ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ತಾಯಿ ತನ್ನ ಮಗನನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ನೆಟ್ಟಾರು ಹತ್ಯೆಯ ಕುರಿತು ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಬರೀ ಬೊಗಳೆ ಮಾತುಗಳೇ ಆಗಿದೆ ಎಂದು ಬಿಜೆಪಿ ರಾಜಕೀಯ ಮುಖಂಡರು ಮತ್ತು ಕಾರ್ಯರ್ತರಿಂದಲೇ ವ್ಯಾಪಕ ಪ್ರತಿಭಟನೆ ವ್ಯಕ್ರವಾಗಿದೆ.
“ನನಗೆ ಆರೋಗ್ಯ ಸರಿ ಇಲ್ಲ. ಅವನ ತಂದೆಯೂ ಹೃದ್ರೋಗಿ. ಅವನು ನಮಗೆ ಒಬ್ಬನೇ ಮಗ, ನಮಗಾಗಿ ಮನೆ ನಿರ್ಮಿಸಲು ಯೋಜಿಸಿದ್ದ, ಈಗ ಅದನ್ನು ಯಾರು ನಿರ್ಮಿಸುತ್ತಾರೆ? ನನ್ನ ಮಗನನ್ನು ಕೊಂದವರಿಗೆ ಶಿಕ್ಷೆಯಾಗಬೇಕು, ಅವರನ್ನು ಗಲ್ಲಿಗೇರಿಸಬೇಕು” ಎಂದು ರಾಜ್ಯ ಸರ್ಕಾರವನ್ನು ಪ್ರವೀಣ್ ನೆಟ್ಟಾರು ಅವರ ತಾಯಿ ಒತ್ತಾಯಿಸಿದ್ದಾರೆ.
ಬೆಳ್ಳಾರೆಯಲ್ಲಿ ಮಂಗಳವಾರ ಸಂಜೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಪ್ರವೀಣ್ ನೆಟ್ಟಾರು ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಹತ್ಯೆಯು ಸರ್ಕಾರದ ನಿರ್ಲಕ್ಷ್ಯದಿಂದಾಗಿರುವುದು ಎಂದು ದೂರಿದ ಬಿಜೆಪಿ ಯುವ ಕಾರ್ಯಕರ್ತರು, ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬಾಲಾಜಿ ಶ್ರೀನಿವಾಸ್ ಎಂಬ ಟ್ವಿಟ್ಟಿಗರು, “ನಾನು ಬಿಜೆಪಿ ಕಾರ್ಯಕರ್ತ, ಅತ್ಯಂತ ಅಸಮರ್ಥ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ನಾನು ಒತ್ತಾಯಿಸುತ್ತೇನೆ! ನೀವೂ ಒತ್ತಾಯಿಸಿ, ಇದು ನಮ್ಮ ಕಾರ್ಯಕರ್ತರೊಂದಿಗೆ ನಿಲ್ಲುವ ಸಮಯ.” ಎಂದಿದ್ದಾರೆ.
I’m a BJP karyakartha and I demand resignation of most inefficient Home Minister @JnanendraAraga ! RT if you demand too. Time to stand by our workers.
— Balaji Srinivas (@BalajiiSrinivas) July 27, 2022
ಇನ್ನು ಹಲವು ಟ್ವಿಟರ್ ಬಳಕೆದಾರರು ತಮ್ಮನ್ನು ಬಿಜೆಪಿ ಕಾರ್ಯಕರ್ತರು ಬೆಂಬಲಿಗರು ಎಂದು ಹೇಳಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ತಡರಾತ್ರಿ ತಮ್ಮ ಸರ್ಕಾರದ ಒಂದು ವರ್ಷವನ್ನು ಆಚರಿಸಲು ಯೋಜಿಸಿದ್ದ ಜನೋತ್ಸವ ಸಾಧನ ಸಮಾವೇಶ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.

ಏತನ್ಮಧ್ಯೆ, ಗೃಹ ಸಚಿವ ಆರಗ ಜ್ಞಾನೇಂದ್ರ, ತನಿಖೆ ನಡೆಯುತ್ತಿದೆ ಮತ್ತು ಅನೇಕರನ್ನು ಬಂಧಿಸಲಾಗಿದೆ. ನಮಗೆ PFI ಮತ್ತು SDPI ಮೇಲೆ ಅನುಮಾನವಿದೆ. ನಾನು ಯಾರ ಬಗ್ಗೆಯೂ ಪ್ರತಿಕ್ರಿಯಿಸಲಾರೆ… ಯಾರೇ ಆಗಿದ್ದರೂ ಪೊಲೀಸರು ಪತ್ತೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದರ ಜೊತೆ ಇಂದು ಸುಮಾರು 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮಾಡುವ ಕೆಲಸ ನಡೆಯುತ್ತಿದೆ. ಪ್ರವೀಣ್ ಮನೆ ಕೇರಳ ಗಡಿ ಭಾಗದಲ್ಲಿ ಇದೆ. ಅಲ್ಲಿಂದ ಇಲ್ಲಿಗೆ ಬಂದು ಏನೋ ಮಾಡಿ ಹೋಗೋದು ಬಹಳ ವರ್ಷಗಳಿಂದ ನಡೆಯುತ್ತಿದೆ. ಕೇರಳ ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಚಾರಣೆ ಮಾಡಿದರೆ ಮಾತ್ರ, ಕೊಲೆಗಡುಕರಿಗೆ ಶಿಕ್ಷೆ ಆಗುತ್ತದೆ ಎಂದು ಹೇಳಿದ್ದಾರೆ.
ಹೆಚ್ಚುತ್ತಿರುವ ಇಂತಹ ಆಂತರಿಕ ಪ್ರತಿಭಟನೆಗಳನ್ನು ಎದುರಿಸುತ್ತಿರುವ ಬಿಜೆಪಿಗೆ ಈ ವರ್ಷ ಬೆಂಗಳೂರು ನಾಗರಿಕ ಸಂಸ್ಥೆ (ಬಿಬಿಎಂ) ಚುನಾವಣೆ ಮತ್ತು 2023ರ ವಿಧಾನಸಭಾ ಚುನಾವಣೆ ದೊಡ್ಡ ಸವಾಲಾಗಬಹುದು.