
ಬೀದರ್ನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡ ಇದೆ, ರಾಜೀನಾಮೆ ಕೊಡಬೇಕು ಅನ್ನೋದು ಬಿಜೆಪಿ ಆಗ್ರಹ. ಇದೇ ವಿಚಾರವಾಗಿ ಕಲಬುರಗಿಯಲ್ಲಿ ಬೃಹತ್ ಮೆರವಣಿಗೆ ಮಾಡಿ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನ ಮಾಡಿದ್ರು. ಆದರೆ ಇಷ್ಟು ದಿನಗಳ ಕಾಲ ಒಗ್ಗಟ್ಟಿನ ಮಂತ್ರ ಜಪಿಸಲು ಕಾಂಗ್ರೆಸ್ ನಾಯಕರು ಶುರು ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆಗೂ ಆತ್ಮಹತ್ಯೆ ಕೇಸ್ಗೂ ಯಾವುದೇ ಸಂಬಂಧ ಇಲ್ಲ. ವಿರೋಧ ಪಕ್ಷ ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ. ತನಿಖೆ ನಡೀತಿದೆ, ಆ ಬಳಿಕ ಎಲ್ಲಾ ಗೊತ್ತಾಗುತ್ತದೆ ಅಂತ ಸಮರ್ಥಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲ್ಲ, ಪ್ರಿಯಾಂಕ್ ಖರ್ಗೆ ಭವಿಷ್ಯದ ನಾಯಕ. ಅವರು ಒಂದು ಕರೆ ಕೊಟ್ಟರೆ ಬಿಜೆಪಿ ನಾಯಕರಿಗೆಲ್ಲ ನಾವು ಘೇರಾವ್ ಹಾಕ್ತೀವಿ. ಪ್ರಿಯಾಂಕ್ ಖರ್ಗೆ ಹಿಂದೆ ಲಕ್ಷಾಂತರ ಯುವಕರಿದ್ದಾರೆ. ಅವರ ವಿರುದ್ದ ಮಾತಾಡೋಕೆ ಬಿಜೆಪಿ ನಾಯಕರಿಗೆ ಧಮ್, ತಾಕತ್, ಶಕ್ತಿ ಇಲ್ಲ. ಬಿಜೆಪಿ ಹಾಗೂ RSS ವಿರುದ್ಧ ಮಾತಾಡಿದ್ದಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಪ್ರಿಯಾಂಕ್ ಖರ್ಗೆಯನ್ನು ಏನೂ ಮಾಡೋಕೆ ಆಗಲ್ಲ. ಪ್ರಿಯಾಂಕ್ ಖರ್ಗೆ ಪ್ರಭಾವಿ ಸಚಿವರು, ಬಹಳ ಬುದ್ಧಿವಂತರು. ತಪ್ಪು ಮಾಹಿತಿ ಕೊಟ್ಟು, ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಪ್ರಿಯಾಂಕ್ ಖರ್ಗೆ ಅವರನ್ನು ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಟೀಕಿಸಿದ್ದಾರೆ.
ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಬೀದರ್ನಲ್ಲಿ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ. ಹೋರಾಟ ಮಾಡೋಕೆ ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ರಾಜಕೀಯ ಪ್ರೇರಿತ ಹೋರಾಟವನ್ನು ಬಿಜೆಪಿ ಮಾಡುತ್ತಿದೆ. ಪ್ರಿಯಾಂಕ್ ಖರ್ಗೆಯವರ ಪಾತ್ರ ಇಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ. ಸಿಐಡಿ ತನಿಖೆ ಮಾಡ್ತಿದೆ, ವರದಿ ಬರುವವರೆಗೂ ಕಾಯುವ ತಾಳ್ಮೆ ಇಲ್ಲ. ಪ್ರತಿಯೊಂದರಲ್ಲೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅಪರಾಧ ಮಾಡುವವರು ಅವರೇ, ದೂರು ಕೊಡುವವರು ಅವರೇ. ತನಿಖೆನೂ, ತೀರ್ಪನ್ನೂ ನಾವೇ ಮಾಡ್ತೀವಿ ಅಂತಾ ವರ್ತಿಸುತ್ತಿದ್ದಾರೆ. ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು ಎಂದು ಬಿಜೆಪಿ ವಿರುದ್ಧ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ ರಾಜಕೀಯ ದ್ವೇಷದಿಂದ ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಡಿ.ಸುಧಾಕರ್, ಪ್ರಿಯಾಂಕ್ ಖರ್ಗೆ ಅವರು ದಕ್ಷತೆಯಿಂದ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗರು ಅಧಿಕಾರದಲ್ಲಿ ಇದ್ದಾಗ ಎಷ್ಟೊಂದು ಕರ್ಮಕಾಂಡ ಮಾಡಿದ್ದಾರೆ ಎಂದು ನೆನಪು ಮಾಡಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ತನಿಖೆ ಮಾಡಿಸುತ್ತಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಕೂಡಾ ತನಿಖೆಯಲ್ಲಿ ಬಯಲಾಗುತ್ತದೆ ಎಂದಿದ್ದಾರೆ. ಆದರೆ ಇಷ್ಟು ದಿನಗಳ ಸಿಎಂ ಸಿದ್ದರಾಮಯ್ಯ ಕೂಡ ಪ್ರಿಯಾಂಕ್ ಖರ್ಗೆ ಬಗ್ಗೆ ಮಾತನಾಡಿರಲಿಲ್ಲ. ಆದರೆ ಪ್ರಿಯಾಂಕ್ ಖರ್ಗೆ ದೆಹಲಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗೆ ಮಾತನಾಡಿದ ಬಳಿಕ ಅಲ್ಲಿಂದ ಸೂಚನೆ ಬಂದಿದೆ. ಅದೇ ಕಾರಣಕ್ಕೆ ಇವತ್ತು ಎಲ್ಲಾ ನಾಯಕರು ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಮಾತನಾಡ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಇವತ್ತಿನ ಬೆಳವಣಿಗೆ ನೋಡಿದಾಗ ಸತ್ಯವೇನೋ ಎನಿಸುವುದು ಸಹಜವಾಗಿದೆ.