಲೈಓವರ್ ನಿರ್ಮಾಣವಾದ್ರೆ ಸಾಕು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತೆ ಅಂತ ಜನರು ಕಾಯ್ತಿದ್ರು. ಆದ್ರೀಗ ಕೆಲಸವೇ ನಿಂತು ಹೋಗ್ತಿದ್ದು, ಟ್ರಾಫಿಕ್ ಸಮಸ್ಯೆ ಕೂಡ ದೊಡ್ಡ ತಲೆನೋವಾಗಲಿದೆ. ಆದ್ರೆ ಈಜಿಪುರ ಫ್ಲೈಓವರ್ ಕೆಲಸ ಆರಂಭವಾಗಿ ಹಲವು ವರ್ಷ ಕಳೆದಿದ್ರು, ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗ್ತಾಯಿತ್ತು, ಸದ್ಯ ಕಾಮಗಾರಿಯ ಟೆಂಡರ್ ಕ್ಯಾನ್ಸಲ್ ಆಗಿದೆ.
ಈಜಿಪುರ ಫ್ಲೈಓವರ್ ಕಾಮಗಾರಿ ಟೆಂಡರ್ ರದ್ದಾಗಿದ್ದು, ಬಿಬಿಎಂಪಿ ಹೊಸದಾಗಿ ಟೆಂಡರ್ ಕರೆಯುವ ಅನಿವಾರ್ಯತೆ ಎದುರಾಗಿದೆ. ಈಜಿಪುರ ಫ್ಲೈಓವರ್ ಕೆಲಸ 2017 ರಲ್ಲಿ ಆರಂಭವಾಗಿದ್ದು ನಿಗದಿಯಂತೆ 2019 ಮೇ ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅದ್ರೆ ಗುತ್ತಿಗೆ ಪಡೆದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿ 2022 ಮಾರ್ಚ್ವರೆಗೂ ಕೇವಲ 42 % ರಷ್ಟು ಕಾಮಗಾರಿ ನಡೆಸಿದ್ದು, ಈ ಹಿನ್ನಲೆ ಸಿಂಪ್ಲೆಕ್ಸ್ ಕಂಪನಿಗೆ ನೀಡಿದ್ದ ಟೆಂಡರ್ ರದ್ದು ಮಾಡಲಾಗಿದೆ.
ಹೀಗಾಗಿ ಶೀಘ್ರದಲ್ಲೆ ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೋರಮಂಗಲದ 100 ಫೀಟ್ ಮೈನ್ ರಸ್ತೆಯಿಂದ ಕೇಂದ್ರಿಯ ಸದನದವರೆಗೂ ಇರುವ ಫ್ಲೈ ಓವರ್ 2.4 ಕಿಲೋಮೀಟರ್ ಇದ್ದು ಸೋನಿ ಸಿಗ್ನಲ್ ಮಾರ್ಗವಾಗಿ ಹಾದು ಹೋಗಲಿದೆ. ನಗರದ ಎರಡನೇ ದೊಡ್ಡ ಫ್ಲೈ ಓವರ್ ಇದಾಗಿದ್ದು, ಫ್ಲೈ ಓವರ್ ನಿರ್ಮಾಣವಾದ್ರೆ ಈ ಭಾಗದ ಜನರಿಗೆ ಟ್ರಾಫಿಕ್ ನಿಂದ ಮುಕ್ತಿ ಸಿಗಲಿದೆ. ಆದಷ್ಟು ಬೇಗ ಫ್ಲೈಓವರ್ ಕಂಪ್ಲೀಟ್ ಮಾಡುವಂತೆ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಒತ್ತಾಯಿಸ್ತಾರೆ.
ಈ ಫ್ಲೈ ಓವರ್ ನಿರ್ಮಾಣಕ್ಕಾಗಿ ನಗರೋತ್ಥಾನ ಯೋಜನೆಯಡಿ 203.20 ಕೋಟಿ ಬಿಡುಗಡೆ ಮಾಡಲಾಗಿದ್ದು , 2021 ಸೆಪ್ಟೆಂಬರ್ ವರೆಗೂ 75.11 ಕೋಟಿ ಪಾವತಿ ಮಾಡಲಾಗಿದೆ. 2017 ರಿಂದ ಕೆಲಸ ಆರಂಭವಾದ್ರೂ ಆಮೆಗತಿಯಲ್ಲಿ ಕೆಲಸ ಸಾಗ್ತಾಯಿತ್ತು. ಹೀಗಾಗಿ ಬಿಬಿಎಂಪಿ ಸಿಂಪ್ಲೆಕ್ಸ್ ಕಂಪನಿಗೆ ಹಲವು ಬಾರಿ ನೋಟಿಸ್ ನೀಡಿತ್ತು. ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು, ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು. ಆದ್ರೂ ಕಾಮಗಾರಿಯಲ್ಲಿ ಯಾವುದೇ ಅಭಿವೃದ್ದಿ ಕಾಣದ ಹಿನ್ನಲೆ ಟೆಂಡರ್ ರದ್ದು ಮಾಡಲಾಗಿದೆ.
ನಿಯಮದ ಪ್ರಕಾರ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆ ರದ್ದುಪಡಿಸಲಾಗಿದೆ. ಇನ್ನೊಂದು ತಿಂಗಳಿನಲ್ಲಿ ಟೆಂಡರ್ ಕರೆದು ಫ್ಲೈ ಓವರ್ ಕಾಮಗಾರಿ ಶುರು ಮಾಡಲಾಗುವುದು ಎನ್ನುತ್ತಾರೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಲೋಕೇಶ್. ಸದ್ಯ ಹೊಸ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷಗಳ ಕಾಲ ಸಮಯ ಬೇಕಾಗುತ್ತದೆ.