ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಪುತ್ರ ಸಚಿವ-ನಟ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ನೀಡಿರುವ ಕರೆ ಕಾಂಗ್ರೆಸ್ ಪಕ್ಷವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿದ್ದರೆ, ಇನ್ನು ಕೆಲವು ನಾಯಕರು ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಲು ಹಿಂಜರಿದಿದ್ದಾರೆ. ವಿಪಕ್ಷ ಒಕ್ಕೂಟಗಳಲ್ಲೇ ಈ ಹೇಳಿಕೆ ಅಸಮಾಧಾನವನ್ನು ಸೃಷ್ಟಿಸಿದೆ.
ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಪ್ರಬಲವಾದ ಆಯುಧವಾಗಿ ಉದಯನಿಧಿ ಹೇಳಿಕೆಯನ್ನು ಬಳಸಲು ಬಿಜೆಪಿ ಹವಣಿಸುತ್ತಿದ್ದು, ವಿಪಕ್ಷಗಳು ಹಿಂದೂಗಳ ನರಮೇಧಕ್ಕೆ ಕರೆ ನೀಡಿವೆ ಎಂಬರ್ಥದಲ್ಲಿ ಪ್ರಚಾರ ಮಾಡುತ್ತಿವೆ.

ಈ ನಡುವೆ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಅಭಿಪ್ರಾಯ ವ್ಯತ್ಯಾಸವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಅವರು ಎಲ್ಲಾ ಧರ್ಮಗಳನ್ನು ಗೌರವಿಸುವ ಅಗತ್ಯವನ್ನು ಒತ್ತಿಹೇಳಿದ್ದು, ಪ್ರತಿ ರಾಜಕೀಯ ಸಂಘಟನೆಯು “ತಮ್ಮ ಅಭಿಪ್ರಾಯಗಳನ್ನು (ಅಭಿವ್ಯಕ್ತಪಡಿಸಲು) ಸ್ವಾತಂತ್ರ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್ “ಎಲ್ಲರ ನಂಬಿಕೆಗಳನ್ನು ಗೌರವಿಸುತ್ತದೆ…” ಎಂದು ಅವರು ಹೇಳಿದ್ದಾರೆ.
ನಮ್ಮ ನಿಲುವು ಸ್ಪಷ್ಟವಾಗಿದೆ… ‘ಸರ್ವ ಧರ್ಮ ಸಮ ಭಾವ’ ಎಂಬುದು ಕಾಂಗ್ರೆಸ್ ಸಿದ್ಧಾಂತವಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ಮತ್ತೊಂದೆಡೆ ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಅವರು ಸ್ಟಾಲಿನ್ ಪುತ್ರನ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಇದು ಅವರ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು … ನಾನು ಉದಯನಿಧಿ ಸ್ಟಾಲಿನ್ ಅವರ ಮಾತುಗಳನ್ನು ಒಪ್ಪುವುದಿಲ್ಲ” ಎಂದು ಹೇಳಿದರು.
ಅದೇ ವೇಳೆ, ಕರ್ನಾಟಕದ ಸಚಿವರಾದ ಪ್ರಿಯಾಂಕ್ ಖರ್ಗೆ, ಹೆಚ್ ಸಿ ಮಹದೇವಪ್ಪ ಮೊದಲಾದವರು ಉದಯನಿಧಿ ಸ್ಟಾಲಿನ್ ಹೇಳಿಕೆಯಲ್ಲಿ ತಪ್ಪೇನಿಲ್ಲ ಎಂದಿದ್ದಾರೆ. ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗವೇ ಎಂದು ಖರ್ಗೆ ಹೇಳಿದ್ದಾರೆ.
“ಸಮಾನತೆಯನ್ನು ಉತ್ತೇಜಿಸದ ಯಾವುದೇ ಧರ್ಮ, ಅಥವಾ ಮನುಷ್ಯ ಎಂಬ ಘನತೆಯನ್ನು ಖಚಿತಪಡಿಸಿಕೊಳ್ಳದ ಯಾವುದೇ ಧರ್ಮವು ನನ್ನ ಪ್ರಕಾರ ಧರ್ಮವಲ್ಲ. ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮ ಕಾಯಿಲೆ ಇದ್ದಂತೆ” ಎಂದು ಖರ್ಗೆ ಹೇಳಿದ್ದಾರೆ.
ವಿಪಕ್ಷಗಳ ಮೈತ್ರಿಕೂಟದ ಸದಸ್ಯ ಪಕ್ಷವಾದ ಶಿವಸೇನೆ (ಉದ್ಧವ್ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಸನಾತನ ಧರ್ಮದ ಪರ ಬ್ಯಾಟ್ ಬೀಸಿದ್ದಾರೆ.
