ಕರೋನಾ ಸಾವು-ನೋವು: ವಾಸ್ತವಾಂಶಕ್ಕೂ ಅಧಿಕೃತ ಮಾಹಿತಿಗೂ ಅಜಗಜಾಂತರ!

ನರೇಂದ್ರ ಮೋದಿ ಅವರ ಸರ್ಕಾರದ ಅಧಿಕೃತ ಅಂಕಿಅಂಶಗಳು ಹೇಳುತ್ತಿರುವ 2.7 ಕೋಟಿ ಸೋಂಕಿತರು ಮತ್ತು 3.11 ಲಕ್ಷ ಮೃತರು ಎಂಬ ಅಂಕಿಅಂಶಗಳು ವಾಸ್ತವವಲ್ಲ. ಬದಲಾಗಿ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕನಿಷ್ಟವೆಂದರೂ 40 ಕೋಟಿ ಗಡಿದಾಟಿದೆ ಮತ್ತು ಮೃತರ ಪ್ರಮಾಣ ಕನಿಷ್ಟವೆಂದರೂ 6 ಲಕ್ಷ ದಾಟಿದೆ! ಆ ಅರ್ಥದಲ್ಲಿ ಕೋವಿಡ್ ಸಾವು-ನೋವಿನ ವಿಷಯದಲ್ಲಿ ಅಮೆರಿಕವನ್ನು ಹಿಂದಿಕ್ಕಿ ಭಾರತ ಈಗಾಗಲೇ ಜಾಗತಿಕ ಮಟ್ಟದಲ್ಲಿ ವಿಶ್ವಗುರುವಾಗಿದೆ!

ಒಟ್ಟು 137 ಕೋಟಿ ಜನಸಂಖ್ಯೆಯ ಭಾರತದಲ್ಲಿ ಹಳ್ಳಿ ಮೂಲೆಯ ಮನೆಮನೆಯಲ್ಲೂ ಕರೋನಾ ಸೋಂಕಿತರು ಬಳಲಿ ಬೆಂಡಾಗಿ ಮೂಲೆ ಹಿಡಿದಿರುವಾಗಲೂ ಸರ್ಕಾರದ ಅಧಿಕೃತ ಕೋವಿಡ್ ಪ್ರಕರಣಗಳ ಸಂಖ್ಯೆ ಕೇವಲ 2.71 ಕೋಟಿ! ಮತ್ತು ಬೀದಿಬೀದಿಗಳಲ್ಲಿ, ಊರೂರುಗಳಲ್ಲಿ ಕರೋನಾ ಹೆಣಗಳು ಉರುಳುತ್ತಿದ್ದರೂ ಕೋವಿಡ್ ಸಾವುಗಳ ಪ್ರಮಾಣ ಕೇವಲ 3.11 ಲಕ್ಷ ಎನ್ನುತ್ತದೆ ಸರ್ಕಾರ ಅಂಕಿಅಂಶ!!

