ಮೇಕೆದಾಟು ಯೋಜನೆ: ಮತ್ತೆ ‘ಕಾವೇರಿ’ಸಿದ ಸಮಿತಿ ರಚನೆ, ಸಿಎಂ ನಿರ್ಧಾರದತ್ತ ಎಲ್ಲರ ಚಿತ್ತ

ಕಾವೇರಿ ನದಿಯಲ್ಲಿ ಹರಿಯುವ ನೀರಿನ ಮೇಲೆ ಅಧಿಕಾರ ಸ್ಥಾಪನೆಗೆ ನಿರಂತರವಾಗಿ ಪ್ರಯತ್ನಿಸುತ್ತಿರುವ ಪಕ್ಕದ ತಮಿಳುನಾಡು ಸರಕಾರ, ಇದೀಗ ಕರ್ನಾಟಕದ ಭಾಗದಲ್ಲಿ ನಡೆಯುತ್ತಿರುವ ಮೇಕೆದಾಟು ಯೋಜನೆಗೆ ಮತ್ತೊಮ್ಮೆ ಕೊಕ್ಕೆ ಹಾಕಲು ಹೊರಟಿದೆ.
“ನಮ್ಮ ಸರಕಾರ ಈ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಿದೆ. ಕರ್ನಾಟಕದ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ’ ಎಂದು ತಮಿಳುನಾಡು ಸರಕಾರ ಹೇಳಿದೆ. ಆ ಮೂಲಕ ಅಲ್ಲಿನ ಹೊಸ ಸರಕಾರವೂ ಈ ಹಿಂದಿನ ಸರಕಾರದ ಹಾದಿಯಲ್ಲೇ ಸಾಗಿದ್ದು, ಕಾವೇರಿ ನದಿ ನೀರಿನ ರಾಜಕೀಯ ಲಾಭ ತೆಗೆದುಕೊಳ್ಳುವ ಅವಕಾಶವನ್ನು ಮತ್ತೆ ಸೃಷ್ಟಿಸಿಕೊಂಡು ಬಾಚಿಕೊಳ್ಳಲಾರಂಭಿಸಿದೆ.


ಅಕ್ರಮ ಪರಿಶೀಲನೆಗೆ ಸಮಿತಿ ರಚಿಸಿದ ಎನ್.ಜಿ.ಟಿ:
ತಮಿಳುನಾಡಿನ ನೂತನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು, ಮೇಕೆದಾಟು ವಿಷಯದಲ್ಲಿ ಖಡಕ್ಕಾಗಿ ಕ್ಯಾತೆ ತೆಗೆಯಲು ಆರಂಭಿಸಿರುವುದರ ಹಿಂದೆ ಕಾರಣವೂ ಇದೆ. ಮೇಕೆದಾಟುವಿನಲ್ಲಿ ಅಕ್ರಮ ನಿರ್ಮಾಣ ನಡೆಯುತ್ತಿದ್ದು, ಅದರ ಬಗ್ಗೆ ಪರಿಶೀಲಿಸಿ ಜುಲೈ 5 ರೊಳಗೆ ವರದಿ ಸಲ್ಲಿಸುವಂತೆ ಪತ್ರಿಕೆಯೊಂದರ ವರದಿಯನ್ನು ಆಧರಿಸಿ ಒಂದು ದಿನದ ಹಿಂದಷ್ಟೇ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು (ಎನ್.ಜಿ.ಟಿ) ಜಂಟಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯಲ್ಲಿ ಕೇಂದ್ರ ಪರಿಸರ ಸಚಿವಾಲಯದ ಬೆಂಗಳೂರು ಕಚೇರಿ, ಕಾವೇರಿ ಮೇಲುಸ್ತುವಾರಿ ಪ್ರಾಧಿಕಾರ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ/ಸದಸ್ಯರು ಇರಬೇಕೆಂದು ಸೂಚಿಸಿತ್ತು.


