ಇತ್ತೀಚೆಗೆ ನವದೆಹಲಿಯಲ್ಲಿ (New delhi) ಮದುವೆಯಾದ ಸ್ತ್ರೀಯರಿಗಾಗಿ ನಡೆದ ಸೌಂದರ್ಯ ಸ್ಪರ್ಧೆ ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್ – 2024 (Mrs India pride of nation 2024) ಕಿರೀಟವು ಕನ್ನಡತಿ ಡಾ. ಪ್ರಿಯಾ ಗೋಸ್ವಾಮಿಗೆ (Dr Priya goswamy) ಒಲಿದು ಬಂದಿದೆ. ನವದೆಹಲಿಯಲ್ಲಿ ಐದು ದಿನಗಳು ನಡೆದ ಅಂತಿಮ ಸುತ್ತಿನಲ್ಲಿ ಕರ್ನಾಟಕದ ಮದ್ದೂರಿನ ಡಾ. ಪ್ರಿಯಾ ಗೋಸ್ವಾಮಿ ಅವರು ಎಂಚಾಟಿಂಗ್ ವಿಭಾಗದ ಕಿರೀಟ ಗೆದ್ದು ಬೀಗಿದ್ದಾರೆ. ಜೊತೆಗೆ ಅದೇ ವೇದಿಕೆಯಲ್ಲಿ ಸೋಷಿಯಲ್ ಇನ್ಫ್ಲುಯೆನ್ಸರ್ ಗೌರವಕ್ಕೂ ಪಾತ್ರರಾಗಿದ್ದಾರೆ.

ವೃತ್ತಿಯಿಂದ ಪಶುಪಾಲನ ವೈದ್ಯರಾದ ಡಾ ಪ್ರಿಯಾ ಗೋಸ್ವಾಮಿ, ಮೂಲತಃ ಪಂಜಾಬಿಯಾದರೂ (Punjab) ಗೋವಾದಲ್ಲಿ ಬೆಳೆದವರು. ಕಳೆದ ಎರಡು ದಶಕಗಳಿಂದ ಮದ್ದೂರಿನ ನಿವಾಸಿಯಾಗಿ ಕನ್ನಡತಿಯಾಗಿದ್ದಾರೆ. ಭಾರತೀಯ ಸೇನೆಯಲ್ಲಿರುವ ಇವರ ಪತಿ ಕರ್ನಲ್ ಸಂಜೀತ್ ಮಂಡ್ಯ ಜಿಲ್ಲೆಯ ಮದ್ದೂರಿನವರು.
ಮದ್ದೂರಿನ (Maddur ) ಎಚ್ ಕೆ ವೀರಣ್ಣಗೌಡ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಬಿ ಸಿದ್ದೇಗೌಡ ಅವರ ಪುತ್ರರಾದ ಕರ್ನಲ್ ಸಂಜೀತ್, ಪ್ರಸ್ತುತ ಉತ್ತರಖಾಂಡ್ ನಲ್ಲಿ ಭಾರತೀಯ ಸೇನೆಯ ಕುದುರೆ ತರಬೇತಿ ವಿಭಾಗದ ಡೆಪ್ಯೂಟಿ ಕಮಾಂಡೆಂಟ್ ಆಗಿದ್ದಾರೆ. ಪಶು ವೈದ್ಯರಾಗಿರುವ ಡಾ. ಪ್ರಿಯಾ ಕೂಡ ಭಾರತೀಯ ಸೇನೆಯ ಕೆಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
16 ವರ್ಷದ ಮಗಳು ಧ್ರುವಿ ಸಂಜಿತ್ ಹಾಗೂ 9 ವರ್ಷದ ಮಗ ಶೌರ್ಯಗೌಡ, ಮಾವ ಸಿದ್ದೇಗೌಡ, ಅತ್ತೆ ಸುಮಿತ್ರಮ್ಮ ಅವರ ಸಹಕಾರ ಹಾಗೂ ಪತಿ ಕರ್ನಲ್ ಸಂಜಿತ್, ನಾದಿನಿ ಸುಪ್ರೀತಾ ಅವರ ಪ್ರೋತ್ಸಾಹವೇ ಈ ಯಶಸ್ಸಿಗೆ ಕಾರಣ ಎಂದು ಡಾ. ಪ್ರಿಯಾ ಗೋಸ್ವಾಮಿ ಸಂತಸ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದ ನಿರ್ದೇಶಕರಾದ ಭಾರ್ಕಾ ನಂಗಿಯಾ ಮತ್ತು ಅಭಿಷೇಕ್ ಅವರ ಸಲಹೆಗಳೇ ಗೆಲುವಿಗೆ ದಾರಿ ತೋರಿಸಿದವು ಎಂದು ಸ್ಮರಿಸಿದ್ದಾರೆ.