ಭಾರತ ಸರ್ಕಾರದ ಇಂತಹ ನಂಬಲಸಾಧ್ಯ ಅಂಕಿಅಂಶಗಳು ವಾಸ್ತವವಲ್ಲ ಎಂಬುದಕ್ಕೆ ದೇಶದ ಮೂಲೆಮೂಲೆಯ ಸ್ಮಶಾನಗಳ ಮಾಹಿತಿಗಳೇ ಸಾಕ್ಷಿ. ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತಗಳು ನೀಡುವ ಕರೋನಾ ಪ್ರಕರಣಗಳು ಮತ್ತು ಸಾವುಗಳ ಲೆಕ್ಕಕ್ಕೂ, ಅದೇ ಹೊತ್ತಿಗೆ ಆಯಾ ವ್ಯಾಪ್ತಿಯ ಸ್ಮಶಾನಗಳಲ್ಲಿ ನಿತ್ಯ ನಡೆಯುವ ಶವ ಸಂಸ್ಕಾರಗಳ ಲೆಕ್ಕಕ್ಕೂ ಹತ್ತಾರು ಪಟ್ಟು ವ್ಯತ್ಯಾಸವಿರುವುದನ್ನು ಹಲವು ಮಾಧ್ಯಮ ವರದಿಗಳು ಈಗಾಗಲೇ ಬಹಿರಂಗಪಡಿಸಿವೆ. ಹಾಗೇ ಸ್ವತಃ ಭಾರತ ಸರ್ಕಾರದ ಅಧೀನದ ವೈದ್ಯಕೀಯ ಕಣ್ಗಾವಲು ಸಂಸ್ಥೆಯಾದ ಐಸಿಎಂಆರ್ ನಡೆಸಿದ ವಿವಿಧ ಹಂತದ ಮೂರು ಸೀರೋ ಸರ್ವೆಗಳು ಕೂಡ ಭಾರತದ ಅಧಿಕೃತ ಕೋವಿಡ್ ಅಂಕಿಅಂಶಗಳು, ವಾಸ್ತವಿಕ ಸೋಂಕು ಮತ್ತು ಸಾವಿನ ಪ್ರಕರಣಗಳಿಗಿಂತ ಹತ್ತಾರು ಪಟ್ಟು ಕಡಿಮೆ ಎಂದೇ ಹೇಳಿದ್ದವು. ಅದರಲ್ಲೂ ಆ ಸಮೀಕ್ಷೆಗಳು ನಡೆದದ್ದು ಮೊದಲ ಅಲೆಯ ವೇಳೆ ಮತ್ತು ಎರಡನೇ ಅಲೆ ಮೊದಲನೇ ಅಲೆಗಿಂತ ಹೆಚ್ಚು ವ್ಯಾಪಕ ಮತ್ತು ಸಾವುಗಳ ವಿಷಯದಲ್ಲಿ ಹೆಚ್ಚು ಭೀಕರ ಎಂಬುದನ್ನು ಗಣನೆಗೆ ತೆಗೆದುಕೊಂಡರೆ ಸೀರೋ ಸರ್ವೆಗಳ ಅಂದಾಜಿನಲ್ಲಿ ಇನ್ನೂ ಹತ್ತಾರು ಪಟ್ಟು ವ್ಯತ್ಯಯವಾಗಲಿದೆ.

ಇದೀಗ ‘ನ್ಯೂಯಾರ್ಕ್ ಟೈಮ್ಸ್’ ಕೂಡ ಭಾರತದ ಕೋವಿಡ್ ಅಂಕಿಅಂಶಗಳ ಸಾಚಾತನದ ಕುರಿತ ಜಾಗತಿಕ ಮಟ್ಟದ ತಜ್ಞರ ವಿಶ್ಲೇಷಣೆ ಆಧಾರಿತ ವರದಿ ಪ್ರಕಟಿಸಿದ್ದು, ಐಸಿಎಂಆರ್ ನ ಮೂರು ಸೀರೋ ಸರ್ವೆಗಳನ್ನೂ ಒಳಗೊಂಡಂತೆ ಹಲವು ಮೂಲಗಳ ಮಾಹಿತಿ ಮತ್ತು ಸರ್ಕಾರದ ಅಧಿಕೃತ ಅಂಕಿಅಂಶಗಳನ್ನು ತಾಳೆ ಹಾಕಿ ಮೂರು ಸಾಧ್ಯತೆಗಳನ್ನು ಮುಂದಿಟ್ಟಿದೆ.

