ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಆತಂಕ ಸೃಷ್ಟಿಸಿದ ಮೊಸಳೆಯನ್ನ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅರಣ್ಯ ಇಲಾಖೆ,ಮೈಸೂರು ಮೃಗಾಲಯ, ಮೈಸೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮೊಸಳೆಯನ್ನು ಸೆರೆಹಿಡಿದಿದ್ದಾರೆ.
ರಾಮಾನುಜಾ ರಸ್ತೆಯ 9 ನೇ ಕ್ರಾಸ್ ಬಳಿ ಚರಂಡಿ ನೀರಿನಲ್ಲಿ ಕಳೆದ ಒಂದು ತಿಂಗಳಿಂದ ಹತ್ತಾರು ಬಾರಿ ಕಾಣಿಸಿಕೊಂಡಿದ್ದ ಮೊಸಳೆ ಸ್ಥಳೀಯರಿಗೆ ಆತಂಕ ಸೃಷ್ಟಿಸಿತ್ತು.ಕೆಲವು ದಿನಗಳ ಹಿಂದೆ ಕರುವೊಂದು ಮೊಸಳೆಗೆ ಆಹಾರವಾಗಿತ್ತು.
ಈ ಬಗ್ಗೆ ಸ್ತಳೀಯರು ಮೊಸಳೆಯನ್ನ ಸೆರೆ ಹಿಡಿಯುವಂತೆ ತೀವ್ರ ಒತ್ತಡ ಹೇರಿದ್ದರುಮತ್ತು ಅರಣ್ಯಾಧಿಕಾರಿಗಳು ನಡೆಸಿದ ಕೆಲವು ಪ್ರಯತ್ನಗಳು ವಿಫಲವಾಗಿದ್ದವು ಮತ್ತು ಚಳ್ಳೆಹಣ್ಣು ತಿನ್ನಿಸಿ ಸ್ಥಳೀಯರಿಗೆ ತೀವ್ರ ತಲೆಬಿಸಿಯನ್ನುಂಟು ಮಾಡಿತ್ತು.
ಗುರುವಾರ ಕಾರ್ಯಾಚರಣೆಯನ್ನ ತೀವ್ರಗೊಳಿಸಿದ ಸಿಬ್ಬಂದಿ ಮೊಸಳೆಯನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆ ಸಿಕ್ಕ ಮೊಸಳೆಯನ್ನ ಕಬಿನಿ ಜಲಾಶಯದಲ್ಲಿ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಶಾಸಕ ಎಸ್.ಎ.ರಾಮ್ದಾಸ್ ಹಾಗೂ ನಗರಸಭೆ ಸದಸ್ಯ ಭೇಟಿ ನೀಡಿ ಪರಿಶೀಲಿಸಿದ್ದರು.