ನ್ಯಾ,ಕೆ.ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ಕೆ.ಸತ್ಯಗೋಪಾಲ್ ಅವರಿದ್ದ ಪೀಠವು, ಕೇಂದ್ರ ಪರಿಸರ ಸಚಿವಾಲಯ, ಜಲಸಂಪನ್ಮೂಲ ಸಚಿವಾಲಯ, ಕೇಂದ್ರದ ಜಲ ಆಯೋಗ, ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳಿಂದ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದೆ.
“ಮೇಕೆದಾಟುವಿನಲ್ಲಿ ಕರ್ನಾಟಕ ನಿಯಮ ಉಲ್ಲಂಘಿಡಿ ಅಣೆಕಟ್ಟು ಕಟ್ಟುತ್ತಿದೆ. ಇದರ ವಿರುದ್ಧ ತಮಿಳುನಾಡು ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ವಿವಾದ ಸುಪ್ರೀಂ ಅಂಗಳದಲ್ಲಿರುವುದರಿಂದ ಕಾವೇರಿ ನದಿ ನೀರು ಪ್ರಾಧಿಕಾರವು ಎರಡು ಸಲ ಈ ಪ್ರಸ್ತಾಪ ಅಂಗೀಕರಿಸದೆ ತಿರಸ್ಕರಿಸಿದೆ. ಆದರೂ ಕರ್ನಾಟಕವು ಅನುಮತಿ ಪಡೆಯದೇ ಯೋಜನೆಯನ್ನು ಜಾರಿಗೊಳಿಸುತ್ತಿದೆ” ಎಂದು ದಿನಪತ್ರಿಕೆಯೊಂದು ಮಾಡಿರುವ ವರದಿಯನ್ನು ಎನ್.ಜಿ.ಟಿ. ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು.


ಪತ್ರಿಕಾ ವರದಿ ಪರಿಶೀಲಿಸಿದ ಬಳಿಕ ನಮಗೆ ಯೋಜನೆಯಿಂದ ಪರಿಸರದ ಮೇಲೆ ಪರಿಣಾಮವಾಗಬಹುದಾಗಿರುವುದು ಮನವರಿಕೆ ಆಗಿದೆ. ಹೀಗಾಗಿ ನಾವು ಮಧ್ಯ ಪ್ರವೇಶಿಸುತ್ತಿದ್ದೇವೆ ಎಂದು ಹೇಳಿರುವ ನ್ಯಾಯಾಧೀಕರಣವು, ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆಯೇ ಅಥವಾ ನಿರ್ಮಾಣ ಕಾರ್ಯದ ವೇಳೆ ನಿಯಮಗಳ ಉಲ್ಲಂಘನೆಯಾಗುತ್ತಿದೆಯೇ? ಅಲ್ಲಿ ಅಕ್ರಮವಾಗಿ ನಿರ್ಮಾಣ ಚಟುವಟಿಕೆ ನಡೆಯುತ್ತಿದೆಯೇ ಎಂದು ಪರಿಶೀಲಿಸಿ ಜುಲೈ 5 ರೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಿದೆ.


ಅಲ್ಲದೆ, ಪತ್ರಿಕೆಯಲ್ಲಿ ವರದಿಯಾಗಿರುವಂತೆ ಸ್ಥಳದಲ್ಲಿ ಕಾಮಗಾರಿ ಶುರುವಾಗಿದೆಯೇ? ಪರಿಸರಕ್ಕೇನಾದರೂ ಹಾನಿಯಾಗಿದೆಯೇ ಎಂದು ಪರಿಶೀಲಿಸಲು ನ್ಯಾಯಾಧೀಕರಣವು ಸಮಿತಿಗೆ ನಿರ್ದೇಶನ ನೀಡಿದೆ.
ಈ ಬೆಳವಣಿಗೆಯಿಂದ ಹಿಗ್ಗಿರುವ ತಮಿಳುನಾಡು ಸರಕಾರವು ಕರ್ನಾಟಕದ ಈ ಯೋಜನೆಯ ವಿರುದ್ಧ ಕಿಡಿ ಕಾರಲಾರಂಭಿಸಿದೆ. ಆದರೆ ಕರ್ನಾಟಕ ಸರಕಾರವು ನೂತನ ಸಮಿತಿ ರಚಿಸುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ನಿರ್ಧಾರವನ್ನು ವಿರೋಧಿಸಿದೆ. ಕರ್ನಾಟಕದ ನ್ಯಾಯಾಧೀಕರಣ ವ್ಯಾಪ್ತಿಯಲ್ಲಿ ಮೇಕೆದಾಟುವಿನಲ್ಲಿ ನಡೆಯುತ್ತಿರುವ ಯೋಜನೆ ಪರಿಶೀಲನೆಗೆ ಚೆನ್ನೈ ಪೀಠವು ಸ್ವಯಂ ಪ್ರೇರಿತ ಸಮಿತಿಯನ್ನು ರಚಿಸಿರುವುದನ್ನು ರಾಜ್ಯದ ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಆಕ್ಷೇಪಿಸಿದ್ದು, ಇದರ ವಿರುದ್ಧ ಕಾನೂನು ಸಮರ ಸಾರುವುದಾಗಿ ಹೇಳಿದ್ದಾರೆ.