ಭಾರತಕ್ಕಿಂತ ಹಲವು ಪಟ್ಟು ಹೆಚ್ಚು ಪರೀಕ್ಷೆ ನಡೆಸುವ ಮತ್ತು ಸಾವಿನ ಕುರಿತು ಪಕ್ಕಾ ಲೆಕ್ಕ ಇಡುವ ದೇಶಗಳೂ ಸೇರಿದಂತೆ ಜಗತ್ತಿನಾದ್ಯಂತ ಕೋವಿಡ್ ಸೋಂಕು ಮತ್ತು ಸಾವಿನ ಅಂಕಿಅಂಶಗಳು ವಾಸ್ತವ ಸಾವುನೋವಿಗಿಂತ ಹಲವು ಪಟ್ಟು ಕಡಿಮೆ ಇವೆ. ಅಂಕಿಅಂಶಗಳಿಗಿಂತ ಎರಡು ಮೂರು ಪಟ್ಟು ವಾಸ್ತವ ಸಾವುನೋವುಗಳು ಹೆಚ್ಚಿವೆ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ ಒ) ಹೇಳಿದೆ. ಎಲ್ಲವನ್ನೂ ಕರಾರುವಾಕ್ಕು ದಾಖಲಿಸುವ ದೇಶಗಳನ್ನೊಳಗೊಂಡ ಜಾಗತಿಕ ಅಂಕಿಅಂಶಗಳಲ್ಲೇ ಅಷ್ಟು ವ್ಯತ್ಯಾಸ ಇರುವಾಗ ಎಲ್ಲವನ್ನೂ ಮುಚ್ಚಿಡುವ, ಸುಳ್ಳು ಮಾಹಿತಿ ನೀಡಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಒಂದು ಆಡಳಿತವಿರುವ ಭಾರತದಲ್ಲಿ ಈ ವ್ಯತ್ಯಾಸ ಇನ್ನೆಷ್ಟು ಪಟ್ಟು ಇರಬಹುದು ಎಂಬುದು ಊಹೆಗೂ ನಿಲುಕದ್ದು. ಹಾಗೇ ಭಾರತದ ಸೀಮಿತ ವೈದ್ಯಕೀಯ ವ್ಯವಸ್ಥೆ, ಸೋಂಕು ಪತ್ತೆ ಪರೀಕ್ಷೆ ಮತ್ತು ಚಿಕಿತ್ಸೆಗಳಿಂದ ದೂರವೇ ಉಳಿವ ಬಹುತೇಕ ಗ್ರಾಮೀಣ ಜನಸಂಖ್ಯೆಯ ಕಾರಣದಿಂದಲೂ ವರದಿಯಾದ ಪ್ರಕರಣಗಳ ಹತ್ತಾರು ಪಟ್ಟು ವಾಸ್ತವಿಕ ಪ್ರಕರಣಗಳು ಇರುವ ಸಾಧ್ಯತೆ ಹೆಚ್ಚಿದೆ.

ಆ ಹಿನ್ನೆಲೆಯಲ್ಲೇ ಇದೀಗ ‘ನ್ಯೂಯಾರ್ಕ್ ಟೈಮ್ಸ್‘ ನಡೆಸಿದ ವಿಶ್ಲೇಷಣೆ ಗಮನ ಸೆಳೆಯುತ್ತಿದ್ದು, ಅದು ನೀಡಿರುವ ಮೂರು ಸಾಧ್ಯತೆಗಳ ವಿವರ ಇಲ್ಲಿದೆ.

ತೀರಾ ಕನಿಷ್ಟ ಲೆಕ್ಕಾಚಾರದ ಸಾಧ್ಯತೆ:

ಸೀರೋ ಸರ್ವೆ ಮತ್ತು ಸದ್ಯದ ಕೋವಿಡ್ ಪ್ರಕರಣ ಮತ್ತು ಸಾವಿನ ಕುರಿತ ಅಂಕಿಅಂಶಗಳ ಆಧಾರದ ಮೇಲೆ ಎರಡನೇ ಅಲೆಯ ಈ ಹೊತ್ತಿನಲ್ಲಿ ಸರ್ಕಾರದ ಅಧಿಕೃತ ಅಂಕಿಅಂಶಗಳ ಕನಿಷ್ಟ 15 ಪಟ್ಟು ವಾಸ್ತವಿಕ ಪ್ರಕರಣಗಳಿವೆ ಎಂದುಕೊಂಡರೆ, ಮೇ 24ರ ಮಾಹಿತಿಯಂತೆ 2.69 ಕೋಟಿ ಒಟ್ಟು ಕೋವಿಡ್ ಪ್ರಕರಣಗಳ ಪ್ರಮಾಣ ಸುಮಾರು 40.42 ಕೋಟಿಯಷ್ಟಾಗಲಿದೆ. ಸಾವಿನ ಪ್ರಮಾಣ ಕೂಡ ಮೇ 24ರ ಹೊತ್ತಿಗೆ 3 ಲಕ್ಷ ಇರುವ ಸಾವಿನ ಪ್ರಮಾಣ, ಕೂಡ ಸೋಂಕಿತರ ಪೈಕಿ ಶೇ.0.15 ಮಂದಿ ಸಾವಿಗೀಡಾಗಿದ್ದಾರೆ ಎಂಬ ಲೆಕ್ಕದಲ್ಲಿ ಬರೋಬ್ಬರಿ 6 ಲಕ್ಷದಷ್ಟಾಗುತ್ತದೆ. ಅಂದರೆ ತೀರಾ ಕನಿಷ್ಟ ಲೆಕ್ಕಾಚಾರದ ಪ್ರಕಾರ ನೋಡಿದರೂ, ಭಾರತದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ ಈಗಿನ ಸರ್ಕಾರಿ ಅಧಿಕೃತ ಲೆಕ್ಕಕ್ಕಿಂತ ಎರಡರಷ್ಟು!

