ದರ್ಶನ್ ಫ್ಯಾನ್ಸ್ ಯಾವತ್ತೂ ತಪ್ಪು ಮಾಡಲ್ಲ. ಕೆಲವರು ದರ್ಶನ್ ಹೆಸರಿಗೆ ಕಳಂಕ ತರುತ್ತಿದ್ದಾರೆ. ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ…. ಹೀಗೆ ಹೇಳಿದ್ದು, ಯುವ ನಟ ಚೇತನ್. ಚೇತನ್ ದೇವಿ ಎಂಬ ಸಿನಿಮಾಗೆ ಹೀರೋ. ಅವರು ಪಕ್ಕಾ ರೈತ. ರೈತ ಕೂಡ ಹೀರೋ ಆಗಬಾರದೇಕೆ ಅಂದುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ.

ಸಿನಿಮಾ ಪತ್ರಿಕಾಗೋಷ್ಠಿ ವೇಳೆ ಮಾತನಾಡುತ್ತಿದ್ದ ಚೇತನ್, ನಾನು ಪಕ್ಕಾ ಡಿ.ಬಾಸ್ ಅಭಿಮಾನಿ. ಅವರನ್ನು ನಾನು ಯಜಮಾನರು ಅಂತ ಕರೀತೀನಿ. ದರ್ಶನ್ ಅಭಿಮಾನಿಗಳು ಎಂದಿಗೂ ತಪ್ಪು ಮಾಡುವುದಿಲ್ಲ. ಸಿನಿಮಾ ಇಂಡಸ್ಟ್ರಿಗೆ ಬಂದಾಗಿನಿಂದಲೂ ನನಗೆ ಅನೇಕರು ಸಹಾಯ ಮಾಡುತ್ತಲೇ ಇದ್ದಾರೆ. ದರ್ಶನ್ ಫ್ಯಾನ್ಸ್ ಕೂಡ ನನ್ನ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆ. ನನ್ನ ಬಗ್ಗೆಯೇ ಅಷ್ಟೊಂದು ಪ್ರೀತಿ ಅವರಿಗೆ ಇದೆ. ಅಂದಮೇಲೆ, ದರ್ಶನ್ ಸರ್ ಮೇಲೆ ಇನ್ನೆಷ್ಟು ಪ್ರೀತಿ ಇದೆ ಅಂತ ತಿಳಿದುಕೊಳ್ಳಿ ಎಂದರು.

ದರ್ಶನ್ ಸರ್ ಅಭಿಮಾನಿಗಳು ಎಂದೂ ತಪ್ಪು ಮಾಡಲ್ಲ. ದರ್ಶನ್ ಸರ್ ತುಂಬಾ ಒಳ್ಳೆಯವರು. ಕೆಲ ಕಿಡಿಗೇಡಿಗಳ ಕೆಲಸವದು. ಬಾಸ್ ಫ್ಯಾನ್ಸ್ ಹಾಗೆ, ಹೀಗೆ ಅಂದ್ರೆ ಹೆಂಗೆ. ನಾನೂ ಫ್ಯಾನ್ ಅಲ್ವಾ. ನನಗೂ ಗೊತ್ತು ಅವರ ಫ್ಯಾನ್ಸ್ ಹೇಗೆ ಅನ್ನೋದು ಎಂದಿದ್ದಾರೆ.

ಅಂದಹಾಗೆ, ಯುವ ರೈತ ಚೇತನ್, ‘ದೇವಿ’ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಈ ಸಿನಿಮಾದ ಮುಹೂರ್ತ ನಡೆದಿದೆ. ಈ ಚಿತ್ರಕ್ಕೆ ಭವ್ಯಾ ಗೌಡ ನಾಯಕಿ. ಅಂದಹಾಗೆ, ಚೇತನ್, ಮನೆಯಲ್ಲಿ ಅವರ ತಾಯಿ ಡಬ್ಬಿಯಲ್ಲಿಟ್ಟಿದ್ದ 183 ರೂ. ಕದ್ದು ಬೆಂಗಳೂರಿಗೆ ಬಂದಿದ್ದರಂತೆ. ಆಗ ಡಿ.ಬಾಸ್ ನೋಡಿ ಹೀರೋ ಆಗಬೇಕು ಅಂತ ಅಸೆ ಇಟ್ಟುಕೊಂಡಿದ್ದರಂತೆ. ಹತ್ತು ವರ್ಷದಿಂದ ಸಿನಿಮಾ ಮಾಡಬೇಕು ಅಂತ ಓಡಾಡುತ್ತಿದ್ದೆ. ಆದರೆ, ಕಥೆ ವರ್ಕೌಟ್ ಆಗಲಿಲ್ಲ. ಈಗ ದೇವಿ ಕಥೆ ಓಕೆ ಆಗಿ, ಮಾಡುತ್ತಿದ್ದೇನೆ.

ಈ ಸಿನಿಮಾ ಮಾಡುವ ಮೊದಲು ನಾಯಕಿಯರ ಹುಡುಕಾಟ ಆಯ್ತು. ಒಂದಷ್ಟು ನಾಯಕಿಯರು ಯುವ ರೈತ ಹೀರೋನಾ? ಅವರು ದುಡ್ ಹಾಕ್ತಾರ, ಸಿನಿಮಾ ಮಾಡ್ತಾರಾ ಅಂತ ಅವಮಾನ ಮಾಡಿದ್ದೇ ಹೆಚ್ಚು. ಬಡವರ ಮಕ್ಕಳು ಬೆಳೀಬೇಕು ಅಂತ ಡಾಲಿ ಧನಂಜಯ ಹೇಳಿದ್ರು. ಯಾಕೆ ರೈತರ ಮಕ್ಕಳು ಹೀರೋ ಆಗಬಾರದಾ? ಹಲವರು ನನ್ನ ಕಣ್ಣಲ್ಲಿ ನೀರು ಹಾಕಿಸಿದ್ದಾರೆ. ಯಾವ ರೀತಿ ಅಂದ್ರೆ ಅದು ನೆಕ್ಸ್ಟ್ ಲೆವೆಲ್ ಬಿಡಿ. ಆಡಿಕೊಂಡವರ ಮುಂದೆ ಒಳ್ಳೇ ಸಿನಿಮಾ ಮಾಡ್ತೀನಿ. ಇದು ಚಿಕ್ ಬಜೆಟ್ ಅಲ್ಲ, ದೊಡ್ಡ ಬಜೆಟ್ ಸಿನಿಮಾ. ನನ್ನ ಬಗ್ಗೆ ಮಾತಾಡಿದ್ದು ದೊಡ್ಡ ನಾಯಕಿಯರೇನು ಅಲ್ಲ, ಒಂದೊಂದೇ ಸಿನಿಮಾ ಮಾಡಿದವರು. ರೈತ ಹೀರೋನಾ ಅಂತ ಮೂಗು ಮುರಿದವರೇ ಹೆಚ್ಚು. ಇರಲಿ, ಕೆಲಸ ಮಾಡಿ ತೋರಿಸುತ್ತೇನೆ ಎಂದಿದ್ದಾರೆ ಚೇತನ್.