ಮೇಕೆದಾಟು ಯೋಜನೆಯು ಈಗಾಗಲೇ ಸುಪ್ರೀಂಕೋರ್ಟ್ ಅಂಗಳದಲ್ಲಿದೆ ಮತ್ತು ಈ ಯೋಜನೆಯ ನಿರ್ಮಾಣ ಕಾರ್ಯವು ರಾಜ್ಯದ ಕಾನೂನು ವ್ಯಾಪ್ತಿಯಲ್ಲಿ ನಡೆಯುತ್ತಿರುವುದರಿಂದ ನಾವು ಸಮಿತಿ ರಚಿಸಿದ್ದನ್ನು ವಿರೋಧಿಸುವುದಾಗಿ ಸಚಿವ ಬಸವರಾಜ್ ಬೊಮ್ಮಾಯಿ ವಿವರಿಸಿದ್ದಾರೆ.
ಸುಪ್ರೀಂ ಮೆಟ್ಟಿಲೇರಿರುವ ತಮಿಳುನಾಡು ಸರಕಾರ:
ಇನ್ನೊಂದೆಡೆ, ಕರ್ನಾಟಕ ಸರಕಾರದ ಯೋಜನೆಯನ್ನೇ ಅಕ್ರಮ ಎಂದು ಪರಿಗಣಿಸಿರುವ ತಮಿಳುನಾಡು ಸರಕಾರ, ಮೇಕೆದಾಟು ಅಣೆಕಟ್ಟೆ ನಿರ್ಮಾಣದ ವಿರುದ್ಧ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
‘ಇದು ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಮೇಕೆದಾಟುವಿನಲ್ಲಿ ಒಮ್ಮೆ ಅಣೆಕಟ್ಟೆ ಪೂರ್ಣಗೊಂಡರೆ ಕರ್ನಾಟಕವು ತಮ್ಮ ಪಾಲಿನ ಕಾವೇರಿ ನದಿ ನೀರನ್ನು ಕೊಡುವುದಿಲ್ಲ. ಕಾವೇರಿ ನದಿ ಪಾತ್ರಗಳ ರಾಜ್ಯಗಳ ಒಪ್ಪಿಗೆ ಇಲ್ಲದೆ ಅಣೆಕಟ್ಟು ನಿರ್ಮಿಸುವುದು ಕಾನೂನಿಗೆ ವಿರುದ್ಧ’ ಎಂಬಿತ್ಯಾದಿ ವಾದಗಳನ್ನು ಇಟ್ಟುಕೊಂಡು ತಮಿಳುನಾಡು ಸರಕಾರವು ಕರ್ನಾಟಕ ಸರಕಾರದ ವಿರುದ್ಧ ಸುಪ್ರೀಂಕೋರ್ಟ್ ಅಂಗಳದಲ್ಲಿ ಕಾನೂನು ಸಮರ ಸಾರಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಬಗ್ಗೆ, ಮೇಕೆದಾಟು ಯೋಜನೆಯ ಭವಿಷ್ಯದ ಹಾದಿಯ ಬಗ್ಗೆ ಚರ್ಚಿಸಲು ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೂ ಕಾನೂನು ತಜ್ಞರ ಸಭೆ ನಡೆಸಲು ನಿರ್ಧರಿಸಿದ್ದಾರೆ.