ಆದರೆ, ದೇಶದ ವಾಸ್ತವಿಕ ಕರೋನಾ ಸಾವು-ನೋವುಗಳು ಅಷ್ಟು ಕನಿಷ್ಟ ಲೆಕ್ಕಾಚಾರದ ಮಿತಿಯಲ್ಲಿಲ್ಲ ಎಂಬುದನ್ನು ಎರಡನೇ ಅಲೆಯ ಭೀಕರತೆ ತೋರಿಸಿಕೊಟ್ಟಿದೆ. ತೀರಾ ಕುಗ್ರಾಮಗಳ ಮೂಲೆಮೂಲೆಯಲ್ಲೂ ಸೋಂಕು ವ್ಯಾಪಿಸಿ, ಬೀದಿ ಬೀದಿಯಲ್ಲೂ ಸಾವುಗಳು ಸಂಭವಿಸಿದ ಪ್ರಮಾಣ ನೋಡಿದರೆ, ಹೀಗೆ ಕನಿಷ್ಟ ಲೆಕ್ಕಾಚಾರಗಳ ಮಿತಿಗೆ ಸಿಗದಷ್ಟು ಅಗಾಧ ಸಾವು ನೋವು ಸಂಭವಿಸಿವೆ ಎಂಬುದನ್ನು ಅಲ್ಲಗಳೆಯಲಾಗದು.

ಬಹುತೇಕ ವಾಸ್ತವಿಕ ಸಾಧ್ಯತೆ:

ಎರಡನೇ ಅಲೆಯ ಸಾವು ನೋವಿನ ಭೀಕರತೆಯ ಹಿನ್ನೆಲೆಯಲ್ಲಿ ಮಾಡಲಾಗಿರುವ ಬಹುತೇಕ ವಾಸ್ತವಿಕತೆಗೆ ಸಮೀಪದ ಲೆಕ್ಕಾಚಾರಗಳ ಪ್ರಕಾರ, ಸರ್ಕಾರಿ ಅಧಿಕೃತ ಅಂಕಿಅಂಶಗಳಿಗಿಂತ ಸೋಂಕು ಪ್ರಮಾಣ ವಾಸ್ತವದಲ್ಲಿ ಸುಮಾರು 20 ಪಟ್ಟು ಹೆಚ್ಚಿರಬಹುದು ಎನ್ನಲಾಗುತ್ತಿದೆ(ಡಿಸೆಂಬರ್-ಜನವರಿಯಲ್ಲಿ ನಡೆದ ಇತ್ತೀಚಿನ ಸೀರೋ ಸರ್ವೆಯಲ್ಲಿ ವರದಿಯಾದ ಪ್ರತಿ ಪ್ರಕರಣಕ್ಕೆ 26 ವಾಸ್ತವಿಕ ಸೋಂಕು ಪ್ರಕರಣವಿರಬಹುದು ಎಂದು ಅಂದಾಜಿಸಲಾಗಿತ್ತು). ಆ ಪ್ರಕಾರ ನೋಡಿದರೆ, ಮೇ 24ರ ಹೊತ್ತಿಗೆ ದೇಶದ ಒಟ್ಟು ಕರೋನಾ ಪ್ರಕರಣಗಳ ಪ್ರಮಾಣ ಬರೋಬ್ಬರಿ 53.9 ಕೋಟಿಯಷ್ಟಾಗಲಿದೆ. ಅದಕ್ಕೆ ತಕ್ಕಂತೆ ಸೋಂಕಿತರ ಸಾವಿನ ಪ್ರಮಾಣ ಕೂಡ ಏರಿಕೆಯಾಗಿ ಶೇ.0.3ರಷ್ಟು ಮಂದಿ ಸಾವು ಕಂಡಿದ್ದಾರೆ ಎಂದು ಅಂದಾಜಿಸಿದರೂ, ಒಟ್ಟಾರೆ ಈವರೆಗಿನ ಸಾವಿನ ಪ್ರಮಾಣ 16 ಲಕ್ಷದಷ್ಟಾಗುತ್ತದೆ. ಅಂದರೆ ಈಗಿನ ಅಧಿಕೃತ ಸಾವಿನ ಪ್ರಮಾಣ(3 ಲಕ್ಷ)ಕ್ಕಿಂತ ಸುಮಾರು ಐದು ಪಟ್ಟು ಕರೋನಾ ಸಾವು ಸಂಭವಿಸಿರಬಹುದು ಎಂಬುದು ‘ನ್ಯೂಯಾರ್ಕ್ ಟೈಮ್ಸ್’ ನ ಎರಡನೇ ಅಂದಾಜು!