“ಸನಾತನ ಧರ್ಮ (ಎಂದು) ದೇಶದ ತಳಹದಿ. ಎಲ್ಲಾ ನಂಬಿಕೆಗಳು ಮತ್ತು ಗುರುತುಗಳ ಒಳಗೊಳ್ಳುವಿಕೆಗೆ. ಸನಾತನ ಧರ್ಮವು ಆತ್ಯಂತಿಕ ಸತ್ಯವನ್ನು ಪ್ರತಿನಿಧಿಸುತ್ತದೆ. ಸನಾತನವು ಬದುಕುವ ಮಾರ್ಗ, ಆತ್ಮಸಾಕ್ಷಿ ಮತ್ತು ಅಸ್ತಿತ್ವ. ಸನಾತನಿಗಳು ತಮ್ಮ ಗುರುತನ್ನು ಕೊನೆಗೊಳಿಸಲು ಬಂದ ಆಕ್ರಮಣಕಾರರ ದಾಳಿಯನ್ನು ದೀರ್ಘಕಾಲ ತಡೆದುಕೊಂಡಿದ್ದಾರೆ. ಸನಾತನ ಧರ್ಮದೊಂದಿಗೆ ಸಂಬಂಧ ಹೊಂದಿರುವ ದೇಶದ ತಳಪಾಯವು ಎಲ್ಲರನ್ನೂ ಒಳಗೊಳ್ಳುತ್ತದೆ,” ಅವರು ಟ್ವೀಟ್ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಸೇರಿದಂತೆ ಮೈತ್ರಿಕೂಟದ ಇತರ ಸದಸ್ಯರು ಈ ವಿಷಯದ ಬಗ್ಗೆ ಇನ್ನೂ ಮಾತನಾಡಿಲ್ಲ.
“ನಾವು ಜಾತಿ ಬಿಗಿತವನ್ನು ಮುಂದುವರಿಸುವ ‘ಸನಾತನ ಧರ್ಮ’ವನ್ನು ತೊಡೆದುಹಾಕಲು ಬಯಸುತ್ತೇವೆ. ಈ ಜಾತಿ ಶ್ರೇಣಿಯನ್ನು ಮುಂದುವರಿಸಲು ಅವರು ಬಯಸುತ್ತಾರೆ. ಡಿಎಂಕೆ ಪ್ರಗತಿಪರ ಪಕ್ಷವಾಗಿದ್ದು, ಈ ಪ್ರತಿಗಾಮಿ ವರ್ತನೆಗಳನ್ನು ತೊಡೆದುಹಾಕಲು ಬಯಸುತ್ತದೆ” ಎಂದು ಡಿಎಂಕೆ ಪಕ್ಷದ ನಾಯಕ ಸರವಣನ್ ಅಣ್ಣಾದೊರೈ ಅವರು ಉದಯನಿಧಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಉದಯನಿಧಿ ಹೇಳಿಕೆಯನ್ನು ಖಂಡಿಸಿದ ಅಮಿತ್ ಶಾ, ”ಇಂಡಿಯಾ ಮೈತ್ರಿಕೂಟವು “ಹಿಂದೂ ಧರ್ಮವನ್ನು ದ್ವೇಷಿಸುತ್ತದೆ” ಮತ್ತು ಇದು “ನಮ್ಮ ಸಂಸ್ಕೃತಿಯ ಮೇಲಿನ ದಾಳಿ” ಎಂದು ಹೇಳಿದ್ದಾರೆ. ಉದಯನಿಧಿ ಅವರು ವೋಟ್ ಬ್ಯಾಂಕ್ ಹಾಗೂ ತುಷ್ಟೀಕರಣ ರಾಜಕೀಯಕ್ಕಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಕಳೆದ ವಾರ ಚೆನ್ನೈನಲ್ಲಿ ನಡೆದ ಬರಹಗಾರರ ಸಮಾವೇಶವನ್ನು ಉದ್ದೇಶಿಸಿ ಉದಯನಿಧಿ ಸ್ಟಾಲಿನ್ ಅವರು “ಸನಾತನ ಧರ್ಮದ ಕಲ್ಪನೆಯು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿದ್ದರು.
ಬಿಜೆಪಿ ತನ್ನ ಹೇಳಿಕೆಯನ್ನು ತಿರುಚಿದ ತಪ್ಪು ಮಾಹಿತಿಯನ್ನು ಹರಡುತ್ತಿದೆ, ಸನಾತನ ಧರ್ಮ ಪಾಲಿಸುವವರನ್ನು ಕೊಲ್ಲಲು ನಾನು ಎಲ್ಲೂ ಕರೆ ಕೊಟ್ಟಿಲ್ಲ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕಂದಷ್ಟೇ ನಾನು ಕರೆ ಕೊಟ್ಟಿದ್ದೇನೆ, ನಾನು ಹೇಳಿದ ಹೇಳಿಕೆಗೆ ನಾನು ಬದ್ಧ, ತನ್ನ ವಿರುದ್ಧ ದಾಖಲಾಗಿರುವ ಯಾವುದೇ ಪ್ರಕರಣಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.