ಅಣೆಕಟ್ಟು ನಿರ್ಮಿಸುವ ಜಾಗ ಎಲ್ಲಿದೆ?
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಒಂಟಿಗುಂಡ್ಲು ಮತ್ತು ಹನೂರು ಅರಣ್ಯ ವಲಯದ ಎರಡು ಬೆಟ್ಟಗಳ ನಡುವೆ, ಮೇಕೆದಾಟು ಎಂಬಲ್ಲಿ ಹರಿದುಹೋಗುತ್ತಿರುವ ಕಾವೇರಿ ನದಿಗೆ ಈ ಅಣೆಕಟ್ಟು ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿತ್ತು. ಆರಂಭದಲ್ಲಿ 5 ಸಾವಿರ ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿತ್ತು. ಇದೀಗ ಈ ಯೋಜನೆಯ ವೆಚ್ಚ 9 ಸಾವಿರ ಕೋಟಿ ರೂ.ಗಳು ಎಂದು ಲೆಕ್ಕಹಾಕಲಾಗುತ್ತಿದೆ.

ಪ್ರವಾಸಿ ಸ್ಥಳವಾಗಿಯೂ ಮೇಕೆದಾಟು ಜನಪ್ರಿಯ:
ಮೂಲತಃ ಮೇಕೆದಾಟು ಎಂಬುದು ದಶಕಗಳಿಂದಲೂ ಒಂದು ಪ್ರವಾಸಿ ಸ್ಥಳವಾಗಿ ಜನಪ್ರಿಯವಾಗಿದೆ. ಬೆಂಗಳೂರಿನ ಟೆಕ್ಕಿಗಳಿಗಂತೂ ವಾರಾಂತ್ಯದ ಮೋಜಿನ ಸ್ಥಳ. ರಭಸವಾಗಿ ಹರಿಯುವ ಕಾವೇರಿ ನದಿಯು ಇಲ್ಲಿನ ಬಂಡೆಗಳನ್ನು ಕೊರೆದು ಮೂಡಿಸಿರುವ ವಿಚಿತ್ರ ಆಕಾರಗಳೇ ಇಲ್ಲಿನ ಆಕರ್ಷಣೆ. ಇಲ್ಲಿ ಬಂಡೆಗಳ ಅಂತರ ಸಣ್ಣಗಿದ್ದು, ಆಹಾರ ಮೇಯಲು ಈ ಭಾಗಕ್ಕೆ ಬರುವ ಮೇಕೆಗಳು ಇದೇ ಸ್ಥಳದಲ್ಲಿ ಒಂದು ದಡದಿಂದ ಇನ್ನೊಂದಕ್ಕೆ ದಾಟುತ್ತಿದ್ದವಂತೆ. ಆ ಕಾರಣಕ್ಕೆ ಇಲ್ಲಿಗೆ ಮೇಕೆದಾಟು ಎಂಬ ಹೆಸರು ಬದಿದೆ ಎಂಬ ಪ್ರತೀತಿ ಇದೆ. ರಜಾ ದಿನಗಳಲ್ಲಿ ಈ ಪ್ರವಾಸಿ ಕ್ಷೇತ್ರಕ್ಕೆ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ಕೊಡುವುದು ಸಾಮಾನ್ಯ.


ಏನಿದು ಮೇಕೆದಾಟು ಯೋಜನೆ?
ತಮಿಳುನಾಡಿನ ಪಾಲಿನ ನೀರು ಕೊಟ್ಟ ನಂತರವೂ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಬಳಸಲು ಕರ್ನಾಟಕ ಸರಕಾರ ಉದ್ದೇಶಿಸಿದ. ಕಾವೇರಿ ನೀರು ಹಾದುಹೋಗುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಎಂಬಲ್ಲಿ ಒಂದು ಕಿರು ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸುವುದು ಕರ್ನಾಟಕದ ಯೋಜನೆ. ಇಲ್ಲಿ ಕಟ್ಟಲಾಗುವ 441.2 ಮೀಟರ್ ಎತ್ತರದ ಅಣೆಕಟ್ಟೆಯಲ್ಲಿ 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸುವುದು, ಜತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ರಾಜ್ಯ ಸರಕಾರದ ಉದ್ದೇಶ. ನಿಜ ಹೇಳಬೇಕೆಂದರೆ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸುವುದು ಹಾಗೂ ಅಗತ್ಯ ಬಿದ್ದರೆ ಕೃಷಿಗೂ ಬಳಸುವುದು ಮೂಲ ಸದುದ್ದೇಶ.