ತೀರಾ ಕೆಟ್ಟ ಪರಿಸ್ಥಿತಿಯ ಸಾಧ್ಯತೆ:

ಸೀರೋ ಸರ್ವೆಯ ಅಂದಾಜಿನಂತೆ ಸೋಂಕು ದೃಢಪಟ್ಟ ಪ್ರತಿ ವ್ಯಕ್ತಿಗೆ ಪ್ರತಿಯಾಗಿ ವಾಸ್ತವವಾಗಿ 26 ಮಂದಿಗೆ ಸೋಂಕು ತಗಲಿರಬಹುದು ಎಂಬುದನ್ನೇ ಗಣನೆಗೆ ತೆಗೆದುಕೊಂಡರೂ, ಸರ್ಕಾರದ ಅಧಿಕೃತ ಮಾಹಿತಿಯ ಸೋಂಕಿನ ಪ್ರಮಾಣ(2.69 ಕೋಟಿ)ಕ್ಕಿಂತ ಸುಮಾರು 26 ಪಟ್ಟು ವಾಸ್ತವಿಕ ಸೋಂಕು ಪ್ರಕರಣಗಳಿರಬಹುದು. ಅಂದರೆ, ದೇಶದಲ್ಲಿ ಸುಮಾರು 70 ಕೋಟಿ ಮಂದಿ ಈಗಾಗಲೇ ಸೋಂಕಿತರಾಗಿದ್ದಾರೆ! ಜೊತೆಗೆ ಆ ಪ್ರಮಾಣಕ್ಕೆ ತಕ್ಕಂತೆ ಸಾವಿನ ಪ್ರಮಾಣ ಕೂಡ ಏರಿಕೆಯಾಗಿ, ಸೋಂಕಿತರ ಪೈಕಿ ಶೇ.0.6 ಮಂದಿ ಸಾವು ಕಂಡಿದ್ದಾರೆ ಎಂದು ಅಂದಾಜಿಸಿದರೆ, ದೇಶದ ಕೋವಿಡ್ ಸಾವಿನ ಪ್ರಮಾಣ ಬರೋಬ್ಬರಿ 42 ಲಕ್ಷದಷ್ಟು ಆಘಾತಕಾರಿ ಪ್ರಮಾಣಕ್ಕೇರಲಿದೆ. ಅಂದರೆ ಈಗಿನ ಅಧಿಕೃತ ಪ್ರಮಾಣ(3 ಲಕ್ಷ)ಕ್ಕಿಂತ 13 ಪಟ್ಟು ಅಧಿಕ ಸಾವು ಸಂಭವಿಸಿವೆ ಎಂಬುದು ತಜ್ಞರ ವಿಶ್ಲೇಷಣೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

