ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಸಂದೀಪ್ ಎಂಬುವರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಅವರನ್ನು ದರ್ಶನ್ ಅಭಿಮಾನಿಗಳು ಎನ್ನಲಾಗಿದ್ದು, ಸುಹಾಸ್, ವೇಣು ಮತ್ತು ಪುನೀತ್ ಬಂಧಿತರು. ಮೂವರು ಮೂಲತಃ ತುಮಕೂರಿನವರು. ಪುನೀತ್ ʻಡಿ-ಕಮ್ಯುನಿಟಿʼ ಫೇಸ್‌ಬುಕ್ ಪೇಜ್‌ನ ಅಡ್ಮಿನ್ ಅನ್ನೋದು ಬೆಳಕಿಗೆ ಬಂದಿದೆ.

ಸಾಕ್ಷ್ಯನಾಶಕ್ಕೆ ಸಂಚು ರೂಪಿಸಿದ ಈ ಅಭಿಮಾನಿಗಳ ಕೃತ್ಯದಿಂದ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಕಾನೂನು ಸಂಕಷ್ಟ ಮತ್ತು ಜೈಲು ವಾಸದ ಭೀತಿ ಇನ್ನಷ್ಟು ಹೆಚ್ಚಾದಂತಾಗಿದೆ.

ಎಂ.ಆರ್ ಪುನೀತ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿದಾರ. ರೇಣುಕಾಸ್ವಾಮಿ ಶವ ಬಿಸಾಡಲು ಮತ್ತೊಬ್ಬ ಸಾಕ್ಷಿ ಸಂದೀಪ್‌ಗೆ ಸ್ಕಾರ್ಪಿಯೋ ಕಾರು ಕೊಟ್ಟಿದ್ದೇ ಈ ಪುನೀತ್. ಶವ ಎಸೆದ ಬಳಿಕ ಕಾರನ್ನ ತೊಳೆಸಿದ್ದ. ಆ ಕಾರನ್ನ ದರ್ಶನ್‌ಗೆ ನೀಡಿದ್ದಾಗಿ, ಬಳಿಕ ರಕ್ತದ ಕಲೆ ತೊಳಿಸಿದ್ದಾಗಿಯೂ ಹೇಳಿಕೆ ನೀಡಿದ್ದ ಎನ್ನಲಾಗಿದೆ.

ಹಾಗಾಗಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದಿಲ್ಲ ಎಂದು ಹೇಳುವಂತೆ ಪುನೀತ್, ಸಂದೀಪ್‌ಗೆ ಒತ್ತಡ ಹೇರಿದ್ದ. ಈ ಬಗ್ಗೆ ಕೋರ್ಟ್‌ಗೆ ಸಂದೀಪ್ ಪ್ರಮಾಣ ಪತ್ರ ಸಲ್ಲಿಸಿದ್ದ. ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಇಂದು ಮೂವರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಯುತ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ. ಈ ಬಂಧನ ಕೊಲೆ ಪ್ರಕರಣದ ತನಿಖೆಗೆ ಹೊಸ ಆಯಾಮ ತಂದಿದೆ.