ಬೆಂಗಳೂರು ನಗರಕ್ಕೆ ಕಾವೇರಿ ನೀರನ್ನು ಪೂರೈಸಲಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸದ್ಯ ಸುಮಾರು 1400 ದಶಲಕ್ಷ ಲೀಟರ್ ಕಾವೇರಿ ನೀರನ್ನು ಬೆಂಗಳೂರು, ರಾಮನಗರ ಸುತ್ತಮುತ್ತಲಿನವವರಿಗೆ ಕುಡಿಯುವ ನೀರು ಪೂರೈಕೆಗಾಗಿ ಸರಬರಾಜು ಮಾಡಲಾಗುತ್ತಿದ್ದು, 2030 ರ ವೇಳೆಗೆ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆ 2285 ದಶಲಕ್ಷ ಲೀಟರ್ ದಾಟಲಿದೆ ಎನ್ನುವುದು ತಜ್ಞರ ಲೆಕ್ಕಾಚಾರ. ತಮಿಳು ನಾಡಿಗೆ ಅದರ ಪಾಲಿನ 177 ಟಿಎಂಸಿ ನೀರನ್ನು ನೀಡಿದ ನಂತರ ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಮೇಕೆದಾಟುವಿನಲ್ಲಿ ಸಂಗ್ರಹಿಸಿದರೆ, ಆ ನೀರು ಸದ್ಬಳಕೆಯಾಗಲಿದೆ ಎನ್ನುವುದು ರಾಜ್ಯ ಸರಕಾರದ ಚಿಂತನೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ರಾಜ್ಯಕ್ಕೆ ಮೇಕೆದಾಟು ಯೋಜನೆ ಅತ್ಯವಶ್ಯವಾಗಿದೆ.

ಬೆಂಗಳೂರು, ರಾಮನಗರದ ಸುತ್ತಮುತ್ತಲಿನ ಜನರ ಶುದ್ಧ ಕುಡಿಯುವ ನೀರಿನ ಕನಸುಗಳಿಗೆ ಈ ಯೋಜನೆಯು ಜೀವ ತುಂಬಲಿ ಎಂದು ರಾಜ್ಯದ ಮಂದಿ ಹಂಬಲಿಸುತ್ತಿದ್ದರೆ, ಈ ಯೋಜನೆಯನ್ನು ಶಾಶ್ವತವಾಗಿ ಇತಿಹಾಸದ ಪುಟಗಳಿಗೆ ಸರಿಸಲು ತಮಿಳುನಾಡು ಸರಕಾರ ಪ್ರಯತ್ನವನ್ನು ಮುಂದುವರಿಸಿದೆ.
ಒಂದೆಡೆ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಈ ಯೋಜನೆಯು ಕಾನೂನು ಸಮರಕ್ಕೆ ಆಸ್ಪದ ನೀಡಿದ್ದರೆ, ಇನ್ನೊಂದೆಡೆ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು (ಎನ್.ಜಿ.ಟಿ) ಜಂಟಿ ಸಮಿತಿಯನ್ನು ರಚಿಸಿರುವುದು ಕರ್ನಾಟಕದ ಪಾಲಿಗೆ ಸವಾಲುಗಳನ್ನು ತಂದೊಡ್ಡಿದೆ. ಇಂದು ನಡೆಯಲಿರುವ ಕಾನೂನು ತಜ್ಞರ ಸಭೆ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಹೋರಾಟವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಲಿದ್ದಾರೆ ಎನ್ನುವುದು ತಿಳಿದುಬರಲಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...