ಸೋಂಕಿತರ ಪ್ರಮಾಣ ಮತ್ತು ಸಾವಿನ ಕುರಿತ ಈ ಲೆಕ್ಕಾಚಾರಗಳನ್ನು ಕಳೆದ ಜನವರಿಗೆ ಮುಂಚೆ ಐಸಿಎಂಆರ್ ನಡೆಸಿದ ಮೂರು ಸೀರೋ ಸರ್ವೆಗಳ ಫಲಿತಾಂಶದ ಅಂಕಿಅಂಶಗಳು ಮತ್ತು ಅಂದಾಜುಗಳ ಮೇಲೆ ಮಾಡಲಾಗಿದೆ. ಹಾಗಾಗಿ ಎರಡನೇ ಅಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಸೋಂಕಿನ ಪ್ರಮಾಣ ಮತ್ತು ಅದಕ್ಕೆ ತಕ್ಕಂತೆ ಭಾರೀ ಏರಿಕೆ ಕಂಡ ಸಾವಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಲ್ಲಿ, ಸೋಂಕಿತರು ಮತ್ತು ಸತ್ತವರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಲಿದೆ. ಆ ಹಿನ್ನೆಲೆಯಲ್ಲಿ ಈಗ ತಾನು ಮಾಡಿರುವ ಈ ಅಂದಾಜುಗಳು ತೀರಾ ಕನಿಷ್ಟ ಎಂದೂ ಪತ್ರಿಕೆ ಹೇಳಿದೆ. ತನ್ನ ಈ ಅಂದಾಜು ವಿಶ್ಲೇಷಣೆಗಾಗಿ ಸಾಂಕ್ರಾಮಿಕ ರೋಗ ತಜ್ಞ ಡಾ ರಮಣನ್ ಲಕ್ಷ್ಮಿನಾರಾಯಣ್, ಡಾ ಪೌಲ್ ನೌಷಾದ್, ಡಾ ಶಿವೊಡಾ ಕಯಾಕೊ, ಡಾ ಜೆಫ್ರಿ ಶಾಮನ್, ಡಾ ವೇನ್ ಬರ್ಗರ್ ಮತ್ತಿತರ 12ಕ್ಕೂ ಹೆಚ್ಚು ತಜ್ಞರನ್ನು ಮಾತನಾಡಿಸಿದ್ದು, ಅವರುಗಳು ವಿವಿಧ ವೈದ್ಯಕೀಯ ಮತ್ತು ಸೋಂಕು ರೋಗ ಸಂಬಂಧಿ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಅಧ್ಯಯನಗಳ ಸಾರಾಂಶದ ಮೇಲೆ ಕೂಡ ಈ ಲೆಕ್ಕಾಚಾರಗಳನ್ನು ಮಾಡಲಾಗಿದೆ ಎಂದೂ ಹೇಳಲಾಗಿದೆ.

ಅಂದರೆ, ನರೇಂದ್ರ ಮೋದಿ ಅವರ ಸರ್ಕಾರದ ಅಧಿಕೃತ ಅಂಕಿಅಂಶಗಳು ಹೇಳುತ್ತಿರುವ 2.7 ಕೋಟಿ ಸೋಂಕಿತರು ಮತ್ತು 3.11 ಲಕ್ಷ ಮೃತರು ಎಂಬ ಅಂಕಿಅಂಶಗಳು ವಾಸ್ತವವಲ್ಲ. ಬದಲಾಗಿ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕನಿಷ್ಟವೆಂದರೂ 40 ಕೋಟಿ ಗಡಿದಾಟಿದೆ ಮತ್ತು ಮೃತರ ಪ್ರಮಾಣ ಕನಿಷ್ಟವೆಂದರೂ 6 ಲಕ್ಷ ದಾಟಿದೆ! ಆ ಅರ್ಥದಲ್ಲಿ ಕೋವಿಡ್ ಸಾವು-ನೋವಿನ ವಿಷಯದಲ್ಲಿ ಅಮೆರಿಕವನ್ನು ಹಿಂದಿಕ್ಕಿ ಭಾರತ ಈಗಾಗಲೇ ಜಾಗತಿಕ ಮಟ್ಟದಲ್ಲಿ ವಿಶ್ವಗುರುವಾಗಿದೆ!

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...