ನಾಯಕಿ ಹರ್ಮನ್ ಪ್ರೀತ್ ಅರ್ಧಶತಕದ ಹೊರತಾಗಿಯೂ ಭಾರತ ತಂಡ 10 ರನ್ ಗಳಿಂದ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ವೀರೋಚಿತ ಸೋಲು ಕಾಣುವ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬೆಳ್ಳಿ ಪದಕ ಗಳಿಸಿದೆ.
ಬರ್ಮಿಂಗ್ ಹ್ಯಾಂನಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 8 ವಿಕೆಟ್ ಗೆ 161 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 19.3 ಓವರ್ ಗಳಲ್ಲಿ 152 ರನ್ ಗೆ ಆಲೌಟಾಯಿತು.
ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಭಾರತ ತಂಡಕ್ಕೆ ನಾಯಕಿ ಹರ್ಮನ್ ಪ್ರೀತ್ ಕೌರ್ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 65 ರನ್ ಬಾರಿಸಿ ತಂಡದಲ್ಲಿ ಭರವಸೆ ಮೂಡಿಸಿದರು. ಅದರಲ್ಲೂ ಜೆಮಿಯ ರೋಡ್ರಿಗಜ್ (33) ಜೊತೆ ಎರಡನೇ ವಿಕೆಟ್ ಗೆ 96 ರನ್ ಜೊತೆಯಾಟ ನಿಭಾಯಿಸಿದರು.
ಆದರೆ ನಂತರ ನಾಟಕೀಯ ಕುಸಿತ ಅನುಭವಿಸಿದ ಭಾರತ ಕೊನೆ ಗಳಿಗೆಯಲ್ಲಿ ಎಡವಿ ಸೋಲುಂಡು ಚೊಚ್ಚಲ ಕಾಮನ್ ವೆಲ್ತ್ ಕ್ರಿಕೆಟ್ ನಲ್ಲಿ ಚಿನ್ನದ ಪದಕ ಗಳಿಸುವ ಅವಕಾಶ ಕಳೆದುಕೊಂಡಿತು. ಆದರೂ ಬೆಳ್ಳಿ ಪದಕದೊಂದಿಗೆ ಗಮನ ಸೆಳೆಯಿತು.