ಕಳೆದ ಎರಡು ಮೂರು ದನಗಳಿಂದ ಸಿಎಂ ಸಿದ್ದರಾಮಯ್ಯ ಮತ್ತವರ ಪುತ್ರ ಯತೀಂದ್ರ ಅವರ ಬಗ್ಗೆ ವರ್ಗಾವಣೆ ಧಂದೆ ವಿಷಯವಾಗಿ ಆರೋಪ ಪ್ರತ್ಯಾರೋಪ ವಾಗ್ದಾಳಿಗಳು ನಡೆಯುತ್ತಿರುವ ಬೆನ್ನಲ್ಲೇ ಈ ಕುರಿತು ಮೊದಲ ಬಾರಿ ಮಾಧ್ಯಮಗಳೊಂದಿಗೆ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಹೌದು, ತಂದೆಯವರ ವಿಚಾರದಲ್ಲಿ ಕುಮಾರಸ್ವಾಮಿ ಏನೂ ಆರೋಪ ಮಾಡಲು ಆಗುತ್ತಿಲ್ಲ. ಹೀಗಾಗಿ ಕುಟುಂಬದವರನ್ನು ಬಳಸಿಕೊಂಡು ಅವರನ್ನು ಅಣಿಯುವ ಪ್ರಯತ್ನವನ್ನು ಇವರು ಮೊದಲಿನಿಂದಲೂ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತಾನಾಡಿದ ಅವರು, ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ನಾನು ಅವತ್ತು ಮಾತನಾಡಿರುವುದು ಸಿಎಸ್ಆರ್ ಫಂಡ್ ವಿಚಾರದ ಬಗ್ಗೆ. ಲಿಸ್ಟ್ ಎಂದ ಕೂಡಲೇ ಅದನ್ನು ವರ್ಗಾವಣೆಗೆ ಯಾಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಪ್ರಶ್ನಿಸಿದರು.
ಆರೋಪಗಳನ್ನು ಮಾಡುವಾಗ ದಾಖಲೆ ಇಟ್ಟು ಆರೋಪ ಮಾಡಲಿ. ದಾಖಲೆ ಇಲ್ಲದೇ ಸುಖಾಸುಮ್ಮನೆ ಆರೋಪ ಮಾಡಬೇಡಿ. ನಾನು ನನ್ನ ಪಾಡಿಗೆ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಎಲ್ಲಾ ವಿಚಾರದಲ್ಲಿ ನನ್ನ ಹೆಸರು ತರಬೇಡಿ. ನಮ್ಮ ಕ್ಷೇತ್ರದಲ್ಲಿ ಒಬ್ಬರು ಬಿಇಒ ವಿವೇಕಾನಂದ ಇದ್ದಾರೆ. ಇವತ್ತಿನ ವರ್ಗಾವಣೆ ಹೆಸರು ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿವೇಕಾನಂದ ಯಾರು? ಅದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದರ ವರ್ಗಾವಣೆ ಎಲ್ಲಿಗೆ ಆಗಿದೆ? ಆ ಕ್ಷೇತ್ರದ ವ್ಯಾಪ್ತಿ ಯಾವುದು? ಅದರ ಬಗ್ಗೆ ಕ್ಷೇತ್ರದ ಶಾಸಕರನ್ನ ಕೇಳಿಕೊಳ್ಳಿ. ಅದಕ್ಕೂ ನನಗೂ ಸಂಬಂದ ಇಲ್ಲ ಎಂದು ಹೇಳಿದ್ದಾರೆ.
ಇವರ ಅವಧಿಯಲ್ಲಿ ಲಿಸ್ಟ್ ಎಂದರೆ ವರ್ಗಾವಣೆ ಎಂದರೇ ಅದು ದಂಧೆಯಾಗಿತ್ತಾ? ಹಾಗಾದರೇ ಇವರ ಅವಧಿಯಲ್ಲಿ ಮಾಡಿದ ವರ್ಗಾವಣೆಯೆಲ್ಲಾ ದಂಧೆಯೇ? ಹಣ ಪಡೆದೇ ವರ್ಗಾವಣೆ ಮಾಡಿದ್ದಾರಾ? ಇವರ ಪತ್ನಿ, ಮಗ ಮತ್ತು ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಅವರ ಮೇಲೂ ನಾವೂ ಅದೇ ರೀತಿ ಮಾತನಾಡಲು ಆಗುತ್ತಾ?. ನನಗೆ ವರುಣ ಕ್ಷೇತ್ರದ ಜವಾಬ್ದಾರಿ ಇದೆ. ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಿಸಿದರೂ ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

ತಂದೆಯವರ ವಿಚಾರದಲ್ಲಿ ಕುಮಾರಸ್ವಾಮಿ ಏನೂ ಆರೋಪ ಮಾಡಲು ಆಗುತ್ತಿಲ್ಲ. ಹೀಗಾಗಿ ಕುಟುಂಬದವರನ್ನು ಬಳಸಿಕೊಂಡು ಅವರನ್ನು ಅಣಿಯುವ ಪ್ರಯತ್ನವನ್ನು ಇವರು ಮೊದಲಿನಿಂದಲೂ ಮಾಡುತ್ತಿದ್ದಾರೆ. ಯಾವುದರಲ್ಲಾದರೂ ಸಿಎಂ ಕುಟುಂಬವನ್ನು ಸಿಲುಕಿಸುವ ಯತ್ನ ನಡೆಸುವ ಮೂಲಕ ನೀಚ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.