ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪಥಿ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದು, ಮೊದಲ ಚಿತ್ರಕ್ಕೆ 21 ಕೋಟಿ ರೂ. ಸಂಭಾವನೆ ಪಡೆದು ಯಾವುದೇ ಸ್ಟಾರ್ ನಟನಿಗೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ.
ಶಾರೂಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ವಿಜಯ್ ಸೇತುಪಥಿ ಅಭಿನಯಿಸುತ್ತಿದ್ದಾರೆ. ಪೋಸ್ಟರ್ ಮತ್ತು ಟೀಸರ್ ಮೂಲಕ ಭಾರೀ ಕುತೂಹಲ ಮೂಡಿಸಿರುವ ಈ ಚಿತ್ರ ವರ್ಷದ ಕೊನೆಯಲ್ಲಿ ಬಿಡುಗಡೆ ಆಗಲಿದೆ.
ಜವಾನ್ ಚಿತ್ರದಲ್ಲಿ ಶಾರೂಖ್ ಖಾನ್ ಜೊತೆ ತಮಿಳು ಚಿತ್ರದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾದ ನಯನತಾರಾ ಮೊದಲ ಬಾರಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟರಾಗಿರುವ ವಿಜಯ್ ಸೇತುಪಥಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ವಿಜಯ್ ಸೇತುಪಥಿ ಸಾಮಾನ್ಯವಾಗಿ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ಇದೇ ಮೊದಲ ಬಾರಿ ಇಷ್ಟು ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಕಮಲ್ ಹಾಸನ್ ನಟಿಸಿದ ವಿಕ್ರಂ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ವಿಜಯ್ ಈ ಚಿತ್ರದ ಯಶಸ್ಸಿನ ನಂತರ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾರೂಖ್ ಜೊತೆಗಿನ ಈ ಚಿತ್ರಕ್ಕಾಗಿ ವಿಜಯ್ ಸೇತುಪಥಿ ಎರಡು ಸಿನಿಮಾಗಳನ್ನು ಕೈಬಿಟ್ಟಿದ್ದಾರಂತೆ. ಈ ಚಿತ್ರದಲ್ಲಿ ಅವರ ಪಾತ್ರ ಅತ್ಯಂತ ಪ್ರಭಾವಿಯಾಗಿದ್ದು, ಬಿಡಲು ಉದ್ದೇಶವಿಲ್ಲದೇ ಜವಾನ್ ಚಿತ್ರಕ್ಕೆ ಓಕೆ ಎಂದಿದ್ದಾರೆ ಎಂದು ಹೇಳಲಾಗಿದೆ.