ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ರಾಜೀನಾಮೆ ಪತ್ರ ವೈರಲ್ ಆಗಿದೆ. ಬಸವರಾಜ ಹೊರಟ್ಟಿ ಸಹಿ ಹಾಕದೆ ಇರುವ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ. ಉಪ ಸಭಾಪತಿ ಪ್ರಾಣೇಶ್ ಅವರಿಗೆ ಬರೆದಿರುವ ರಾಜೀನಾಮೆ ಪತ್ರ ಬಹಿರಂಗ ಆಗಿದೆ. ಏಪ್ರಿಲ್ 01 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ತಿರೋದಾಗಿ ಪತ್ರದಲ್ಲಿ ಉಲ್ಲೇಖ ಮmಾಡಲಾಗಿದೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಹೊರಟ್ಟಿ, ಇತ್ತೀಚಿನ ದಿನಗಳಲ್ಲಿ ಸದನ ನಡೆಸುವುದೇ ಕಷ್ಟವಾಗಿದೆ, ಸಭಾಪತಿ ಮಾತು ಯಾರೂ ಕೇಳ್ತಿಲ್ಲ. ಈ ಸ್ಥಾನದಲ್ಲಿ ಮುಂದುವರಿಯೋದ್ರಲ್ಲಿ ಅರ್ಥವಿಲ್ಲ ಎಂದಿದ್ದಾರೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ. ಅಧಿವೇಶನ ಸರಿಯಾಗಿ ನಡೆಸಲಿಲ್ಲ ಅನ್ನೋದಾದ್ರೆ ನಾವು ಅಯೋಗ್ಯರು ಅನಿಸುತ್ತದೆ. ನನಗೆ ಸದನ ನಡೆಸಲು ಶಕ್ತಿಯೇ ಇಲ್ಲ ಅನ್ನೋ ಭಾವನೆ ಬರ್ತಿದೆ. ಮುಖ್ಯವಾದ ಬಿಲ್ಗಳನ್ನು ಗದ್ದಲದಲ್ಲಿಯೇ ಕಳಿಸಲಾಗ್ತಿದೆ. ಪ್ಲ ಕಾರ್ಡ್ ತರಬಾರದು, ಘೋಷಣೆ ಕೂಗಬಾರದು ಎಂಬ ನಿಯಮವಿದೆ. ಸದನದಲ್ಲಿ ನನಗೆ 45 ವರ್ಷದ ಅನುಭವವಿದೆ. ಮೊನ್ನೆ 17 ನಿಮಿಷ ಸುಮ್ಮನೆ ಕುಳಿತಿದ್ದೆ. ನನಗೆ ತುಂಬಾ ನೋವಾಯಿತು ಎಂದಿದ್ದಾರೆ.

ಚಿಂತಕರ ಚಾವಡಿಗೆ ನಾನು ಸಭಾಪತಿ. ದೇಶಕ್ಕೆ ಮಾದರಿಯಾದ ಮೇಲ್ಮನೆ ಇದು. ಆದರೆ ನಾವು ಅಂದುಕೊಂಡಂತೆ ಸದನ ನಡೀತಿಲ್ಲ. ನಿಯಮದ ಪ್ರಕಾರ ನಡೆಸಲು ಆಗಲಿಲ್ಲ ಅಂದರೆ ಆ ಸ್ಥಾನದಲ್ಲಿ ಕುಳಿತುಕೊಳ್ಳೋದರಲ್ಲಿ ಅರ್ಥವಿಲ್ಲ. ನನ್ನ ತಲೆಯೊಳಗೆ ರಾಜೀನಾಮೆ ವಿಚಾರ ಬರ್ತಿದೆ. ಅಲ್ಲಿ ಕೂರಲು ಯೋಗ್ಯ ಇದೇನೋ ಇಲ್ಲವೋ ಅನ್ನೋ ಭಾವನೆ ಬರ್ತಿದೆ. ಈ ಬಗ್ಗೆ ಸ್ನೇಹಿತರ ಜೊತೆ ಚರ್ಚಿಸ್ತೇನೆ. ಅಮಾನತು ಮಾಡೋದು ಒಳ್ಳೆಯ ಸಂಪ್ರದಾಯವಲ್ಲ. ವಿಧಾನ ಪರಿಷತ್ನಲ್ಲಿ ಈ ರೀತಿ ಮಾಡಿಲ್ಲ. ವಿಧಾನಸಭೆಯಲ್ಲಿ ಆರು ತಿಂಗಳ ಕಾಲ ಹೊರಗೆ ಹಾಕಲಾಗಿದೆ. ಜಡ್ಜ್ಗೂ ನಮಗೂ ಬಹಳ ಅಂತರವಿಲ್ಲ. ಸ್ಪೀಕರ್ ಮೇಲೆ ಪೇಪರ್ ಎಸೆಯೋದು ಸರಿಯಲ್ಲ ಅಂತಾನೂ ತಿಳಿಸಿದ್ದಾರೆ.

ರಾಜೀನಾಮೆ ಪತ್ರ ಸಿದ್ಧಪಡಿಸಿರೋದು ಸತ್ಯ ಎಂದಿರುವ ಹೊರಟ್ಟಿ, ಸಹಿ ಇಲ್ಲದ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಹಿ ಮಾಡಿರೋ ರಾಜೀನಾಮೆ ಪತ್ರ ತಿಜೋರಿಯಲ್ಲಿ ಭದ್ರವಾಗಿದೆ ಎಂದಿದ್ದಾರೆ. ಮುಂದಿನ ದಿನದಲ್ಲಿ ರಾಜೀನಾಮೆ ನೀಡೋ ಬಗ್ಗೆ ನಿರ್ಧಾರ ಕೈಗೊಳ್ತೇನೆ. ನಾನು ರಾಜೀನಾಮೆ ನೀಡಬೇಕು ಅಂತ ತೀರ್ಮಾನ ಮಾಡಿದ್ದು ನಿಜ. ನನ್ನ ಕಚೇರಿಯಿಂದ ಅನ್ ಸೈನಡ್ ಲೇಟರ್ ಹೋಗಿದೆ. ಸಹಿ ಮಾಡಿರೋ ಪತ್ರ ನನ್ನ ಹತ್ರಾನೇ ಇದೆ. ಸದನದಲ್ಲಿ ಮೊನ್ನೆ ನಡೆದ ಘಟನೆ ಮನಸ್ಸಿಗೆ ಬಹಳ ನೋವಾಗಿದೆ. ಖುರ್ಚಿ ಆಸೆಗೆ ಕೂರೋದು ಸರಿಯಲ್ಲ ಅಂತ ಅನಿಸ್ತು. ನನ್ನ ಆಪ್ತರು ರಾಜೀನಾಮೆ ನೀಡಬೇಡಿ ಅಂತ ಒತ್ತಾಯ ಮಾಡ್ತಿದ್ದಾರೆ. ಕೆಲ ಸಚಿವರು, ಶಾಸಕರು ರಾಜೀನಾಮೆ ನೀಡದಂತೆ ಮನವಿ ಮಾಡಿದ್ದಾರೆ. ಅವರ ಭಾವನೆಗಳಿಗೂ ಗೌರವ ಕೊಡಬೇಕಾಗುತ್ತದೆ. ಹೀಗಾಗಿ ನಾನು ಸ್ವಲ್ಪ ವಿಚಾರ ಮಾಡ್ತೇನೆ ಎಂದಿದ್ದಾರೆ.